
ನಾಗ್ಪುರ್: ನಾಲ್ಕು ವರ್ಷದ ಪುಟ್ಟ ಮಗುವಿನ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ 35 ವರ್ಷದ ಯುವಕನನ್ನು ಸಾರ್ವಜನಿಕವಾಗಿ ನಗ್ನಗೊಳಿಸಿ ಮೆರವಣಿಗೆ ನಡೆಸಿದ ಘಟನೆ ಭಾನುವಾರ ರಾತ್ರಿ ಮಹಾರಾಷ್ಟ್ರ ನಾಗ್ಪುರದ ಪಾರ್ಡಿ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಜವಾಹರ್ ವೈದ್ಯನನ್ನು ಹಿಡಿದು ಥಳಿಸಿದ್ದ ಸ್ಥಳೀಯರು ನಂತರ ಆತನ ಎರಡು ಕೈಗಳನ್ನು ಕಟ್ಟಿಹಾಕಿ, ನಗ್ನಗೊಳಿಸಿ ಬೀದಿಯಲ್ಲಿ ಮೆರವಣಿಗೆ ಮಾಡಿಸಿದ ಬಳಿಕ ಪೊಲೀಸರಿಗೆ ಒಪ್ಪಿಸಿರುವುದಾಗಿ ವರದಿ ವಿವರಿಸಿದೆ.
ಜವಾಹರ್ ನಗರದಲ್ಲಿರುವ ಕೋ-ಆಪರೇಟಿವ್ ಸೊಸೈಟಿಯ ಪಿಗ್ಮಿ ಕಲೆಕ್ಷನ್ ಕೆಲಸ ನಿರ್ವಹಿಸುತ್ತಿದ್ದ. ದಿನಂಪ್ರತಿ ಮಗುವಿನ ಮನೆಗೆ ಪಿಗ್ಮಿ ಹಣ ಪಡೆಯಲು ಬರುತ್ತಿದ್ದ. ಅಂದು ಸಂಜೆ ಹೆಣ್ಣು ಮಗು ಒಬ್ಬಂಟಿಯಾಗಿರುವುದನ್ನು ಗಮನಿಸಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದ. ಆ ಸಂದರ್ಭಕ್ಕೆ ಸರಿಯಾಗಿ ತಾಯಿ ಮನೆಗೆ ವಾಪಸ್ ಆಗಿ, ಬೊಬ್ಬೆ ಹೊಡೆದಿದ್ದಳು. ಕೂಡಲೇ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದರು.
ಒಬ್ಬರಿದೊಬ್ಬರಿಗೆ ವಿಷಯ ಹರಿದಾಡುತ್ತಿದ್ದಂತೆಯೇ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಆಗಮಿಸಿ, ಆರೋಪಿ ಜವಾಹರ್ ನನ್ನು ಹಿಗ್ಗಾಮುಗ್ಗಾ ಥಳಿಸಿದ್ದರು. ನಗ್ನಗೊಳಿಸಿ ಮೆರವಣಿಗೆ ಮಾಡಿದ ನಂತರ ಪೊಲೀಸರಿಗೆ ಒಪ್ಪಿಸಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆ ಪ್ರಕಾರ ಜವಾಹರ್ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Comments are closed.