ಕರಾವಳಿ

ದುಬಾಯಿಯಲ್ಲಿ ರಂಜಿಸಿದ ಪದ್ಮಶಾಲಿ ದಶಮಾನೋತ್ಸವ ಪಾದಾರ್ಪಣಾ ಸಮಾರಂಭ 

Pinterest LinkedIn Tumblr

ಶ್ರೀಸತ್ಯ ನಾರಾಯಣ ಪೂಜೆ ಮತ್ತು ನಳ-ದಮಯಂತೀ ಯಕ್ಷಗಾನ ತಾಳಮದ್ದಳೆ 

ದುಬಾಯಿ ಅಕ್ಟೋಬರ್ 16: .ಪದ್ಮಶಾಲಿ ಬಂಧುಗಳು ದುಬಾಯಿ ಇದರ ಹತ್ತನೇ ವರ್ಷದ ಪಾದಾರ್ಪಣೆಯ ಪ್ರಯುಕ್ತ ದುಬಾಯಿ ಗೀಸಸ್ ನ ಬಿಲ್ವ ಸ್ಕೂಲ್ ಸಭಾಂಗಣದಲ್ಲಿ ನಡೆದ ಶ್ರೀ ಸತ್ಯನಾರಾಯಣ ಪೂಜೆ ಮತ್ತು ನಳ-ದಮಯಂತೀ ಯಕ್ಷಗಾನ ತಾಳಮದ್ದಳೆ ಪ್ರದರ್ಶನ ಅತ್ಯಂತ ಶಿಸ್ತು ಬದ್ಧವಾಗಿ ಭಕ್ತಿ-ಶ್ರದ್ಧೆಗಳಿಂದ ನಡೆಯಿತು.

ಪದ್ಮಶಾಲಿ ಸಮಾಜದ ಅಧ್ಯಕ್ಷ ರವಿ ಶೆಟ್ಟಿಗಾರ್ ಕಾರ್ಕಳ ಇವರ ನೇತೃತ್ವದಲ್ಲಿ ಸಮಾಜದ ಬಂಧುಗಳೆಲ್ಲ ಮಧ್ಯಾಹ್ನ ಮೂರು ಗಂಟೆಗೆ ಸರಿಯಾಗಿ ಪ್ರಾರಂಭವಾದ ಕಾರ್ಯಕ್ರಮ ಶ್ರೀ ಸತ್ಯ ನಾರಾಯಣ ಪೂಜೆಯ ವೈದಿಕ ವಿಧಿ ವಿಧಾನಗಳು ಪೂಜ್ಯ ಹರಿಪ್ರಸಾದ ತಂತ್ರಿಯವರ ಪೌರೋಹಿತ್ಯದಲ್ಲಿ ಸಾಂಗವಾಗಿ ನೆರವೇರಿತು.

ಸಂಘದ ಸದಸ್ಯ ಸದಸ್ಯೆಯರು ಮಕ್ಕಳು ಭಕ್ತಿಪೂರ್ವಕ ಭಜನಾ ಸಂಕೀರ್ತನೆ ನಡೆಸಿದರು. ನಂತರ ನಡೆದ ತಾಳಮದ್ದಳೆ ನಳ-ದಮಯಂತೀ ಕಾರ್ಯಕ್ರಮದಲ್ಲಿ ಖ್ಯಾತ ಭಾಗವತರಾದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸಂಸ್ಥಾಪಕ ಶ್ರೀ ಸತೀಶ ಶೆಟ್ಟಿ ಪಟ್ಲ ಹಾಗೂ ಸುಂಕದಕಟ್ಟೆ ಮೇಳದ ಪ್ರಧಾನ ಭಾಗವತರಾದ ಶ್ರೀಯುತ ಕರುಣಾಕರ ಶೆಟ್ಟಿಗಾರ್ ಕಾಶೀಪಟ್ಣ ಭಾಗವತಿಕೆಯಲ್ಲಿ, ಅತಿಥಿ ಕಲಾವಿದರಾದ ಪದ್ಮನಾಭ ಉಪಾಧ್ಯಾಯರು, ದಯಾನಂದ ಶೆಟ್ಟಿಗಾರ್ ಚೆಂಡೆ- ಮದ್ದಳೆಯಲ್ಲಿ ಮಾತ್ರವಲ್ಲದೇ ಯಕ್ಷಗಾನ ಅಭ್ಯಾಸ ತರಗತಿಯ ಹಿರಿಯ ಕಲಾವಿದರಾದ ಭವಾನಿ ಶಂಕರ ಶರ್ಮ ಮತ್ತು ಪುತ್ತಿಗೆ ವೆಂಕಟೇಶ ಶಾಸ್ತ್ರಿಯವರು ಚೆಂಡೆ- ಮದ್ದಳೆ ವಾದಕರಾಗಿ ಭಾಗವಹಿಸಿದರು, ಚಕ್ರತಾಳದಲ್ಲಿ ಶ್ರೀಯುತ ಸಚಿನ್ ಅಮೀನ್ ಉದ್ಯಾವರ ಸಹಕರಿಸಿದರು.

ಪ್ರಮುಖ ಪಾತ್ರದಲ್ಲಿ ಅತಿಥಿ ಕಲಾವಿದರಾದ ದಿನೇಶ ಶೆಟ್ಟಿಗಾರ್ ಕೋಡಪದವು ಬಾಹುಕನಾಗಿಯೂ, ಮುರಳೀಧರ ಶೆಟ್ಟಿಗಾರ್ ಕನ್ನಡಿಕಟ್ಟೆ ದಮಯಂತಿಯಾಗಿಯೂ ಮತ್ತು ಸದಾಶಿವ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಭೀಮಕ ಮಹಾರಾಜನಾಗಿಯೂ ಪಾತ್ರವನ್ನು ನೆರವೇರಿಸಿದರು.

ಯಕ್ಷಗಾನ ಅಭ್ಯಾಸ ತರಗತಿಯ ಕಲಾವಿದರಾದ ವಾಸು ಬಾಯಾರು, ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ, ಶರತ್ ಕುಡ್ಲ, ಬಾಲಕೃಷ್ಣ ಡಿ. ಶೆಟ್ಟಿಗಾರ್ ಕಿನ್ನಿಗೋಳಿ, ಸತೀಶ ಶೆಟ್ಟಿಗಾರ್ ವಿಟ್ಲ, ಕೃಷ್ಣಪ್ರಸಾದ್ ರಾವ್ ಸುರತ್ಕಲ್, ಗಿರೀಶ್ ನಾರಾಯಣ ಕಾಟಿಪಳ್ಳ, ಸಮಂತ ಗಿರೀಶ್ ಮತ್ತು ಲತಾ ಸುರೇಶ್ ಭಾಗವಹಿಸಿದರು.

ಕಾರ್ಯಕ್ರಮ ನಿರ್ವಹಣೆ ಮಾಡಿದ ಡಾ.ಪದ್ಮನಾಭ ಶೆಟ್ಟಿಗಾರ್ ತಾಳಮದ್ದಳೆಯ ಕುರಿತಾದ ಮಾಹಿತಿ,ಕಲಾವಿದರ ವಿವರ ನೀಡಿದರು. ಶ್ರೀಯುತ ಶೇಖರ್ ಡಿ. ಶೆಟ್ಟಿಗಾರ್ ಪಾತ್ರ ಪರಿಚಯದೊಂದಿಗೆ ಕಲಾವಿದರನ್ನು ಸಭೆಗೆ ಪರಿಚಯಿಸಿದರೆ ಕಲಾವಿದರನ್ನು ಸಂಘದ ಅಧ್ಯಕ್ಷರಾದ ಶ್ರೀಯುತ ರವಿ ಶೆಟ್ಟಿಗಾರ್ ಕಾರ್ಕಳ, ಮತ್ತು ಕಾರ್ಯದರ್ಶಿ ಶ್ರೀಮತಿ ಅರುಂಧತಿ ಮನೋಹರ್ ರವರು ಶಾಲು ಹೊದಿಸಿ ವೇದಿಕೆಗೆ ಆಹ್ವಾನಿಸಿದರು.

ಶ್ರೀಯುತ ದಿನೇಶ್ ಶೆಟ್ಟಿಕೊಟ್ಟಿಂಜರವರ ಸಂಯೋಜನೆಯಲ್ಲಿ ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಯ ಹಿಮ್ಮೇಳ-ಮುಮ್ಮೇಳದ ಕಲಾವಿದರು ಕಾರ್ಯಕ್ರಮಕ್ಕೆ ಸೊಬಗು ನೀಡಿದರು.

ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸಮಾಜದ ಸದಸ್ಯರು, ಕಾರ್ಯಕರ್ತರ ಶ್ರಮಗಳನ್ನು ಅಧ್ಯಕ್ಷರವಿ ಶೆಟ್ಟಿಗಾರ್ ಕಾರ್ಕಳ ಪ್ರಶಂಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಯು.ಎ.ಇಯ ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರಿಗೆ ಧನ್ಯವಾದಗಳನ್ನರ್ಪಿಸಿದರು. ಊರಿನಿಂದ ಬಂದ ಎಲ್ಲಾ ಅತಿಥಿ ಕಲಾವಿದರನ್ನು ಯು.ಎ.ಇಯ ಗಣ್ಯಾತಿಗಣ್ಯರ ಭಕ್ತ ಸಂದೋಹದ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಸ್ಥಳೀಯ ಕಲಾವಿದರನ್ನು ಗೌರವಿಸಲಾಯಿತು. ಅಭ್ಯಾಸ ತರಗತಿಯ ಸ್ಥಳೀಯ ಕಲಾವಿದರನ್ನು ಗೌರವಿಸಲಾಯಿತು. ನೆರೆದ ಎಲ್ಲಾ ಭಕ್ತ ಸಮುದಾಯಕ್ಕೆ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಿತು.

ವರದಿ, ಚಿತ್ರ : ಅಶೋಕ್ ಬೆಳ್ಮಣ್, ದುಬೈ.

Comments are closed.