ಕರಾವಳಿ

ಕೋಟ ಪಿಎಸ್ಐ ನಿತ್ಯಾನಂದ ಗೌಡರಿಗೆ ಬೈದು-ಬೆದರಿಸಿ ಕರ್ತವ್ಯಕ್ಕೆ ಅಡ್ಡಿ: ನಾಲ್ವರು ಅರೆಸ್ಟ್

Pinterest LinkedIn Tumblr

ಉಡುಪಿ: ರಾತ್ರಿ ರೌಂಡ್ಸ್‌ ಕರ್ತವ್ಯದಲ್ಲಿದ್ದ ಕೋಟ ಪಿಎಸ್ಐ ನಿತ್ಯಾನಂದ ಗೌಡ ಅವರಿಗೆ ಗುಂಪೊಂದು ಅವ್ಯಾಚವಾಗಿ ನಿಂದಿಸಿ, ಬೆದರಿಕೆ ಹಾಕಿದ್ದಲ್ಲದೇ ಹಲ್ಲೆಗೆ ಯತ್ನಿಸಿದ ಘಟನೆ ಬುಧವಾರ ಬೆಳಿಗ್ಗೆ 1:00 (ಮಂಗಳವಾರ ತಡರಾತ್ರಿ) ಗಂಟೆ ಸುಮಾರಿಗೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಶಿರೂರು ಮೂರುಕೈ ಜಂಕ್ಷನ್‌ ಎಂಬಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಗುರುಪ್ರಸಾದ್, ದಿಲೀಪ್, ಸುನೀಲ್, ಕಿರಣ್ ಎನ್ನುವರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ: ಮಂಗಳವಾರ ತಡರಾತ್ರಿ ಇಲಾಖಾ ವಾಹನದಲ್ಲಿ ಚಾಲಕನೊಂದಿಗೆ ರೌಡ್ಸ್ ಕರ್ತವ್ಯದಲಿದ್ದ ಕೋಟ ಪಿಎಸ್ಐ ನಿತ್ಯಾನಂದ ಗೌಡ ಅವರು 1:00 ಗಂಟೆ ಸುಮಾರಿಗೆ ಬ್ರಹ್ಮಾವರ ಪೊಲೀಸ್‌ ಠಾಣಾ ವ್ಯಾಪ್ತಿಯ ಶಿರೂರು ಮೂರುಕೈ ಜಂಕ್ಷನ್‌ ಬಳಿ ಬಂದಾಗ ಜಂಕ್ಷನಿನ ಬಲ ಭಾಗದ ಅಂಗಡಿಯ ಎದುರು ಕತ್ತಲೆಯಲ್ಲಿ ಮೂರು ಜನ ಯುವಕರು ಅನುಮಾನಸ್ಪದವಾಗಿ ನಿಂತಿದ್ದು ಹಾಗೂ ಜಂಕ್ಷನ್‌ನ ಎಡ ಭಾಗದಲ್ಲಿ 2 ಬೈಕ್ ಹಾಗೂ ಕಾರು ನಿಂತಿದ್ದನ್ನು ಗಮನಿಸಿ ಮೂವರ ಬಳಿ ಹೋಗಿ ವಿಚಾರಣೆ ಸಲುವಾಗಿ ಕರೆದಿದ್ದು ಅವರು ಓಡಿ ಹೋಗಲು ಪ್ರಯತ್ನಿಸಿದ್ದಾರೆ. ಕೂಡಲೇ ಪಿಎಸ್ಐ ನಿತ್ಯಾನಂದ ಗೌಡ ಹಾಗು ಜೀಪು ಚಾಲಕ ಅವರನ್ನು ಅಡ್ಡಗಟ್ಟಿ ಮೂವರ ಹೆಸರು ವಿಳಾಸ ಹಾಗೂ ಯಾಕೆ ಈ ಹೊತ್ತಲ್ಲಿ ಬಂದಿದ್ದೀರಿ ಎಂದು ಪ್ರಶ್ನಿಸಿದ್ದು ಯಾವುದೇ ಸಮರ್ಪಕ ಉತ್ತರ ನೀಡಿರಲಿಲ್ಲ. ಆ ಮೂವರು ಯುವಕರ ಬಗ್ಗೆ ತಿಳಿದುಕೊಳ್ಳುವ ಉದ್ದೇಶದಿಂದ ಆ ಮೂವರನ್ನು ಒಟ್ಟಿಗೆ ನಿಲ್ಲಿಸಿ ಫೋಟೊ ತೆಗೆದುಕೊಂಡು ಅವರ ಮೂವರ ಬಳಿ ಇದ್ದ ಮೊಬೈಲನ್ನು ವಶಕ್ಕೆ ಪಡೆದು ಬೆಳಿಗ್ಗೆ ಅವರನ್ನು ಕೋಟ ಪೊಲೀಸ್ ಠಾಣೆಗೆ ವಿಚಾರಣೆಗೆ ಬರುವಂತೆ ತಿಳಿಸಿದ್ದರು. ನಂತರ ಅಲ್ಲಿಯೇ ಪಕ್ಕದಲ್ಲಿದ್ದ ಬಾರ್‌ ಅಂಡ್‌ ರೆಸ್ಟೋರೆಂಟ್‌ವೊಂದರ ಎದುರು ಬಾಗಿಲು ಮುಚ್ಚಿದ್ದು ಹಿಂಬದಿ ನೋಡಿದಲ್ಲಿ ಬಾರ್‌ನ ಒಳಗೆ ಹಿಂಬದಿಯಲ್ಲಿ 10ರಿಂದ 12 ಯುವಕರು ಮದ್ಯಪಾನ ಮಾಡುತ್ತಿದ್ದು ಪೊಲೀಸರನ್ನು ನೋಡಿ ಲೈಟ್‌ ಆಫ್‌ ಮಾಡಿದ್ದರು.

(ಕೋಟ ಪಿಎಸ್ಐ ನಿತ್ಯಾನಂದ ಗೌಡ)

ಅವ್ಯಾಚವಾಗಿ ಬೈದು, ಬೆದರಿಕೆ!
ಇದಾದ ಬಳಿಕ ಮೂರು ಮೊಬೈಲ್‌ಗಳೊಂದಿಗೆ ಜೀಪಿನಲ್ಲಿ ಜಂಕ್ಷನ್ ದಾಟಿ ಬರುತ್ತಿರುವಾಗ ಆರೋಪಿ ಗುರುಪ್ರಸಾದ್ ಎನ್ನುವಾತ ಏರು ದನಿಯಲ್ಲಿ ಯಾವನೋ ನೀನು, ನಿಲ್ಲು ಅಲ್ಲಿ ನಿಂದು ಯಾವ ಕಾನ್‌ಸ್ಟೆನ್ಸಿ? ನೀನು ಇಲ್ಲಿ ಬಂದು ನನ್ನ ಯುವಕರನ್ನು ಕೇಳಿ ವಿಚಾರಿಸಲು ತಿಳಿಸಿದ್ದು ಯಾರು? ಮರ್ಯಾದೆಯಿಂದ ಮೊಬೈಲ್‌ ಕೊಡು. ನಿನಗೆ ಸಿ.ಎಮ್‌ ರಿಂದ ಕರೆ ಮಾಡಿಸಬೇಕಾ? ನೀನು ಕಾಪುವಿನಿಂದ ಬಂದವನು ಅಲ್ವಾ,’ ಎಂದು ಅವ್ಯಾಚ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದು ಆತನೊಂದಿಂಗೆ ಬಂದ ಇತರ 8 ರಿಂದ 10 ಮಂದಿ ಯುವಕರು ನಿತ್ಯಾನಂದ ಗೌಡ ಅವರು ಜೀಪಿನಲ್ಲಿ ಮುಂದೆ ಹೋಗಲು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ಮಾಡಲು ಪ್ರಯತ್ನಿಸಿದ್ದಾರೆ. ಘಟನೆ ವೇಳೆ ಯುವಕರು ಮದ್ಯಪಾನ ಮಾಡಿ ಮದ್ಯ ರಾತ್ರಿಯಲ್ಲಿ ಕರ್ತವ್ಯಕ್ಕೆ ಅಡ್ಡ ಪಡಿಸಿ ಬಳಿಕ ಕಾರು ಹಾಗೂ ಬೈಕಿನಲ್ಲಿ ಹೋಗಿದ್ದಾರೆ.

ಘಟನೆ ನಡೆದ ಸ್ಥಳವು ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಹಿನ್ನೆಲೆ ನಿತ್ಯಾನಂದ ಗೌಡ ಅವರು ಬ್ರಹ್ಮಾವರ ಪಿಎಸ್ಐ ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಅವರು ಆರೋಪಿಗಳನ್ನು ಪತ್ತೆಮಾಡಿ ನಾಲ್ವರನ್ನು ಬಂಧಿಸಿದ್ದಾರೆ. ಇತರ ಆರೋಪಿಗಳ ಬಂಧನಕ್ಕೆ ಬಲೆಬೀಸಲಾಗಿದೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.