ಕರಾವಳಿ

ಬೈಂದೂರು ಪ್ರೊಬೇಷನರಿ ಪಿಎಸ್ಐ, ತಂಡದ ಕಾರ್ಯಾಚರಣೆ: ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಣೆ

Pinterest LinkedIn Tumblr

ಕುಂದಾಪುರ: ಭಟ್ಕಳ ಕಡೆಯಿಂದ ಕುಂದಾಪುರದತ್ತ ಲಾರಿಯಲ್ಲಿ‌‌ ಕೋಣಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕ ಖಚಿತ ಮಾಹಿತಿಯಂತೆ ಲಾರಿ ತಡೆದು ಅದರಲ್ಲಿದ್ದ 26 ಕೋಣಗಳನ್ನು ರಕ್ಷಿಸಿದ ಘಟನೆ ಮಂಗಳವಾರ ಬೆಳಿಗ್ಗೆ 10.45ರ ಸುಮಾರಿಗೆ ಯಡ್ತರೆ ಜಂಕ್ಷನ್ ಬಳಿ ನಡೆದಿದೆ. ಬೈಂದೂರು ಪ್ರೊಬೇಷನರಿ ಪಿಎಸ್ಐ ಇನೂಸ್ ಗಡ್ಡೇಕರ್ ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.

ಮಹಾರಾಷ್ಟ್ರ ಸಾಂಗ್ಲಿ ಮೂಲದ ದತ್ತಾ ಜಾದವ್ (31), ಯೂನಸ್ ಅಜೀಜ್ ಮುನಾವರ್ (44), ಕೇರಳದ ಕಣ್ಣೂರು ಮೂಲದ ಮುನಾಫ್ ಕುಂಞ(29) ಬಂಧಿತರು. 52 ಸಾವಿರ ರೂ. ಮೌಲ್ಯದ ಕೋಣಗಳನ್ನು ರಕ್ಷಿಸಿದ್ದು 10 ಲಕ್ಷ ಮೌಲ್ಯದ ಲಾರಿ ವಶಕ್ಕೆ ಪಡೆಯಲಾಗಿದೆ.

ಘಟನೆ ವಿವರ: ಪೊಲೀಸರಿಗೆ ಸಿಕ್ಕ ಖಚಿತ ಮಾಹಿತಿಯಂತೆ ಯಡ್ತರೆ ಬೈಪಾಸ್ ಬಳಿ‌ಯಲ್ಲಿ ಬಿಳಿ ಬಣ್ಣದ ಲಾರಿಯನ್ನು ಅಡ್ಡಗಟ್ಟಿದ್ದು ಅದರೊಳಗಿದ್ದ 26 ಕೋಣಗಳನ್ನು ಆರೋಪಿಗಳು ಮೇವು, ಬಾಯಾರಿಕೆ ನೀಡದೆ ಹಿಂಸಾತ್ಮಕವಾಗಿ ಉಸಿರು ಕಟ್ಟುವ ರೀತಿ ತುಂಬಲಾಗಿತ್ತು. ಆರೋಪಿಗಳಲ್ಲಿ ದಾಖಲಾತಿಗಳ ಬಗ್ಗೆ ವಿಚಾರಿಸಿದಾಗ 20 ಕೋಣಗಳ ಕ್ರಯ ಚೀಟಿ ಮಾತ್ರವೇ ಇದ್ದು ಉಳಿದ 6 ಕೋಣಗಳಿಗೆ ಯಾವುದೇ ಪರವಾನಿಗೆ ಇಲ್ಲದಿರುವುದು ತಿಳಿದುಬಂದಿದೆ. ಆರೋಪಿಗಳು ಈ 6 ಕೋಣಗಳನ್ನು ಎಲ್ಲಿಂದಲೋ ಕಳವುಗೈದು 20 ಕೋಣಗಳ ಜೊತೆ ತುಂಬಿಸಿಕೊಂಡು ಮಹಾರಾಷ್ಟ್ರದಿಂದ ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದರೆಂದು ಕಂಡುಬಂದಿದೆ.

ಹಿಂಸಾತ್ಮಕ ಸಾಗಾಟ, ಪರವಾನಿಗೆ ರಹಿತ ಅಕ್ರಮ ಗೋ‌ಸಾಗಾಟ ಮಾಡಿದ ಆರೋಪಿಗಳ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ, ಪ್ರಾಣಿ ಹಿಂಸೆ ನಿಷೇಧ ಕಾಯ್ದೆ ಜೊತೆಗೆ ಕಳ್ಳತನ ಪ್ರಕರಣ (ಐಪಿಸಿ‌ ಸೆಕ್ಷನ್ 379) ದಾಖಲಿಸಲಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.