ಕರಾವಳಿ

ಗಾಂಜಾ ವಿರುದ್ಧ ಉಡುಪಿ ಪೊಲೀಸರ ದಿಟ್ಟ ಕ್ರಮ: ಕುಂಭಾಸಿಯಲ್ಲಿ ಇಬ್ಬರ ಬಂಧನ

Pinterest LinkedIn Tumblr

ಕುಂದಾಪುರ: ಜಿಲ್ಲಾದ್ಯಂತ ಮಾಧಕ ವಸ್ತುಗಳ ಮಾರಾಟ ಮತ್ತು ಬಳಕೆ ಬಗ್ಗೆ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್ ಅವರು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು ಈಗಾಗಲೇ ಮಣಿಪಾಲ, ಕಾಪು, ಉಡುಪಿ ಸೇರಿದಂತೆ ವಿವಿಧ ಠಾಣೆಯಲ್ಲಿ ಗಣನೀಯ ಸಂಖ್ಯೆಯಲ್ಲಿ ಗಾಂಜಾ ಸೇವನೆ ಮತ್ತು ಮಾರಾಟ ಪ್ರಕರಣ ದಾಖಲಾಗಿದ್ದು ಅ.31 ಗುರುವಾರದಂದು ಸಂಜೆ ಕುಂದಾಪುರ ಪೊಲೀಸರು ಗಾಂಜಾ ಮಾರಾಟದಲ್ಲಿ ನಿರತರಾದ ಇಬ್ಬರನ್ನು ಕುಂಭಾಸಿ ಬಳಿಯಲ್ಲಿ ಬಂಧಿಸಿದ್ದಾರೆ.

ಕುಂದಾಪುರದ ಕೋಟೇಶ್ವರ ಸಮೀಪದ ಕಾಳಾವರ ನಿವಾಸಿ ನಿಶ್ಚಲ್ (22) ಹಾಗೂ ಇನ್ನೋರ್ವ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಬಂಧಿತರು. ಆರೋಪಿಗಳಿಂದ 20 ಸಾವಿರ ಮೌಲ್ಯದ 604 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.

ಘಟನೆ ವಿವರ: ಕುಂದಾಪುರ ಠಾಣಾ ವ್ಯಾಪ್ತಿಯ ಕುಂಭಾಶಿಯ ದೇವಸ್ಥಾನವೊಂದಕ್ಕೆ ಹೋಗುವ ತಿರುವಿನ ಬಳಿಯ ಖಾಲಿ ಜಾಗದಲ್ಲಿ ಐ20 ಕಾರಿನಲ್ಲಿ ಕುಳಿತು ಗಾಂಜಾ ಮಾರಾಟ ಮಾಡಲು ಇಬ್ಬರು ನಿಂತುಕೊಂಡಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಮೇಲಾಧಿಕಾರಿಯವರ ಅನುಮತಿ ಪಡೆದು ಕುಂದಾಪುರ ಠಾಣಾ ಪೊಲೀಸ್ ಉಪನಿರೀಕ್ಷಕ ಹರೀಶ್ ಹಾಗೂ ಸಿಬ್ಬಂದಿಯವರಾದ ಸಂತೋಷ್ ಕುಮಾರ್, ಮಂಜುನಾಥ, ಗೋಕುಲ, ಮೋಹನ್, ಸಂತೋಷ್, ಚಂದ್ರಶೇಖರ, ಚಾಲಕ ಸಂತೋಷ್ ಕುಮಾರ್ ರವರೊಂದಿಗೆ ದಾಳಿ ಮಾಡಿ ಆರೋಪಿಗಳನ್ನು ತಪಾಸಣೆ ಮಾಡಿದ್ದು ಅವರ ಬಳಿಯಿದ್ದ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.