ಕರಾವಳಿ

ಜಾಗತಿಕ ಬಂಟರ ಸಂಘದಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಕಾರುಣ್ಯ ಪ್ರಾಯೋಜಕತ್ವದ ಉದ್ಘಾಟನೆ

Pinterest LinkedIn Tumblr

ಮಂಗಳೂರು : ಸಮಾಜದಲ್ಲಿ ಎಲ್ಲರೂ ಸುಖ ಶಾಂತಿ ಸಮೃದ್ಧಿಯಿಂದಿರಬೇಕು. ಯಾರೂ ಹಸಿವಿನಲ್ಲಿರಬಾರದು. ಸರ್ವ ಧರ್ಮದ ಬಂಧುಗಳು ಸಹಬಾಳ್ವೆಯಿಂದ ಜೀವನ ನಡೆಸುವಂತಾಗಬೇಕು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಹೇಳಿದರು.

ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿಗಳ ಜೊತೆಗಾರರಿಗೆ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿನಿತ್ಯ ನೀಡಲಾಗುತ್ತಿರುವ ರಾತ್ರಿಯ ಉಪಹಾರದ ಕಾರುಣ್ಯ ಯೋಜನೆಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ನವಂಬರ್ ತಿಂಗಳು ಪೂರ್ತಿ ಪ್ರಾಯೋಜಕತ್ವ ನೀಡಿದ್ದು, ಕನ್ನಡ ರಾಜ್ಯೋತ್ಸವದಂದು ಅದರ ಉದ್ಘಾಟನೆಯನ್ನು ಐಕಳ ಹರೀಶ್ ಶೆಟ್ಟಿ ಅವರು ನೆರವೇರಿಸಿ ಮಾತನಾಡಿದರು.

ಕಳೆದ ವರ್ಷ ಕಾರುಣ್ಯ ಯೋಜನೆಗೆ ಡಿಸೆಂಬರ್ ತಿಂಗಳಲ್ಲಿ ಪ್ರಾಯೋಜಕತ್ವ ನೀಡಿದ್ದು, ಈ ಬಾರಿ ನವಂಬರಲ್ಲಿ ನೀಡಲಾಗಿದೆ. ಜಾಗತಿಕ ಬಂಟರ ಸಂಘವು ಪ್ರತಿವರ್ಷ ಈ ಯೋಜನೆಯನ್ನು ಪ್ರೋತ್ಸಾಹಿಸಲು ಉದ್ದೇಶಿಸಿದೆ ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದರು.

ವೆನ್ಲಾಕ್ ಜಿಲ್ಲಾಸ್ಪತ್ರೆಯ ಡಿ.ಎಂ.ಓ. ಡಾ. ರಾಜೇಶ್ವರಿ ದೇವಿ ಮಾತನಾಡಿ ಹಸಿದವರಿಗೆ ಅನ್ನ ನೀಡುವ ಪುಣ್ಯ ಕಾರ್ಯವು ಶ್ಲಾಘನೀಯ. ಜಾಗತಿಕ ಬಂಟರ ಸಂಘ ಎಂ.ಫ್ರೆಂಡ್ಸ್ ಜೊತೆ ಕೈಜೋಡಿಸಿದ್ದು ಸಂತಸ ತಂದಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಎಂ.ಫ್ರೆಂಡ್ಸ್ ಅಧ್ಯಕ್ಷರಾದ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಮಾತನಾಡಿ ನಮ್ಮ ಸಂಸ್ಥೆಯು ಕಳೆದ ಎರಡು ವರ್ಷಗಳಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಈ ಯೋಜನೆ ಆರಂಭಿಸಿದೆ. ಸಹೃದಯರ ಸಹಕಾರ ಸಿಕ್ಕಿದೆ. ಪ್ರತಿವರ್ಷ ಒಂದು ತಿಂಗಳ ಸಹಕಾರ ನೀಡುತ್ತಿರುವ ಜಾಗತಿಕ ಬಂಟರ ಸಂಘದ ಸೇವೆಗೆ ಪ್ರಶಂಸೆ ವ್ಯಕ್ತಪಡಿಸಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿ ಮಾತನಾಡಿ ಬಂಟರ ಸಂಘವು ಹತ್ತು ಹಲವು ಸೇವಾ ಕಾರ್ಯದಲ್ಲಿ ತೊಡಗಿದ್ದು, ಕಾರುಣ್ಯ ಯೋಜನೆಗೆ ಸಹಕಾರ ನೀಡುವುದು ಒಂದು ಅಂಗ ಎಂದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ, ಮೈಸೂರು ಬಂಟ್ಸ್ ಸಂಘದ ರವಿಚಂದ್ರ ಶೆಟ್ಟಿ, ಜಾಗತಿಕ ಬಂಟರ ಸಂಘದ ಸದಸ್ಯರಾದ ಹೇಮಂತ್ ಶೆಟ್ಟಿ ಮಂಗಳೂರು ಹಾಗೂ ಸುರೇಶ್ ಶೆಟ್ಟಿ ಸೂರಿಂಜೆ, ಎಂ.ಫ್ರೆಂಡ್ಸ್ ಉಪಾಧ್ಯಕ್ಷ ಸುಜಾಹ್ ಮಹಮ್ಮದ್, ಟ್ರಸ್ಟಿಗಳಾದ ಹಮೀದ್ ಅತ್ತೂರು, ಮಹಮ್ಮದ್ ಟಿ.ಕೆ., ಪುತ್ತಾಕ ಉಪ್ಪಿನಂಗಡಿ, ಅಬ್ಬಾಸ್ ಕಲ್ಲಂಗಳ, ಎಡ್ವಕೇಟ್ ಶೇಖ್ ಇಸಾಕ್, ನಾಸಿರ್ ಲೊರೆಟ್ಟೊಪದವು ಮೊದಲಾದವರು ಉಪಸ್ಥಿತರಿದ್ದರು.

ಎಂ.ಫ್ರೆಂಡ್ಸ್ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ ಸ್ವಾಗತಿಸಿದರು. ಕಾರ್ಯದರ್ಶಿ ಆರಿಫ್ ಪಡುಬಿದ್ರಿ ವಂದಿಸಿದರು. ಕಾರುಣ್ಯ ಪ್ರಾಯೋಜಕತ್ವದ ಚೆಕ್ ನ್ನು ಐಕಳ ಹರೀಶ್ ಶೆಟ್ಟಿ ಅವರು ಎಂ.ಫ್ರೆಂಡ್ಸ್ ಗೆ ಹಸ್ತಾಂತರಿಸಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರನ್ನು ಎಂ.ಫ್ರೆಂಡ್ಸ್ ವತಿಯಿಂದ ಸನ್ಮಾನಿಸಲಾಯಿತು.

Comments are closed.