ಕರಾವಳಿ

ತುಳು ಯಕ್ಷಗಾನ ಉಭಯ ಅಕಾಡೆಮಿಗಳ ಜವಾಬ್ದಾರಿ: ದಯಾನಂದ ಕತ್ತಲ್ಸಾರ್

Pinterest LinkedIn Tumblr

ಯಕ್ಷಾಂಗಣದಿಂದ ನುಳಿಯಾಲು ಕಿಟ್ಟಣ್ಣ ಶೆಟ್ಟಿ ಸಂಸ್ಮರಣೆ

ಮಂಗಳೂರು: ‘ ತುಳು ಯಕ್ಷಗಾನದ ವಿಚಾರದಲ್ಲಿ ತುಳು ಅಕಾಡೆಮಿ ಆರಂಭದಿಂದಲೂ ತುಂಬಾ ಕಾಳಜಿಯಿಂದ ಕೆಲಸ ಮಾಡಿದೆ. ಆದರೆ ಯಕ್ಷಗಾನಕ್ಕೆ ಬೇರೆಯೇ ಒಂದು ಅಕಾಡೆಮಿ ಇರುವುದರಿಂದ ಅಲ್ಲಿಯೂ ಅದಕ್ಕೆ ಮಾನ್ಯತೆ ದೊರೆಯಬೇಕು. ಯಕ್ಷಗಾನಕ್ಕೆ ಸಂಬಂಧಿಸಿದ ಪ್ರಶಸ್ತಿ ,ಗ್ರಂಥ ಪ್ರಕಟನೆ ಇತ್ಯಾದಿಗಳಲ್ಲಿ ತುಳು ಯಕ್ಷಗಾನಕ್ಕೂ ನ್ಯಾಯ ಸಿಗಬೇಕು. ಇದು ಉಭಯ ಅಕಾಡೆಮಿಗಳ ಜವಾಬ್ದಾರಿ’ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ ಹೇಳಿದ್ದಾರೆ.

ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಇವರು ಮಂಗಳೂರು ವಿ‌.ವಿ. ಡಾ.ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ನಗರದ ವಿಶ್ವವಿದ್ಯಾಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಏರ್ಪಡಿಸಿದ 7ನೇ ವರ್ಷದ ಕನ್ನಡ ನುಡಿ ಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ ದ ಆರನೇ ದಿನ ಯಕ್ಷಗಾನದ ಪ್ರಸಿದ್ಧ ಹವ್ಯಾಸಿ ಕಲಾವಿದ, ದೈವಾರಾಧನೆ ಹಾಗೂ ಕೃಷಿ ಕ್ಷೇತ್ರದ ಸಾಧಕ ದಿ.ನುಳಿಯಾಲು ಕಿಟ್ಟಣ್ಣ ಶೆಟ್ಟಿ ಅವರ ಸಂಸ್ಮರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಂಬಯಿ ಹೋಟೆಲ್ ಉದ್ಯಮಿ ರಾಮಣ್ಣ ಶೆಟ್ಟಿ ಸಂಸ್ಮರಣಾ ಜ್ಯೋತಿ ಬೆಳಗಿದರು ಮಾತಾ ಬಿಲ್ಡರ್ಸ್ ಅ್ಯಂಡ್ ಡೆವಲಪರ್ಸ್ ನ ಆಡಳಿತ ನಿರ್ದೇಶಕ ಎನ್. ಸಂತೋಷ್ ಕುಮಾರ್ ಶೆಟ್ಟಿ ನುಡಿನಮನ ಸಲ್ಲಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಕದ್ರಿ ನವನೀತ ಶೆಟ್ಟಿ ಮಾತನಾಡಿ ‘ಈ ವರ್ಷ ಅಕಾಡೆಮಿಯ ಕ್ರಿಯಾ ಯೋಜನೆಯಡಿಯಲ್ಲಿ ತುಳು ಯಕ್ಷಗಾನ ಪ್ರಸಂಗ ಸಂಪುಟವನ್ನು ಪ್ರಕಟಿಸುವ ಬಗ್ಗೆ ಪ್ರಸ್ತಾವಿಸಲಾಗಿದೆ. ಅಲ್ಲದೆ ಗತಿಸಿಹೋದ ಕಲಾವಿದರ ಸಂಸ್ಮರಣೆಗೂ ಯೋಜನೆ ಹಾಕಿಕೊಳ್ಳಲಾಗಿದೆ’ ಎಂದರು.

ತುಳು ಅಕಾಡೆಮಿ ಸದಸ್ಯ ಲೀಲಾಕ್ಷ ಬಿ.ಕರ್ಕೇರ ಹಾಗೂ ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ಶಾಖಾಧಿಕಾರಿ ಅಮೈ ಮಾಧವ ರೈ ಶುಭಾಶಂಸನೆಗೈದರು.

ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಕೋಶಾಧಿಕಾರಿ ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ವಂದಿಸಿದರು. ಅಶೋಕ ಮಾಡ ಕುದ್ರಾಡಿಗುತ್ತು, ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ, ತೋನ್ಸೆ ಪುಷ್ಕಳಕುಮಾರ್,ಕರುಣಾಕರ ಶೆಟ್ಟಿ ಪಣಿಯೂರು, ಸುಧಾಕರ ರಾವ್ ಪೇಜಾವರ, ಉಮೇಶಾಚಾರ್ಯ ಗೇರುಕಟ್ಟೆ, ಸಿದ್ಧಾರ್ಥ ಅಜ್ರಿ ಉಪಸ್ಥಿತರಿದ್ದರು.

ತುಳು ತಾಳಮದ್ದಳೆ: ಯಕ್ಷಾಂಗಣ ತಾಳಮದ್ದಳೆ ಸಪ್ತಾಹದ ಅಂಗವಾಗಿ ಧೀರಜ್ ರೈ ಸಂಪಾಜೆ ಅವರ ಭಾಗವತಿಕೆಯಲ್ಲಿ ‘ಸಂಧಾನ ಸಪ್ತಕ’ ದ ಐದನೇ ಪ್ರಸಂಗ ‘ಸಿರಿ ಕಿಟ್ಣ ಸಂಧಾನ’ ತುಳು ತಾಳಮದ್ದಳೆ ಜರಗಿತು.

Comments are closed.