ಕರಾವಳಿ

ರಿಕ್ಷಾ ಚಾಲಕನ ಕೊಲೆ ಯತ್ನ ಸೇರಿದಂತೆ ಶ್ರೀಮಂತ ವ್ಯಕ್ತಿಗಳ ದರೋಡೆಗೆ ಸಂಚು ರೂಪಿಸುತ್ತಿದ್ದ 9 ಆರೋಪಿಗಳ ಬಂಧನ

Pinterest LinkedIn Tumblr

ಮಂಗಳೂರು, ಅಕ್ಟೋಬರ್.23: ನೀರುಮಾರ್ಗ ಬಳಿ ರಿಕ್ಷಾ ಚಾಲಕನ ಕೊಲೆಯತ್ನ ನಡೆಸಿ ತಲೆಮರೆಸಿಕೊಂಡು, ಇದೀಗ ಹಣಕಾಸಿನ ಅಗತ್ಯಕ್ಕಾಗಿ ಶ್ರೀಮಂತ ವ್ಯಕ್ತಿಗಳ ದರೋಡೆಗೆ ಸಂಚು ರೂಪಿಸುತ್ತಿದ್ದ ಒಂಬತ್ತು ಮಂದಿ ಆರೋಪಿಗಳನ್ನು ಮಂಗಳೂರು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ

ಬಂಧಿತ ಆರೋಪಿಗಳನ್ನು ನಿತಿನ್ ಪೂಜಾರಿ, ಧನರಾಜ್, ಶಿವನಾಂದ್ ಆಚಾರಿ, ಗಣೇಶ್, ಜೀವನ್ ಪೂಜಾರಿ, ಸಂತೋಷ್ ಪೂಜಾರಿ, ಧೀರಜ್ ಸಫಲ್ಯ, ರಾಘವೇಂದ್ರ ಪೂಜಾರಿ, ಪ್ರಣೇಶ್ ಪೂಜಾರಿ ಎಂದು ಹೆಸರಿಸಲಾಗಿದೆ.

ನಗರದ ಹೊರವಲಯದ ಕೆಲರಾಯ- ಕಾಪೆಟ್ಟು ರಸ್ತೆಯ ಸ್ಮಶಾನವೊಂದರ ಬಳಿ ಕುಳಿತು ವ್ಯಕ್ತಿಯೊಬ್ಬರ ದರೋಡೆ ಮಾಡಲು ಸಂಚು ರೂಪಿಸುತ್ತಿದ್ದ ಒಂಬತ್ತು ಮಂದಿಯನ್ನು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ನೀರುಮಾರ್ಗದ ಪಡು ಬಿತ್ತ್‌ಪಾದೆ ಸಮೀಪ ರಿಕ್ಷಾ ಚಾಲಕನ ಮೇಲೆ ತಲವಾರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳಿಂದ ದಾಳಿಗೊಳಗಾಗಿ ಗಾಯಗೊಂಡು ಅಸ್ಪತ್ರೆ ಸೇರಿದ್ದ ಕಾಪೆಟ್ಟು ಗುತ್ತಿಗೆ ನಿವಾಸಿ ಸಂತೋಷ್ (35) ಸದ್ಯ ಚೇತರಿಸಿಕೊಂಡಿದ್ದಾರೆ.

ಅ.17ರಂದು ಸಂಕ್ರಮಣವಾದ ಕಾರಣ ಸಂತೋಷ್ ಅವರು ಬಿತ್ತ್‌ಪಾದೆಯ ಅಂಗಡಿಯೊಂದರಲ್ಲಿ ಎಳ್ಳೆಣ್ಣೆ ಖರೀದಿಸಿ ತನ್ನ ಮನೆ ಗುತ್ತಿಗೆಯತ್ತ ರಿಕ್ಷಾದಲ್ಲಿ ಹೋಗುತ್ತಿದ್ದರು. ಈ ಸಂದರ್ಭ ಕಪ್ಪು ಬಣ್ಣದ ಆಕ್ಟೀವಾದಲ್ಲಿ ಬಂದ ಇಬ್ಬರು ಯುವಕರು ಸಂತೋಷ್‌ನನ್ನು ಅಡ್ಡಗಟ್ಟಿ ತಗಾದೆ ತೆಗೆದಿದ್ದಾರೆ.

ಈ ಸಂದರ್ಭ ಮಾತಿಗೆ ಮಾತು ಬೆಳೆದಾಗ ತಾವು ತಂದಿದ್ದ ತಲವಾರಿನಿಂದ ಸಂತೋಷ್‌ಗೆ ಹಲ್ಲೆ ಮಾಡಿದ್ದಾರೆ. ಇದರಿಂದ ಸಂತೋಷ್ ಅವರ ಎರಡು ಕೈ ಹಾಗೂ ಎರಡು ಕಾಲುಗಳಿಗೆ ಗಂಭೀರ ಗಾಯವಾಗಿದೆ. ಘಟನೆಯ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದು ಯುವಕ ರಕ್ತದ ಮಡುವಿನಲ್ಲಿ ಕುಸಿದು ಬಿದಿದ್ದರು. ಗಾಯಗೊಂಡ ರಿಕ್ಷಾ ಚಾಲಕನನ್ನು ಸ್ಥಳೀಯರು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಸಂತೋಷ್, ನಿತಿನ್, ಪ್ರಾಣೇಶ್ ಮೂವರು ಆತ್ಮೀಯರಾಗಿದ್ದು, ಒಂದೇ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಆದರೆ ಎರಡು ವರ್ಷದ ಹಿಂದೆ ಸಂತೋಷ್ ಸಂಘಟನೆಯಿಂದ ದೂರ ಸರಿದು ತನ್ನ ಪಾಡಿಗೆ ತಾನಿದ್ದ. ಸಂಘಟನೆ ಬಿಟ್ಟ ಬಳಿಕ ಕೆಲವು ವಿಚಾರಗಳನ್ನು ಸಂತೋಷ್ ವಿರೋಧಿಸುತ್ತಿದ್ದ ಮತ್ತು ಈ ವಿಚಾರದಲ್ಲಿ ನಿತಿನ್ ಮತ್ತು ಸಂತೋಷ್ ಮಧ್ಯೆ ಹಲವು ಸಮಯದಿಂದ ವೈಮನಸ್ಸಿತ್ತು.

ಅ.17ರಂದು ಬೆಳಗ್ಗೆಯೂ ಇಬ್ಬರ ಮಧ್ಯೆ ವಾಗ್ವಾದ ನಡೆದಿತ್ತು. ಇದಾದ ಸ್ವಲ್ಪ ಹೊತ್ತಿನ ಬಳಿಕ ಸಂತೋಷ್‌ನ ಮೇಲೆ ದಾಳಿ ನಡೆದಿತ್ತು. ಈ ಕುರಿತು ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಭೇದಿಸಿದ ಮಂಗಳೂರು ಗ್ರಾಮಾಂತರ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Comments are closed.