ಕರಾವಳಿ

ಹದಿಹರೆಯದವರು ಕ್ಲಿಷ್ಟಕರ ಸವಾಲು ಎದುರಿಸುತ್ತಿದ್ದಾರೆಃ ಮಂಗಳೂರು ಪೊಲೀಸ್ ಆಯುಕ್ತ ಪಿ.ಎಸ್.ಹರ್ಷ

Pinterest LinkedIn Tumblr

ಮಂಗಳೂರು :ಇಂದಿನ ಕಾಲದ ಹದಿಹರೆಯದವರು ಒಂದು ದಶಕಗಳ ಹಿಂದೆ ಯುವಜನತೆ ಎದುರಿಸುತ್ತಿದ್ದ ಸವಾಲುಗಳಿಂದ ವಿಭಿನ್ನ ವಾದ ಮತ್ತು ಕ್ಲಿಷ್ಟಕರವಾದ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಪಿ.ಎಸ್.ಹರ್ಷ ಅಭಿಪ್ರಾಯಪಟ್ಟಿದ್ದಾರೆ.

ಅವರು ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ದೀನ್ ದಯಾಳ್ ಉಪಾಧ್ಯಾಯ ಕೌಶಲ ಕೇಂದ್ರದಲ್ಲಿ ನೆಹರೂ ಯುವ ಕೇಂದ್ರ ವತಿಯಿಂದ ಆಯೋಜಿಸಲಾಗಿದ್ದ ಒಂದು ವಾರದ ಜೀವನ ಕೌಶಲ್ಯ ಶಿಕ್ಷಣ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಹತ್ತು ವರ್ಷಗಳ ಹಿಂದೆ ದತ್ತಾಂಶ ಮನನ ಮಾಡಿಕೊಳ್ಳುವುದು ಬಹುದೊಡ್ಡ ಸವಾಲಾಗಿತ್ತು. ಇಂದು ದತ್ತಾಂಶ ಸಮಸ್ಯೆ ಇಲ್ಲ. ಆದರೆ, ತಮಗೆ ಬೇಕಾಗಿರುವುದನ್ನು ಆಯ್ದುಕೊಳ್ಳುವುದು ಕೂಡ ಸವಾಲು. ಅದೇ ರೀತಿ ಹೊಸ ರೀತಿಯ ಸವಾಲುಗಳನ್ನು ಎದುರಿಸಬೇಕಾದ ಇಂದಿನ ಯುವಜನತೆ ಗುಣಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹರ್ಷ ನುಡಿದರು.

ಪಶ್ಚಿಮಘಟ್ಟದ ಅದ್ಭುತ ಪ್ರದೇಶದಲ್ಲಿ ವಾಸಿಸುವ ಅದೃಷ್ಟ ಹೊಂದಿರುವ ನೀವು ಪರಿಸರದಲ್ಲಿ ಇರುವ ಎಲ್ಲ ಜೀವ ಜಂತುಗಳು, ಸಸ್ಯ ಸಂಕುಲಗಳ ಬಗ್ಗೆ ಮಮತೆ ಹೊಂದಿರಬೇಕು. ನಮ್ಮ ಊರು ದೆಹಲಿಯ ಗ್ಯಾಸ್ ಚೇಂಬರಿನಂತೆ ಆಗಬಾರದು. ಜೀವನ ಕೌಶಲ್ಯದಲ್ಲಿ ಪರಿಸರ ಸಂರಕ್ಷಣೆಯೂ ಒಂದಾಗಿದೆ. ಪರಿಸರ ಸಂರಕ್ಷಣೆಗೆ ಕಾಳಜಿ ವಹಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಧ್ಯೇಯ ಧೋರಣೆ ಇರಿಸಿಕೊಂಡು ಕೆಲಸ ಮಾಡಿ ಎಂದು ಹರ್ಷ ಅವರು ಕಿವಿ ಮಾತು ಹೇಳಿದರು.

ನೀತಿ ಆಯೋಗದ ಶಿಫಾರಸಿನ ಮೇರೆಗೆ ಇದೇ ಮೊದಲ ಬಾರಿಗೆ ನೆಹರೂ ಯುವ ಕೇಂದ್ರ 9ರಿಂದ 18ರ ಹರೆಯದ ಮಕ್ಕಳ ಗುಣಾತ್ಮಕ ವಿಕಸನಕ್ಕಾಗಿ ಈ ವಿಶೇಷ ಶಿಬಿರ ಆಯೋಜಿಸಿದೆ. ಕೇಂದ್ರ ಸರಕಾರ ಯುವಜನ ವ್ಯವಹಾರ ಮತ್ತು ಕ್ರೀಡಾ ಇಲಾಖೆ ಅಧೀನದ ನೆಹರೂ ಯುವ ಕೇಂದ್ರ ಸಂಘಟನೆ ವತಿಯಿಂದ ಆಯೋಜಿಸಲಾದ ಜೀವನ ಕೌಶಲ್ಯ ಶಿಬಿರವನ್ನು ಮಂಗಳೂರಿನ ಸೆಂಟರ್ ಫಾರ್ ಇಂಟಗ್ರೇಟೆಡ್ ಲರ್ನಿಂಗ್ ಸಂಚಾಲಕ ನಂದಗೋಪಾಲ್ ಎಸ್. ಅವರು ಏಳು ದಿನಗಳ ಶಿಬಿರವನ್ನು ನಡೆಸಿಕೊಟ್ಟರು.

ಜೀವನದಲ್ಲಿ ಹತ್ತು ಹಲವು ಸವಾಲುಗಳನ್ನು, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವುಗಳನ್ನು ದಿಟ್ಟತನದಿಂದ ಎದುರಿಸಲು ಜೀವನ ಕೌಶಲ್ಯ ಅಗತ್ಯ. ಹದಿಹರೆಯಕ್ಕೆ ಕಾಲಿಡುವ ಮುನ್ನವೇ ಮಕ್ಕಳಿಗೆ ಜೀವನ ಕೌಶಲ್ಯ ಶಿಕ್ಷಣ ನೀಡಿ ನಕರಾತ್ಮನಕ ವಿಚಾರಗಳಿಂದ ದೂರು ಇರುವಂತೆ ಸಿದ್ಧಗೊಳಿಸುವುದು ಅಗತ್ಯವಿದೆ. ನೆಹರೂ ಯುವಕೇಂದ್ರ ಆಯೋಜಿಸಿರುವ ಇಂತಹ ಶಿಬಿರಗಳು ಅವರಿಗೆ ಹೆಚ್ಚಿನ ಪ್ರಯೋಜನಕಾರಿ ಆಗುತ್ತದೆ ಎಂದು ಸಮಾರಂಭದ ಮುಖ್ಯ ಅತಿಥಿ ಮಂಗಳೂರು ಮಹಾನಗರಪಾಲಿಕೆ ಕಂದಾಯ ಉಪ ಆಯುಕ್ತರಾದ ಗಾಯತ್ರಿ ನಾಯಕ್ ನುಡಿದರು.

ಭವಿಷ್ಯದಲ್ಲಿ ದೇಶದ ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸುವುದು ಅಗತ್ಯವಾಗಿದೆ ಎಂದು ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರವೀಣ್ ಮಾರ್ಟಿಸ್ ನುಡಿದರು.

ನೆಹರೂ ಯುವ ಕೇಂದ್ರ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕಾರರಾದ ರಘುವೀರ್ ಸೂಟರ್ ಪೇಟೆ ಅವರು ಜೀವನ ಕೌಶಲ್ಯ ಶಿಬಿರದ ಮಹತ್ವ ತಿಳಿಸಿದರು. ಇದೇ ಸಂದರ್ಭದಲ್ಲಿ ವಿಶ್ವ ಸಂಸ್ಥೆಯ ಸ್ವಯಂಸೇವಕರಾಗುವ ಬಗ್ಗೆ ಕೂಡ ಮಂಗಳೂರು ನೆಹರೂ ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ರಘುವೀರ್ ಸೂಟರಪೇಟೆ ಶಿಬಿರಾರ್ಥಿಗಳಿಗೆ ತಿಳಿಸಿದರು.

ಶಿಬಿರದಲ್ಲಿ ಭಾಗವಹಿಸಿದ ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.  ಕೇಂದ್ರ ಸರಕಾರವು ಹದಿಹರೆಯದ ಮಕ್ಕಳನ್ನು ಉದ್ದೇಶಿ ವಿಶೇಷ ಮುತುವರ್ಜಿಯಿಂದ ಆಯೋಜಿಸಿದ ಶಿಬಿರದಲ್ಲಿ ಟೀಂ ಬಿಲ್ಡಿಂಗ್, ಉತ್ತಮ ನಾಯಕತ್ವ, ಗುಣಾತ್ಮಾಕ ಚಿಂತನೆ, ಸಾರ್ವಜನಿಕ ಸಂವಹನ, ಹದಿಹರೆಯದವರ ಸಮಸ್ಯೆಗಳನ್ನು ಎದುರಿಸುವುದು, ವೃತ್ತಿ ಜೀವನ ಯೋಜನೆ ಇತ್ಯಾದಿಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಚಟುವಟಿಕೆಗಳ ಮೂಲಕ ತರಬೇತಿ ನೀಡಿದರು.

ಒಂದು ವಾರದ ಜೀವನ ಕೌಶಲ್ಯ ಶಿಬಿರ ತುಂಬಾ ಪ್ರಯೋಜನಕಾರಿಯಾಗಿತ್ತು ಎಂದು ಮಂಗಳೂರು ಸರಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಪ್ರತೀಕ್ಷಾ ಅಭಿಪ್ರಾಯಪಟ್ಟರು.

Comments are closed.