ಕರಾವಳಿ

ಜನನ ಪೂರ್ವ ಲಿಂಗ ನಿರ್ಣಯ ತಡೆ: ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಸೂಚನೆ

Pinterest LinkedIn Tumblr

ಮಂಗಳೂರು ಡಿಸೆಂಬರ್ 3 : ಜಿಲ್ಲೆಯ ಗರ್ಭಿಣಿ ತಪಾಸಣೆ ಹಾಗೂ ಹೆರಿಗೆಯಾಗುವ ಆಸ್ಪತ್ರೆ ಮತ್ತು ಕ್ಲ್ಲಿನಿಕ್‍ಗಳಲ್ಲಿ ಗರ್ಭಿಣಿ ದಾಖಲಾತಿಯನ್ನು ಕಡ್ಡಾಯವಾಗಿ ನಿರ್ವಹಣೆ ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ ರಾವ್ ಹೇಳಿದರು.

ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಕಚೇರಿಯಲ್ಲಿ ಜನನ ಪೂರ್ವ ಲಿಂಗ ನಿರ್ಣಯ ತಡೆ ಕಾಯಿದೆ 1994ರ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತಾಡಿದರು.

ಪ್ರತಿ ತಿಂಗಳಲ್ಲಿನ ಸ್ಕ್ಯಾನಿಂಗ್ ಸೆಂಟರ್‍ಗಳ ಭೇಟಿ ನೀಡಿ ಪರಿಶೀಲನೆಯನ್ನು ಇನ್ನಷ್ಟು ತೀವ್ರಗೊಳಿಸಿ, ಜಿಲ್ಲಾ ಸಲಹಾ ಸಮಿತಿ ನಿರ್ಣಯದಂತೆ ಜಿಲ್ಲಾ ಸಕ್ಷಮ ಪ್ರಾಧಿಕಾರಿ ಜಿಲ್ಲಾಧಿಕಾರಿ ಅನುಮತಿಯ ಮೇರೆಗೆ ಎಲ್ಲಾ ತಾಲೂಕು ಆರೋಗ್ಯಧಿಕಾರಿಗಳು ಅವರವರ ವ್ಯಾಪ್ತಿಯಲ್ಲಿ ಬರುವ ಸ್ಕ್ಯಾನಿಂಗ್ ಸೆಂಟರ್‍ಗಳಿಗೆ ಭೇಟಿ ನೀಡಿ ಮೇಲ್ವಿಚಾರಣೆ ಮತ್ತು ಪರಿಶೀಲನೆ ನಡೆಸಬೇಕೆಂದು ಸಭೆಯಲ್ಲಿ ಸೂಚಿಸಲಾಯಿತು.

ಯಾವುದೇ ಸಂಸ್ಥೆಯು ತಮ್ಮಲ್ಲಿರುವ ಹಳೆಯ ಸ್ಕ್ಯಾನಿಂಗ್ ಯಂತ್ರಗಳನ್ನು ಸಕ್ಷಮ ಪ್ರಾಧಿಕಾರ ಅಥವಾ ಇಲಾಖೆಯ ಗಮನಕ್ಕೆ ತಾರದೇ ಅದನ್ನು ಮಾರಾಟ ಅಥವಾ ಯಾವುದೇ ಕಂಪನಿಗಳಿಗೆ ವಾಪಸ್ಸು ಮಾಡಬಾರದು. ಸಂಬಂಧಪಟ್ಟ ಸಮಿತಿಯ ಅನುಮತಿ ಇಲ್ಲದೇ ಇಂತಹ ನಿರ್ಣಯಗಳನ್ನು ಕೈಗೊಂಡಲ್ಲಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.

ಆಸ್ಪತ್ರೆಗಳಲ್ಲಿ ನಡೆಯುವ ಗರ್ಭಪಾತ ಪ್ರಕರಣಗಳ ಸತ್ಯಾಸತ್ಯತೆಯನ್ನು ಕಂಡು ಹಿಡಿಯುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿ, ಗರ್ಭಿಣಿಯರು ಯಾವುದೇ ವೈದ್ಯರಲ್ಲಿಗೆ ಬಂದು ಎಂ.ಟಿ.ಪಿ ಅಥವಾ ಗರ್ಭಪಾತ ಮಾಡಲು ಕೇಳಿಕೊಂಡಲ್ಲಿ, ಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಪ್ತ ಸಮಾಲೋಚಕರ ಮೂಲಕ ಸಮಾಲೋಚನೆಗಳನ್ನು ನಡೆಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲು ಸಭೆಯಲ್ಲಿ ಸೂಚಿಸಲಾಯಿತು.

ಲಿಂಗಾನುಪಾತ ಇಳಿಕೆಗೆ ಸಂಬಂಧಪಟ್ಟಂತೆ ಜಿಲ್ಲೆಯಾದ್ಯಂತ ಆರೋಗ್ಯ ಶಿಕ್ಷಣ ಜಾಗೃತಿ ಕಾರ್ಯಕ್ರಮಗಳನ್ನು ಗ್ರಾಮ ಪಂಚಾಯತ್ ಹಾಗೂ ತಾಲೂಕು ಮಟ್ಟದಲ್ಲಿ ಪರಿಣಾಮಕಾರಿಯಾಗಿ ನಡೆಸುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಸಿಖಂದರ್ ಪಾಷಾ, ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷೆ ಡಾ| ರಶ್ಮಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಹಾಗೂ ಸಲಹಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Comments are closed.