ಕರಾವಳಿ

ಸರಕಾರಿ ಆಸ್ಪತ್ರೆಗೆ ರೋಗಿಗಳು ಬಂದಾಗ ವೈದ್ಯರು, ಸಿಬ್ಬಂದಿ ಸಿಡುಕಿದ್ರೆ ಹುಷಾರ್: ಸಚಿವ ಶ್ರೀರಾಮುಲು

Pinterest LinkedIn Tumblr

ಕುಂದಾಪುರ: ಆರೋಗ್ಯ ಇಲಾಖೆಯಲ್ಲಿ ಇರುವ ವೈದ್ಯರ ಕೊರತೆಯನ್ನು ತುಂಬಲು ಈ ಹಿಂದೆ ಇದ್ದ ಕೆಪಿಎಸ್‌ಸಿ ನೇಮಕಾತಿ ಪದ್ದತಿಯನ್ನು ಬದಲಾಯಿಸಿ ಆರೋಗ್ಯ ಇಲಾಖೆಯ ಮೂಲಕವೇ ನೇಮಕಾತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾ ಮಟ್ಟದಲ್ಲಿ ಅರ್ಹ ವೈದ್ಯರನ್ನು ಗುರುತಿಸಿ ಜಿಲ್ಲೆ ಹಾಗೂ ರಾಜ್ಯಕ್ಕೆ ಅದ್ಯತೆಯ ನೆಲೆಯಲ್ಲಿ ಅವರ ಸೇವೆ ಬಳಸಿಕೊಳ್ಳಲಾಗುವುದು ಎಂದು ರಾಜ್ಯದ ಆರೋಗ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು.

ಕುಂದಾಪುರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಉಡುಪಿ ಅಂಬಲಪಾಡಿಯ ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ವತಿಯಿಂದ ಅಂದಾಜು 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ 150 ಹಾಸಿಗೆಗಳ ದಿ.ಲಕ್ಷ್ಮೀ ಸೋಮ ಬಂಗೇರ ನೂತನ ಹೆರಿಗೆ ಆಸ್ಪತ್ರೆಯ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 

ಕುಂದಾಪುರ ಮಾದರಿ ಆಸ್ಪತ್ರೆ…
ಕುಂದಾಪುರದ ಸರ್ಕಾರಿ ಆಸ್ಪತ್ರೆಯನ್ನು ತಾಯಿ–ಮಗು ಆಸ್ಪತ್ರೆಯನ್ನಾಗಿಸುವ ಕುರಿತು ಇರುವ ಬೇಡಿಕೆಯನ್ನು ಈಡೇರಿಸುವುದರ ಜತೆಯಲ್ಲಿ ಈ ಆಸ್ಪತ್ರೆಗೆ ಅವಶ್ಯಕವಾಗಿರುವ ವೈದ್ಯರು, ಸಿಬ್ಬಂದಿಗಳು ಹಾಗೂ ಸೌಲಭ್ಯಗಳನ್ನು ಕೂಡಲೇ ಒದಗಿಸುವ ಮೂಲಕ ರಾಜ್ಯದ ಮಾದರಿ ಸರ್ಕಾರಿ ಆಸ್ಪತ್ರೆಯನ್ನಾಗಿಸುವ ನಿಟ್ಟಿನಲ್ಲಿ ತಾನು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ. ಎನ್‌ಆರ್‌ಎಚ್‌ಎಂ ಯೋಜನೆಯಡಿಯಲ್ಲಿ ಕಾರ್ಯ ನಿರ್ವಹಿಸುವ ಶುಶ್ರೂಷಕಿಯರನ್ನು ಹೊರತು ಪಡಿಸಿ ಕನಿಷ್ಠ ವೇತನ ಪಡೆದುಕೊಳ್ಳುವ ಶುಸ್ರೂಷಕಿಯರ ವೇತನವನ್ನು 17,500 ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಆಯಾಗಳವರ ಸೇವೆಯನ್ನು ಖಾಯಂ ಮಾಡಬೇಕು ಎನ್ನುವ ಬೇಡಿಕೆ ಇದ್ದು ಈ ಕುರಿತು ಮುಖ್ಯಮಂತ್ರಿಗಳು ಹಾಗೂ ಆರ್ಥಿಕ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ನ್ಯಾಯ ಕೊಡಿಸಲಾಗುವುದು.

ಆಶಾಕಾರ್ಯಕರ್ತೆಯರಿಗೆ ಗುಡ್ ನ್ಯೂಸ್..!
ಹಳ್ಳಿಗಾಡಿನಲ್ಲಿ ಕಷ್ಟಪಟ್ಟು ದುಡಿಯುವ ಆಶಾ ಕಾರ್ಯಕರ್ತೆಯರ ಶ್ರಮದ ಅರಿವಿದೆ. ಬೇರೆ ರಾಜ್ಯದಲ್ಲಿ ಇರುವ ಆಶಾ ಕಾರ್ಯಕರ್ತೆಯರ ಗೌರವ ಧನದ ಮಾಹಿತಿ ಪಡೆದು ರಾಜ್ಯದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಈಗಾಗಲೇ ಆಶಾ ಕಾರ್ಯಕರ್ತೆಯರ ಗೌರವ ಧನವನ್ನು 500 ರೂ. ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಅವರಿಗೆ 9,000 ರೂ. ದೊರಕುವಂತೆ ಪ್ರಯತ್ನ ಮಾಡಲಾಗುವುದು ಎಂದರು.

ರೋಗಿಗಳು ಬಂದಾಗ ಸೊಟ್ಟ ಮುಖ ಮಾಡಿದ್ರೆ ಹುಷಾರ್!
ರೋಗಿಗಳು ಬಂದಾಗ ಖಾಸಗಿ ಆಸ್ಪತ್ರೆಯ ವೈದ್ಯರಂತೆ ಸರ್ಕಾರಿ ಆಸ್ಪತ್ರೆಯಲ್ಲಿಯೂ ನಗು ಮೊಗದ ಸೇವೆಯನ್ನು ನೀಡಬೇಕು. ಕೆಲವರು ಗಂಟು ಮುಖ ಮಾಡಿ ರೋಗಿಗಳಿಗೆ ಸಮಸ್ಯೆ ಮಾಡ್ತಾರೆ. ಅಂತವರ ಬಗ್ಗೆ ದೂರು ಬಂದರೆ ಸುಮ್ಮನಿರಲ್ಲ. ಇನ್ನು ಸರ್ಕಾರಿ ಹಾಗೂ ಖಾಸಗಿ ಎರಡು ಕಡೆ ಕಾರ್ಯ ಮಾಡುವ ವೈದ್ಯರ ವಿರುದ್ದ ದೂರುಗಳು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಒಂದಿಬ್ಬರು ವ್ಯಕ್ತಿಗಳು ಮಾಡುವ ಭ್ರಷ್ಟಾಚಾರ ಹಾಗೂ ಕರ್ತವ್ಯ ನಿರ್ಲಕ್ಷ್ಯದಿಂದಾಗಿ ವೈದ್ಯ ಸಮೂಹಕ್ಕೆ ಕಳಂಕ ಆಗಬಾರದು. ತಪ್ಪು ಮಾಡಿರುವ ವ್ಯಕ್ತಿಗಳಿಗೆ ಶಿಕ್ಷೆಯಾಗಬೇಕು. ಪ್ರತಿಯೊಬ್ಬರು ಅಧಿಕಾರ ಹಾಗೂ ಸ್ವಾರ್ಥವನ್ನು ನೋಡುವ ಪ್ರಸ್ತುತ ಕಾಲಘಟ್ಟದಲ್ಲಿ ಯಾವುದೆ ಪ್ರತಿಫಲಾಪೇಕ್ಷೆ ಇಲ್ಲದೆ ಕೋಟ್ಯಾಂತರ ರೂ. ವೆಚ್ಚದಲ್ಲಿ ಗುಣಮಟ್ಟದ ಸೌಲಭ್ಯಗಳುಳ್ಳ ಆಸ್ಪತ್ರೆಯನ್ನು ಕಟ್ಟಿ ಸರ್ಕಾರಕ್ಕೆ ನೀಡುವ ಮೂಲಕ ಡಾ.ಜಿ.ಶಂಕರ ರಾಜ್ಯಕ್ಕೆ ಮಾದರಿ ಎನಿಸುವಂತಾ ಮಾನವೀಯ ಮೌಲ್ಯದ ಹರಿಕಾರರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು, ಹೆರಿಗೆ ಆಸ್ಪತ್ರೆಗಳು ಇಲ್ಲದ ದಿನಗಳಲ್ಲಿ ಹೆರಿಗೆಯ ಸಮಯದಲ್ಲಿ ಸಾಯುವರ ಸಂಖ್ಯೆ ಹೆಚ್ಚಾಗಿತ್ತು. ಇದೀಗ ಸಾಕಷ್ಟು ಆಸ್ಪತ್ರೆಗಳು ಆಗಿರುವುದರಿಂದ ಸಾವಿನ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. ಬಡವರ ವೈದ್ಯಕೀಯ ಚಿಕಿತ್ಸೆಗಳಿಗೆ ಸಹಾಯವಾಗಲಿ ಎಂದು ಅನುಷ್ಠಾನಕ್ಕೆ ಬಂದಿರುವ ಆಯುಷ್ಮಾನ್‌ ಯೋಜನೆಯ ನಿಯಮಾವಳಿಗಳಿಂದಾಗಿ ಶೇ.50 ರಷ್ಟು ಜನರಿಗೂ ಇದರ ಉಪಯೋಗವಾಗುತ್ತಿಲ್ಲ. ಇದನ್ನು ಸರಳೀಕರಣಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

ಉಡುಪಿ ಅಂಬಲಪಾಡಿಯ ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಡಾ.ಜಿ.ಶಂಕರ ಪ್ರಾಸ್ತಾವಿಕ ಮಾತನಾಡಿದರು. ಶಾಲಿನಿ ಜಿ.ಶಂಕರ ಹೆರಿಗೆ ವಾರ್ಡ್‌ನ್ನು ಉದ್ಘಾಟಿಸಿದರು. ಶಾಸಕರಾದ ರಘುಪತಿ ಭಟ್‌, ಬಿ.ಎಂ.ಸುಕುಮಾರ ಶೆಟ್ಟಿ, ಮೀನುಗಾರರ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಉಡುಪಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಕುಂದಾಪುರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಕುಂದರ್‌, ಕಂದಾಯ ಉಪವಿಭಾಗಾಧಿಕಾರಿ ಕೆ.ರಾಜು, ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹಾಗೂ ಆರೋಗ್ಯಾಧಿಕಾರಿ ಡಾ.ರಾಬರ್ಟ್‌ ಇದ್ದರು.

ಡಾ.ಆರತಿ, ಡಾ.ಚಂದ್ರ ಮರಕಾಲ, ಡಾ.ವಿಜಯ್‌ಶಂಕರ, ಇಂಜಿನಿಯರ್‌ ಯೋಗೀಶ್ಚಾಂದ್ರಾಧರ, ಪ್ರಕಾಶ ಕರ್ಕೇರಾ, ನಂದ ಕಿಶೋರ, ಜಗದೀಶ್‌ ಮಾರ್ಕೋಡು ಅವರನ್ನು ಗೌರವಿಸಲಾಯಿತು.

ಸತೀಶ್‌ ಎಂ ನಾಯಕ್‌ ಸ್ವಾಗತಿಸಿದರು, ಸದಾನಂದ ಬಳ್ಕೂರು ವಂದಿಸಿದರು, ಅಶೋಕ ತೆಕ್ಕಟ್ಟೆ ಹಾಗೂ ಸುಧಾಕರ ಕಾಂಚನ್‌ ನಿರೂಪಿಸಿದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.