(ದುಷ್ಕರ್ಮಿಗಳಿಂದ ಹತ್ಯೆಗೀಡಾದ ಸುದರ್ಶನ್)
ಮಂಗಳೂರು, ಡಿಸೆಂಬರ್. 02 : ದುಷ್ಕರ್ಮಿಗಳ ತಂಡವೊಂದು ಯುವಕನೋರ್ವನ ಮೇಲೆ ತಲ್ವಾರ್ ದಾಳಿ ನಡೆಸಿ ಬರ್ಬರವಾಗಿ ಹತ್ಯೆಗೈದು ಬಳಿಕ ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಸಮೀಪದ ಕಾಪಿಕಾಡಿನಲ್ಲಿರುವ ಕೃಷಿ ಸಂಶೋಧನಾ ಕೇಂದ್ರದ ಎದುರುಗಡೆ ಎಸೆದು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.
ಬಂಧಿತ ಕೊಲೆ ಆರೋಪಿಯನ್ನು ರೌಡಿ ಡಿ.ಕೆ ರಕ್ಷಿತ್ ಎಂದು ಪೊಲೀಸರು ತಿಳಿಸಿದ್ದಾರೆ.
ರಕ್ಷಿತ್ ತನ್ನ ಸಹಚರರ ಜೊತೆ ಸೇರಿ ಕುಂಬ್ಳೆ ಪುತ್ತಿಗೆ ನಿವಾಸಿ ಸುದರ್ಶನ್(22) ಎಂಬ ಯುವಕನನ್ನು ಬೇರೆ ಸ್ಥಳದಲ್ಲಿ ಕೊಲೆ ಮಾಡಿ ನಂತರ ತೊಕ್ಕೊಟ್ಟು ಸಮೀಪದ ಕಾಪಿಕಾಡಿನಲ್ಲಿರುವ ಕೃಷಿ ಸಂಶೋಧನಾ ಕೇಂದ್ರದ ಎದುರುಗಡೆ ಎಸೆದು ಪರಾರಿಯಾಗಿದ್ದರು.
ಶುಕ್ರವಾರತ ಡರಾತ್ರಿ ಸುಮಾರು 10 ರಿಂದ 11 ಗಂಟೆ ಸುಮಾರಿಗೆ ಕೆಂಪು ಬಣ್ಣದ ಕಾರಿನಲ್ಲಿ ಬಂದ ಆರೋಪಿಗಳ ತಂಡ ಸುದರ್ಶನ್ ಶವವನ್ನು ಕಾಪಿಕಾಡು ಬಳಿಯಿರುವ ಕೃಷಿ ಸಂಶೋಧನಾ ಕೇಂದ್ರದ ಎದುರುಗಡೆ ಎಸೆದು ಪರಾರಿಯಾಗಿದ್ದರು.
ಬಳಿಕ ರೌಡಿ ರಕ್ಷಿತ್ ಸುದರ್ಶನ್ ಮೃತದೇಹವನ್ನು ಎಸೆದು ಹೋಗಿರುವ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಗೆ ಕರೆ ಮಾಡಿ ತಾನು ಹತ್ಯೆ ನಡೆಸಿರುವ ಬಗ್ಗೆ ತಿಳಿಸಿದ್ದಾನೆ ಎಂದು ವರದಿಯಾಗಿತ್ತು.
ಆರೋಪಿ ಭಾನುವಾರ ಸಂಜೆ ಎಸಿಪಿಯವರ ವಿಶೇಷ ಪೊಲೀಸ್ ತಂಡಕ್ಕೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಪ್ರೇಯಸಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಸುದರ್ಶನ್ ಆಕೆಯ ವೀಡಿಯೋ ಚಿತ್ರೀಕರಣ ನಡೆಸಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಆರೋಪಿ ಕೃತ್ಯ ಎಸಗಿದ್ದಾನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಈ ಪ್ರಕರಣವಲ್ಲದೆ ಆರೋಪಿ ಬೇರೆ ಎರಡು ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಠಾಣಾ ಪೊಲೀಸರಿಗೆ ಬೇಕಾಗಿದ್ದ ಎಂದು ತಿಳಿದುಬಂದಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.