ಕರಾವಳಿ

ಜನನ ಮರಣ ನೋಂದಣಿಗಳು ಕ್ರಮಬದ್ಧವಾಗಿರಲಿ :ಜಿಲ್ಲಾಧಿಕಾರಿ ಸಿಂಧೂ ರೂಪೇಶ್

Pinterest LinkedIn Tumblr

ಮಂಗಳೂರು ಅಕ್ಟೋಬರ್ 25: ಜನನ ಮರಣ ನೋಂದಣಿಗಳು ಕ್ರಮಬದ್ಧವಾಗಿ ನಡೆಯುತ್ತಿರಬೇಕು. ಮಾರ್ಗಸೂಚಿಗಳನ್ವಯ ಸಂಬಂಧಪಟ್ಟ ನೋಂದಣಾಧಿಕಾರಿಗಳು ಸೂಕ್ತ ಸಮಯದಲ್ಲಿ ಸಾರ್ವಜನಿಕರಿಗೆ ಸ್ಪಂದಿಸಿ, ನೋಂದಣಿ ಕಾರ್ಯಗಳನ್ನು ಮಾಡಬೇಕು ಎಂದು ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಹೇಳಿದರು.

ಜಿಲ್ಲಾಧಿಕಾರಿ ಕೋರ್ಟ್‍ಹಾಲ್‍ನಲ್ಲಿ ನಡೆದ ಜನನಮರಣ ನೋಂದಣಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತಾಡಿದ ಅವರು ಗ್ರಾಮೀಣ ಪ್ರದೇಶ, ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರಗಳಾದ ತಾಲೂಕು/ಜಿಲ್ಲಾ ಆಸ್ಪತ್ರೆ, ಪಟ್ಟಣ ಪ್ರದೇಶ ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಮತ್ತು ಅಧಿಸೂಚಿತ ಪ್ರದೇಶಗಳಲ್ಲಿ ನೋಂದಣಾಧಿಕಾರಿಗಳು ಜನನ ಮರಣ ನೋಂದಣಿಯನ್ನು ನಿಯಮನುಸಾರವಾಗಿ ನಡೆಸುತ್ತಿರಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮಾಂತರ ಹಾಗೂ ನಗರಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 456 ನೋಂದಣಿ ಘಟಕಗಳು ಹೊಂದಿವೆ. ತಾಲೂಕು/ ಪಟ್ಟಣವಾರು ಜನನ ಮರಣ ಗ್ರಾಮಾಂತರ ಪ್ರದೇಶಗಳಲ್ಲಿನ 2019 ನೇ ಸಾಲಿನಲ್ಲಿ ಒಟ್ಟು 26423 ಜನನ ಮತ್ತು 14904 ಮರಣ ನೋಂದಣಿಗಳು ಜಿಲ್ಲೆಯಲ್ಲಿ ದಾಖಲಾಗಿವೆ ಎಂದು ಜಿಲ್ಲಾ ಸಹಾಯಕ ನಿರ್ದೇಶಕ ಮನಮೋಹನ್ ವಿವರಣೆ ನೀಡಿದರು.

2019ನೇ ಸಾಲಿನಲ್ಲಿ ನಮ್ಮ ಜಿಲ್ಲೆಯಲ್ಲಿ ಒಟ್ಟು 313 ಜನನ ಮತ್ತು 398 ಮರಣ ತಡನೋಂದಣಿಗಳು ದಾಖಲಾಗಿದೆ. ಸೆಕ್ಷನ್ 13 ರನ್ವಯ ಘಟನೆ ಸಂಭವಿಸಿದ 21 ದಿನದ ನಂತರದ ಘಟನೆಗಳನ್ನು ತಡ ನೋಂದಣಿ ಮಾಡಬಹುದಾಗಿದ್ದು, ತಡನೋಂದಣಿಗಳು ಕಡಿಮೆಗೊಳಿಸುವ ಕಡೆಗೆ ಕ್ರಮ ವಹಿಸುವುದು ಇದರ ಉದ್ದೇಶವಾಗಿದೆ ಎಂದರು.

ಸೆಕ್ಷನ್ 18 ರ ಪ್ರಕಾರ ಜಿಲ್ಲೆಯ ಎಲ್ಲಾ ನೋಂದಣಿ ಘಟಕವು ನಿಯಮಾನುಸಾರ ನೋಂದಣಿ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಹಾಗೂ ಶೇಕಡಾ 100 ರಷ್ಟು ಘಟನೆಗಳು ದಾಖಲಾತಿಯಾಗಿರುವ ಕುರಿತು ಕಂದಾಯ, ನಗರಾಭಿವೃದ್ಧಿ, ಸಾಂಖ್ಯಿಕ ಇಲಾಖೆಯ ಅಧಿಕಾರಿಗಳಂದ ಪರಿಶೀಲನೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಸಹಾಯಕ ಸಾಂಖ್ಯಿಕ ಅಧಿಕಾರಿಗಳಾದ ಎ.ಡಿ ಬೋಪಯ್ಯ, ಮಾರುತಿ ಪ್ರಸಾದ್, ರತ್ನಾಕರ್ ಮತ್ತು ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.