ಕರಾವಳಿ

2 ವರ್ಷದ ಬಳಿಕ ಅಂತೂ ಇಂತೂ ಉಡುಪಿ ಜಿಲ್ಲೆಯಲ್ಲಿ ಆರಂಭವಾಯಿತು ಮರಳುಗಾರಿಕೆ!

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲಾದ್ಯಂತ ಕಳೆದೆರಡು ವರ್ಷಗಳಿಂದ ಮರೀಚಿಕೆಯಾಗಿದ್ದ ಮರಳು ಇದೀಗಾ ಜನರಿಗೆ ದೊರೆಯಲಾರಂಭಿಸಿದ್ದು ಇಂದು (ಶುಕ್ರವಾರ) ಸಿ.ಆರ್.ಝಡ್ ವ್ಯಾಪ್ತಿಯ ನದಿಯಿಂದ ಮರಳುಗಾರಿಕೆ (ಮರಳು ದಿಬ್ಬ ತೆರವು) ಕಾರ್ಯ ನಡೆದಿದ್ದು ವರ್ಷಗಳಿಂದ ನಡೆಯುತ್ತಿದ್ದ ಹೋರಾಟಕ್ಕೊಂದು ಫಲ ಸಿಕ್ಕಿದಂತಾಗಿದೆ. ಈ ಮೂಲಕ ಮರಳುಗಾರಿಕೆ ಆರಂಭಕ್ಕಾಗಿ ಕಾಯುತ್ತಿದ್ದ ಬಡ ವರ್ಗದ ಜನರ ಮೊಗದಲ್ಲಿ ಮಂದಹಾಸ ಕಾಣಿಸಿದೆ.

(ಸಾಂದರ್ಭಿಕ ಚಿತ್ರ)

ಉಡುಪಿ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದ ನದಿ ಪಾತ್ರಗಳಲ್ಲಿ ಗುರುತಿಸಿರುವ 8 ಮರಳು ದಿಬ್ಬಗಳನ್ನು ತೆರವುಗೊಳಿಸಲು ಈ ತನಕ ಒಟ್ಟು 42 ಮರಳು ಪರವಾನಿಗೆಗಳನ್ನು ವಿತರಿಸಲಾಗಿದೆ. ಮರಳು ಪರವಾನಿಗೆದಾರರು ಮರಳು ದಿಬ್ಬಗಳಲ್ಲಿನ ಮರಳನ್ನು ತೆರವುಗೊಳಿಸಲು ಪ್ರಾರಂಭಿಸಿದ್ದು, ಸೆ.27 ಶುಕ್ರವಾರದಂದು ಒಟ್ಟು 85 ಮೆ.ಟನ್‍ನಷ್ಟು ಮರಳನ್ನು ಸಾಗಾಟ ಮಾಡಿಲಾಗಿದೆ ಎಂದು ಉಡುಪಿ ಹಿರಿಯ ಭೂವಿಜ್ಞಾನಿ/ಅನುಷ್ಠಾನಾಧಿಕಾರಿಜಿಲ್ಲಾ 07 ಸದಸ್ಯರ ಸಮಿತಿ ಪ್ರಕಟನೆ ತಿಳಿಸಿದೆ.

ಬಹುದಿನಗಳ ಹೋರಾಟ, ಶ್ರಮ ಸಾರ್ಥಕವಾಯಿತು. ಉಡುಪಿ ಜಿಲ್ಲೆಯಲ್ಲಿ ಮರಳು ದಿಬ್ಬ ತೆರವುಗೊಳಿಸಲು 158ಕ್ಕೂ ಹೆಚ್ಚು ಪರವಾನಿಗೆಗಳನ್ನು ನೀಡಲಾಗುತ್ತಿದೆ. ದುಡಿದುಣ್ಣುವ ಕಾರ್ಮಿಕರು ಮತ್ತು ಬಡವರ ಮನೆ, ನಿಂತು ಹೋಗಿರುವ ವಿವಿಧ ಕಾಮಗಾರಿಗಳಿಗೆ ಮರಳು ಸಿಗುವ ಮೂಲಕ ಚಾಲನೆ ಸಿಕ್ಕರೆ ನನಗದು ಖುಷಿ ಮತ್ತು ಸಮಾಧಾನ. ದುಡಿಯುವವರ ಮುಖದಲ್ಲಿ ನಗು ಮೂಡಲಿ.
– ಸಚಿವ ಕೋಟ ಶ್ರೀನಿವಾಸ ಪೂಜಾರಿ (ಟ್ವೀಟ್ ಮೂಲಕ)

ಸರಿಸುಮಾರು ಎರಡು ವರ್ಷಗಳ ನಂತರ ಇಂದಿನಿಂದ ಮತ್ತೆ ಮರಳುಗಾರಿಕೆ ಆರಂಭವಾಗಿದೆ. ಕಾರ್ಮಿಕರು, ಅರ್ಧದಲ್ಲಿ ನಿಂತಿರುವ ಬಡವರ ಮನೆ, ಎಲ್ಲಾ ಕಾಮಗಾರಿಗಳಿಗೆ ವೇಗ ಸಿಗುವ ಸೂಚನೆ ದೊರಕಿದೆ. ಜಯಕರ್ನಾಟಕ ಸಂಘಟನೆ ಉಡುಪಿ ಜಿಲ್ಲಾ ಘಟಕವು ಕೂಡ ಮರಳುಗಾರಿಕೆಗೆ ಸಂಬಂಧಿಸಿದಂತೆ ಹಲವು ಹೋರಾಟಗಳಲ್ಲಿ ಕೈ ಜೋಡಿಸಿ, ಅಧಿಕಾರಿಗಳನ್ನು ಸಂಪರ್ಕಿಸಿ ಮನವಿಗಳನ್ನು ನೀಡಿದ್ದೇವೆ. ಎಲ್ಲಾ ,ಸಚಿವರಿಗೆ, ಶಾಸಕರಿಗೆ, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಧನ್ಯವಾದ. ಉತ್ತಮ ಸ್ಪಂದನೆ ನೀಡಿದ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೂ ಜಯಕರ್ನಾಟಕ ಸಂಘಟನೆಯ ಪರವಾಗಿ ಅಭಿನಂದನೆ. ಮರಳುಗಾರಿಕೆಯನ್ನು ನಂಬಿಕೊಂಡಿದ್ದ ಸಾವಿರಾರು ಕಾರ್ಮಿಕರು ನೆಮ್ಮದಿಯ ಜೀವನ ನಡೆಸಲಿ
– ಸತೀಶ್ ಪೂಜಾರಿ, ಜಿಲ್ಲಾಧ್ಯಕ್ಷರು ಜಯಕರ್ನಾಟಕ ಸಂಘಟನೆ ಉಡುಪಿ

(ವರದಿ- ಯೋಗೀಶ್ ಕುಂಭಾಸಿ)

 

Comments are closed.