ಕರಾವಳಿ

ಮುಕ್ಕ ಬೀಚ್‌ನಲ್ಲಿ ಯುವತಿಯೊಂದಿಗಿದ್ದ ಮುಸ್ಲಿಂ ಯುವಕನಿಗೆ ಥಳಿತ ಪ್ರಕರಣ : ಮೂವರ ಬಂಧನ

Pinterest LinkedIn Tumblr

ಮಂಗಳೂರು, ನವೆಂಬರ್.17: ಐದು ದಿನಗಳ ಹಿಂದೆ ಮುಕ್ಕ ಬೀಚ್‌ನಲ್ಲಿದ್ದ ಜೋಡಿಯೊಂದನ್ನು ಅಪಹರಿಸಿ ಕೂಡಿ ಹಾಕಿ ಯುವಕನಿಗೆ ಯುವಕರ ತಂಡವೊಂದು ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸ್ಥಳೀಯ ನಿವಾಸಿಗಳಾದ ವಸಂತ ಅಮೀನ್, ಸುನೀಲ್, ಶುಕೇತ್ ಪುತ್ರನ್ ಎಂದು ಪೊಲೀಸರು ತಿಳಿಸಿದ್ದಾರೆ.

ನ.12ರಂದು ಖಾಸಗಿ ಕಾಲೇಜೊಂದರ ವಿದ್ಯಾರ್ಥಿಯಾಗಿರುವ ಅಬ್ದುಲ್ ರಹ್ಮಾನ್ ಬಸರತ್ ಮತ್ತು ಈತನ ಸ್ನೇಹಿತೆ ಮುಕ್ಕ ಬೀಚ್‌ನಲ್ಲಿದ್ದಾಗ ಕೆಲ ಯುವಕರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ, ಪರ್ಸ್, ಮೊಬೈಲ್ ಕಿತ್ತುಕೊಂಡು ರಾತ್ರಿ ಹತ್ತು ಗಂಟೆಯವರೆಗೆ ಕೂಡಿ ಹಾಕಿದ್ದರು.

ಬಳಿಕ ಕಾಲೇಜಿನ ಡೀನ್ ಅವರನ್ನು ಕರೆದು ಎಚ್ಚರಿಕೆ ನೀಡಿ ಕಳಿಸಿದ್ದರು. ಬಳಿಕ ಹಲ್ಲೆಯಿಂದ ಆಘಾತಕ್ಕೊಳಗಾಗಿದ್ದ ಬಸರತ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ನ.13ರಂದು ದೂರು ದಾಖಲಿಸಿಕೊಂಡ ಪೊಲೀಸರು ಬಳಿಕ ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಳ್ಳು ಸುದ್ಧಿ ಹಬ್ಬಿಸದಂತೆ ಪೊಲೀಸ್ ಅಯುಕ್ತರ ಮನವಿ:

ಈ ಪ್ರಕರಣದಲ್ಲಿ ಮುಕ್ಕ ಬೀಚ್‌ನಲ್ಲಿದ್ದ ಯುವಜೋಡಿಗೆ ಯುವಕರ ತಂಡವೊಂದು ಥಳಿಸಿದೆ ಎಂಬ ಸುಳ್ಳು ಸುದ್ಧಿ ಹಬ್ಬಿಸಲಾಗಿತ್ತು. ಆದರೆ ಈ ಪ್ರಕರಣದಲ್ಲಿ ಯುವಕನ ಮೇಲೆ ಮಾತ್ರ ಹಲ್ಲೆ ನಡೆದಿದ್ದು, ಯುವತಿಯ ಮೇಲೆ ಯಾರು ಹಲ್ಲೆ ನಡೆಸಿರಲಿಲ್ಲ. ಅದುದ್ದರಿಂದ ಯಾರು ಕೂಡ ಈ ರೀತಿ ಸುಳ್ಳು ಸುದ್ಧಿ ಹಬ್ಬಿಸುವ ಮೂಲಕ ಸಮಾಜ ಶಾಂತಿ ಕೆಡಿಸುವ ಪ್ರಯತ್ನ ಮಾಡಬಾರದು. ಮಾಡಿದರೆ ಅಂತವರ ವಿರುದ್ಧ ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ಇದೇ ಸಂದರ್ಭದಲ್ಲಿ ಮಂಗಳೂರು ನಗರ ಪೊಲೀಸ್ ಅಯುಕ್ತರು ತಿಳಿಸಿದ್ದಾರೆ.

Comments are closed.