ಕರಾವಳಿ

ಮಾದಕ ವಸ್ತುಗಳ ಮಾರಾಟಕ್ಕೆ ಯತ್ನ :ಸಿಸಿಬಿಯಿಂದ ಮಂಗಳೂರಿನ ನಾಲ್ವರು ಯುವಕರ ಸೆರೆ – 3 ಲಕ್ಷ ಮೌಲ್ಯದ ಸೊತ್ತು ವಶ

Pinterest LinkedIn Tumblr

ಮಂಗಳೂರು, ನವೆಂಬರ್.01: ನಗರದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಮಂಗಳೂರಿನ ಕಾರ್ ಸ್ಟ್ರೀಟ್ ಹಾಗೂ ಫಳ್ನೀರ್ ನ ಯುವಕರ ತಂಡವೊಂದನ್ನು ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಇಕಾನಾಮಿಕ್ & ನಾರ್ಕೋಟಿಕ್ ಠಾಣೆ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಮಂಗಳೂರಿನ ಕಾರ್ ಸ್ಟ್ರೀಟ್ ನಿವಾಸಿಗಳಾದ ಕಿಶನ್ ಹೆಗ್ಡೆ (19), ಅನಂತ ಕುಡ್ವ(21), ಫಳ್ನೀರ್ ವಾಸ್ ಲೇನ್ ನಿವಾಸಿ ಹಬೀಲ್ ಅಹಮ್ಮದ್(19) ಹಾಗೂ ಆತ್ತಾವರ ವೈದ್ಯನಾಥನಗರದ ಗೋಪಿನಾಥ ಭಂಡಾರ್ಕರ್ (24) ಎಂದು ಹೆಸರಿಸಲಾಗಿದೆ.

ಮಂಗಳೂರು ನಗರದಲ್ಲಿ ನಿಷೇಧಿತ ಮಾದಕ ವಸ್ತುಗಳಾದ ಕೋಕೆನ್, ಎಂಡಿಎಂಎ, ಎಲ್ಎಸ್ ಡಿ, ಪಿಲ್ಸ್, ಚರಸ್ ಗಳನ್ನು ಹೊರರಾಜ್ಯಗಳಿಂದ ಖರೀದಿಸಿ ಮಂಗಳೂರಿನ ಸಾರ್ವಜನಿಕರಿಗೆ ಮಾರಾಟ ಮಾಡಿ ಅಕ್ರಮ ಹಣ ಗಳಿಸಲು ಯತ್ನಿಸುತ್ತಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ನಿಷೇದಿತ ಮಾದಕ ವಸ್ತುಗಳಾದ ಕೋಕೆನ್, ಎಂಡಿಎಂಎ, ಎಲ್ಎಸ್ ಡಿ, ಪಿಲ್ಸ್, ಚರಸ್ ವನ್ನು ಹೊಂದಿದ ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳನ್ನು ಮಂಗಳೂರು ನಗರದ ಮೋರ್ಗನ್ ಗೇಟ್ ಬಳಿಯಿಂದ ವಶಕ್ಕೆ ಪಡೆದುಕೊಂಡು ಅವರಿಂದ 22 ಗ್ರಾಂ ಕೋಕೆನ್, 6 ಗ್ರಾಂ ಎಂಡಿಎಂಎ, 75 ಫಿಲ್ಸ್, 5 ಎಲ್ಎಸ್ ಡಿ, 10 ಗ್ರಾಂ ಚರಸ್ ಒಟ್ಟು 2,50,000/ ಮೌಲ್ಯದ ನಿಷೇಧಿತ ಮಾದಕ ವಸ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಅಲ್ಲದೇ ಆರೋಪಿತರಿಂದ ಮೊಬೈಲ್ ಫೋನ್-3 ನ್ನು, ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಆಂದಾಜು ಒಟ್ಟು ಮೌಲ್ಯ ರೂ. 3 ಲಕ್ಷ ಆಗಿರುತ್ತದೆ. ಈ ಬಗ್ಗೆ ಇಕನಾಮಿಕ್ & ನಾರ್ಕೋಟಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾದಕ ವಸ್ತುವಿನ ಮಾರಾಟದ ಜಾಲದಲ್ಲಿ ಇನ್ನೂ ಇತರರು ಭಾಗಿಯಾಗಿದ್ದು, ಪ್ರಕರಣದಲ್ಲಿ ಹೆಚ್ಚಿನ ತನಿಖೆ ಮುಂದುವರಿದಿದೆ .

ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ, ರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಗೂ ಇಕಾನಾಮಿಕ್ & ನಾರ್ಕೋಟಿಕ್ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

Comments are closed.