ಕರಾವಳಿ

ಪಾಲಿಕೆಯಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ಬಿಜೆಪಿ ಗುರಿ : ಜನತೆಗೆ ಶಾಸಕ ಡಿ.ವೇದವ್ಯಾಸ ಕಾಮತ್ ಭರವಸೆ

Pinterest LinkedIn Tumblr

ಮಂಗಳೂರು : ಮಂಗಳೂರು ಮಹಾ ನಗರ ಪಾಲಿಕೆಯ ಸಮಗ್ರ ಅಭಿವೃದ್ಧಿ ಜತೆ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದು ಬಿಜೆಪಿಯ ಸಂಕಲ್ಪವಾಗಿದೆ. ಈ ನಿಟ್ಟಿನಲ್ಲಿ ಇ-ಆಡಳಿತಕ್ಕೆ ಆದ್ಯತೆ ನೀಡಿ ಕೇಂದ್ರೀಕೃತ ಆಡಳಿತ ವ್ಯವಸ್ಥೆಯ ವಿಕೇಂದ್ರೀಕರಣಕ್ಕೆ ಪ್ರಯತ್ನಿಸಲಾಗುವುದು. ಆನ್‍ಲೈನ್ ಮೂಲಕ ಬಿಲ್‍ಗಳ ಪಾವತಿ, ಆನ್‍ಲೈನ್ ಮೂಲಕ ಸರ್ಟಿಫಿಕೇಶನ್ ಭ್ರಷ್ಟಾಚಾರ ತಡೆಯಲು ಪೂರಕವಾಗಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

ಮಹಾ ನಗರ ಪಾಲಿಕೆ ಈಗ ಭ್ರಷ್ಟಾಚಾರದ ಆಗರ ಎನ್ನುವ ಆರೋಪ ಸಾರ್ವತ್ರಿಕವಾಗಿದೆ. ಆಡಳಿತಾತ್ಮಕ ಸುಧಾರಣೆಯಿಂದ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸಾಧ್ಯ. ಏಕ ಗವಾಕ್ಷಿ ಯೋಜನೆ ಮತ್ತು ವಾರ್ಡ್ ಸಮಿತಿ ರಚನೆಯನ್ನು ಬಿಜೆಪಿ ತನ್ನ
ಪ್ರಣಾಳಿಕೆಯಲ್ಲಿ ಘೋಷಿಸಿದ್ದು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದೇ ಬಿಜೆಪಿಯ ಮುಖ್ಯ ಉದ್ದೇಶ ಎಂದು ಅವರು ತಿಳಿಸಿದ್ದಾರೆ.

ಬಿಜೆಪಿಯಿಂದ ಮಾತ್ರ ಅಭಿವೃದ್ಧಿ : ಪಾಲಿಕೆಯಲ್ಲಿ ಈ ಹಿಂದೆ ಬಿಜೆಪಿ ಆಡಳಿತ ಇದ್ದ ಸಂದರ್ಭ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರು. ಹಾಗಾಗಿ ನಗರದಲ್ಲಿ ಅಭೂತಪೂರ್ವ ಅಭಿವೃದ್ದಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಿತ್ತು. ಬಳಿಕ ಆಡಳಿತಕ್ಕೆ ಬಂದ ಕಾಂಗ್ರೆಸ್ ಅಭಿವೃದ್ದಿ ಕಾರ್ಯಗಳನ್ನು ನಿರ್ಲಕ್ಷಿಸಿದ ಕಾರಣ ಪಾಲಿಕೆ ಭ್ರಷ್ಟಾಚಾರದ ಕೂಪವಾಯಿತು.

ಈಗ ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಎರಡು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಪಾಲಿಕೆಯಲ್ಲಿ ಬಿಜೆಪಿಯನ್ನು ಆಡಳಿತಕ್ಕೆ ತರುವ ಸುವರ್ಣಾವಕಾಶ ಮತದಾರರ ಮುಂದಿದೆ. ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎನ್ನುವುದನ್ನು ಮನಗಂಡಿರುವ ಮತದಾರರು ಬಿಜೆಪಿಯನ್ನು ಬೆಂಬಲಿಸುವ ಸಂಪೂರ್ಣ ವಿಶ್ವಾಸವಿದೆ ಎಂದು ಶಾಸಕರು ತಿಳಿಸಿದ್ದಾರೆ.

ವಿಶೇಷ ಅನುದಾನ : ಶಾಸಕನಾಗಿ ಆಯ್ಕೆಯಾದ ಸಂದರ್ಭ ಕರ್ನಾಟಕ ರಾಜ್ಯದಲ್ಲಿ ಮತ್ತು ಮಂಗಳೂರು ಮಹಾ ನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಇಲ್ಲದ ಕಾರಣ ನಿರೀಕ್ಷಿತ ಅಭಿವೃದ್ದಿ ಸಾಧ್ಯವಾಗಿರಲಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ರಾಜ್ಯ ಸರ್ಕಾರ ಹಾಗೂ ವಿವಿಧ ಇಲಾಖೆಗಳ ಅನುದಾನ ತರಿಸುವಲ್ಲಿ ಯಶಸ್ವಿಯಾಗಿದ್ದೇನೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಜೆಪಿ ಸರಕಾರ ರಚೆನೆಯಾದ ಈ ನಾಲ್ಕು ತಿಂಗಳಲ್ಲಿ 100 ಕೋಟಿ ರೂ ಅನುದಾನವನ್ನು ವಿವಿಧ ಕಾಮಗಾರಿಗಳಿಗೆ ಒದಗಿಸಿದ್ದಾರೆ. ರಾಜ್ಯ ಮತ್ತು ಮಂಗಳೂರು ಮಹಾನಗರ ಪಾಲಿಕೆ ಒಂದೇ ಆಡಳಿತದಡಿ ಬಂದಾಗ ಅಭಿವೃದ್ಧಿ ಕಾಮಗಾರಿಗೆ ಮತ್ತಷ್ಟು ವೇಗ ದೊರೆಯುತ್ತದೆ. ಅನೇಕ ಯೋಜನೆಗಳು ಪ್ರಗತಿಯ ಹಂತದಲ್ಲಿ ಹಾಗೂ ಅನುಷ್ಠಾನದ ಹಂತದಲ್ಲಿವೆ. ನಗರದಲ್ಲಿ 23 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಪಾಲಿಕೆಯಲ್ಲಿ ಬಿಜೆಪಿಗೆ ಅಧಿಕಾರ ನೀಡಿದರೆ ಅಭಿವೃದ್ಧಿ ಕಾರ್ಯಗಳಿಗೆ ಇನ್ನಷ್ಟು ವೇಗ ನೀಡಲು ಸಾಧ್ಯವಿದೆ ಎಂದು ಅವರು ತಿಳಿಸಿದ್ದಾರೆ.

ತೆರಿಗೆ ಭಾರ ಇಳಿಕೆ : ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಅವೈಜ್ಞಾನಿಕವಾಗಿ ಹೆಚ್ಚಿಸಿದ ತೆರಿಗೆಯನ್ನು ಇಳಿಸಲು ವಿಶೇಷ ಕ್ರಮ ವಹಿಸಲಾಗುವುದು. ಪ್ರಾಪರ್ಟಿ ಕಾರ್ಡ್ ವಿತರಣೆಯ ಗೊಂದಲ ನಿವಾರಿಸಿ ನಾಗರಿಕರಿಗೆ ಅನುಕೂಲವಾಗುವಂತೆ ಶಾಶ್ವತ ಪರಿಹಾರ ರೂಪಿಸಲಾಗುವುದು. ಸ್ಮಾರ್ಟ್ ಸಿಟಿ ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತಿರುವ ಯೋಜನೆಗಳ ವೆಚ್ಚದ ಕುರಿತು ತಜ್ಞರ ಸಮಿತಿಯ ಸಲಹೆ ಪಡೆದು ಸಮರ್ಪಕ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದೆಂದು ಎಂದು ಶಾಸಕರು ತಿಳಿಸಿದ್ದಾರೆ.

Comments are closed.