
ಮಂಗಳೂರು ಅಕ್ಟೋಬರ್ 19: ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳಿಗೆ ವಿತರಿಸಲಾಗುತ್ತಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಸಿರಿವಂತರು ಸಹಾ ಇಲಾಖೆಗೆ ಸುಳ್ಳು ಮಾಹಿತಿ ನೀಡಿ ಸರಕಾರಕ್ಕೆ ವಂಚನೆ ಮಾಡಿರುವುದು ಕಂಡು ಬಂದಿರುತ್ತದೆ. ಅನರ್ಹರು ಪಡೆದುಕೊಂಡಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ತಾವಾಗಿಯೇ ಇಲಾಖೆಗೆ ಹಿಂದಿರುಗಿಸಲು ಸೆಪ್ಟೆಂಬರ್ 30ರ ಗಡುವು ನೀಡಲಾಗಿತ್ತು.
ಆದರೆ ಮತ್ತೊಮ್ಮೆ ಅವಕಾಶ ನೀಡಿ ಕೂಡಲೇ ಅನರ್ಹರು ಪಡೆದುಕೊಂಡಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಸಂಬಂಧ ಪಟ್ಟ ಕಚೇರಿಗೆ ಹಿಂದಿರುಗಿಸಬೇಕು. ಹಿಂದಿರುಗಿಸದೇ ಇದ್ದಲ್ಲಿ ಅಂತಹ ಕುಟುಂಬಗಳನ್ನು ಪತ್ತೆ ಮಾಡಿ ನಿಯಾಮಾನುಸಾರ ಕ್ರಿಮಿನಲ್ ಮೊಕದ್ದಮೆ ಹೂಡಲಾಗುತ್ತದೆ. ಮಾತ್ರವಲ್ಲದೇ, ಮುಕ್ತ ಮಾರುಕಟ್ಟೆ ದರದಲ್ಲಿ ಪಡಿತರ ಸಾಮಾಗ್ರಿಯ ದರವನ್ನು ವಸೂಲಿ ಮಾಡಲಾಗುತ್ತದೆ.
ಬಿಪಿಎಲ್ ಪಡಿತರ ಚೀಟಿ ಪಡೆಯಲು ಅರ್ಹರಲ್ಲದವರ ವಿವರ ಇಂತಿವೆ:
ಆದಾಯ ತೆರಿಗೆ ಪಾವತಿಸುತ್ತಿರುವ ಮತ್ತು 1000 ಚದರ ಅಡಿಗಿಂತ ದೊಡ್ಡದಾದ ಮನೆಯನ್ನು ಹೊಂದಿರುವವರು. ಕೇಂದ್ರ ಹಾಗೂ ರಾಜ್ಯ ಸರಕಾರಿ ನೌಕರರು ಮಾತ್ರವಲ್ಲದೇ, ತಮ್ಮ ಪಡಿತರ ಚೀಟಿಯಿಂದ ಉದ್ದೇಶಪೂರ್ವಕವಾಗಿ ಅಂತಹ ಕುಟುಂಬ ಸದಸ್ಯರ ಹೆಸರನ್ನು ತೆಗೆಸಿರುವವರು. ಸಹಕಾರ ಸಂಘಗಳ ಖಾಯಂ ನೌಕರರು, ಸ್ವಾಯತ್ತ ಸಂಸ್ಥೆ, ಮಂಡಳಿಗಳ ನೌಕರರು, ಆಸ್ಪತ್ರೆ ನೌಕರರು, ವಕೀಲರು, ಆಡಿಟರುಗಳು, ದೊಡ್ಡ ಅಂಗಡಿ, ಹೋಟೆಲ್ ವರ್ತಕರು ಇತರರು. ಸ್ವಂತ ಉಪಯೋಗಕ್ಕಾಗಿ ಕಾರು, ಲಾರಿ ಜೆಸಿಬಿ ವಾಹನಗಳನ್ನು ಹೊಂದಿರುವವರು. ಅನುದಾನಿತ ಶಾಲಾ ಕಾಲೇಜುಗಳ ನೌಕರರು, ಮನೆ, ಮಳಿಗೆ ಕಟ್ಟಡಗಳನ್ನು ಬಾಡಿಗೆಗ ನೀಡಿ ಆದಾಯ ಪಡೆಯುತ್ತಿರುವವರು ಬಹು ರಾಷ್ಟ್ರೀಯ ಕಂಪೆನಿ ಉದ್ದಿಮೆದಾರರು. ಇವರುಗಳು ಬಿಪಿಎಲ್ ಪಡಿತರ ಚೀಟಿ ಪಡೆಯಲು ಅರ್ಹರಲ್ಲ ಎಂದು ಜಿಲ್ಲಾಧಿಕಾರಿ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.
Comments are closed.