ಕರಾವಳಿ

ಕುಂದಾಪುರ ಸರಕಾರಿ ಆಸ್ಪತ್ರೆ ವೈದ್ಯೆ ನಿರ್ಲಕ್ಷ್ಯಕ್ಕೆ ಬಲಿಯಾದ ಬಾಣಂತಿ?

Pinterest LinkedIn Tumblr

ಕುಂದಾಪುರ: ಹೆಣ್ಣು ಮಗುವನ್ನು ಹಡೆದ ಬಾಣಂತಿಯೊಬ್ಬರು ಸಾವನ್ನಪ್ಪಿದ‌ ಘಟನೆ ಭಾನುವಾರ ನಡೆದಿದ್ದು ಪ್ರಸೂತಿ ತಜ್ಞೆ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಮೃತರ ಕುಟುಂಬಿಕರು ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಮೊದಲಿಗೆ ಸಾಮಾನ್ಯ ಹೆರಿಗೆ ಆಗೋದಿಲ್ಲ ಬದಲಾಗಿ ಸಿಜೇರಿನ್ ಆಗಬೇಕೆಂದು ಸ್ಕ್ಯಾನಿಂಗ್ ವರದಿಯಲ್ಲಿ ಬಂದರೂ ಕೂಡ ಕುಂದಾಪುರ ಸರಕಾರಿ ಆಸ್ಪತ್ರೆಯ ಅದರಲ್ಲೂ ತಾಯಿ‌ ಮಕ್ಕಳ‌ ಆಸ್ಪತ್ರೆಯಾಗಿರುವ ವೈದ್ಯೆ ಸಾಮಾನ್ಯ ಹೆರಿಗೆ ಮಾಡಿಸಿದ ಬಳಿಕ ಬಾಣಂತಿಯು ಅತಿಯಾದ ರಕ್ತ ಸ್ರಾವದಿಂದ ಬಳಲಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ದ ಬಳಿಕ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ.

ಕುಂದಾಪುರ ಅಂಕದಕಟ್ಟೆಯ ನಿವಾಸಿ ಸುಧೀರ್ ದೇವಾಡಿಗ ಎನ್ನುವರ ಪತ್ನಿ ಸುಜಾತ(27) ಮೃತ ಬಾಣಂತಿ.

ಸುಜಾತಾ ಹಾಗೂ ಸುಧೀರ್ ದೇವಾಡಿಗ‌ ಎನ್ನುವರಿಗೆ ವರ್ಷಗಳ ಹಿಂದೆ ವಿವಾಹವಾಗಿದ್ದು ಅವರು ಗರ್ಭಿಣಿಯಾದ ನಂತರ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿಯೇ ರೆಗ್ಯುಲರ್ ತಪಾಸಣೆ ನಡೆಸಲಾಗಿತ್ತು. ಈ ವೇಳೆ ಸಾಮಾನ್ಯ ಹೆರಿಗೆ ಅಸಾಧ್ಯವೆಂದು ಸ್ಕ್ಯಾನಿಂಗ್ ವರದಿಯಲ್ಲಿದ್ದರೂ‌ ಕೂಡ ವೈದ್ಯೆ ಸಾಮಾನ್ಯ ಹೆರಿಗೆ ಆಗುವ ಭರವಸೆ ನೀಡಿದ್ದರೆಂದು ಕುಟುಂಬಿಕರು ಆಗ್ರಹಿಸಿದ್ದಾರೆ. ಡಿ.11ರಂದು ಹೆರಿಗೆಗಾಗಿ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರು. ಎರಡು ದಿನದ ಬಳಿಕ ಹೊಟ್ಟೆನೋವು ತಾಳಲಾರದೇ ಸಿಸೆರಿಯನ್ ಮಾಡಿಸಿ ಎಂದು ಗರ್ಭಿಣಿ ಸುಜಾತ ಪರಿಪರಿಯಾಗಿ ಕೇಳಿಕೊಂಡರೂ ಕೂಡಾ ವೈದ್ಯೆ ನಿರ್ಲಕ್ಷ್ಯತೋರಿದ್ದು, ಸಾಮಾನ್ಯ ಹೆರಿಗೆ ಮಾಡುವ ಧೈರ್ಯ ನೀಡಿ ಹೆರಿಗೆ ಮಾಡಿಸಿದ್ದು, ಸುಜಾತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಹೆರಿಗೆ ಬಳಿಕ ಬಾಣಂತಿಯು ವಿಪರೀತ ರಕ್ತಸ್ರಾವದಿಂದ ಅಸ್ವಸ್ಥರಾಗಿದ್ದು ಸುಜಾತ ಪ್ರಜ್ಞೆ ತಪ್ಪಿದ್ದಾರೆ.‌ಬಳಿಕ‌ ಸುಜಾತ‌ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು ಈ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಮೃತರಾಗಿದ್ದಾರೆ. ಮಣಿಪಾಲ‌ ಖಾಸಗಿ ಆಸ್ಪತ್ರೆಯಲ್ಲಿ ಲಕ್ಷಗಟ್ಟಲೇ ರೂ. ಬಿಲ್ ಆಗಿದ್ದು ಬಡ ಕುಟುಂಬ‌‌ ಅದನ್ನು ಕಟ್ಟಿ ಮೃತದೇಹ ತರಲು ಇನ್ನಿಲ್ಲದ ಹರಸಾಹಸ ಪಡುವಂತಾಗಿದೆ.

ವೈದ್ಯೆ ಮೇಲೆ ಆರೋಪ ಮಾಡಿರುವ ಮೃತ ಬಾಣಂತಿಯ ಕುಟುಂಬಿಕರು ಸದ್ಯ ನ್ಯಾಯಕ್ಕಾಗಿ ಹೋರಾಟಕ್ಕೆ ಸಜ್ಜಾಗಿದ್ದಾರೆ.

Comments are closed.