ಕರಾವಳಿ

ಮಾದಕ ದ್ರವ್ಯ ಸೇವನೆಯಿಂದ ಬದುಕು ನಾಶ – ಪ್ರಕೃತಿಯನ್ನು ಸೇವಿಸಿದರೆ ಜೀವನೋಲ್ಲಾಸ ; ಪೊಲೀಸ್ ಕಮಿಷನರ್

Pinterest LinkedIn Tumblr

ಮಂಗಳೂರು : ಮಾದಕ ದ್ರವ್ಯ ಸೇವನೆಯಿಂದ ಕಿಕ್ ಬರುವುದಿಲ್ಲ, ಅದರ ಬದಲು ಪ್ರಕೃತಿಯನ್ನು ಸೇವಿಸಿದರೆ, ಜೀವನೋಲ್ಲಾಸದ ಕಿಕ್ ಸಿಗಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಂವೇದನಾಶೀಲರಾಗಿರಬೇಕು ಎಂದು ನಗರ ಪೊಲೀಸ್ ಕಮಿಷನರ್ ಪಿ.ಎಸ್.ಹರ್ಷ ಹೇಳಿದ್ದಾರೆ.

ಮಂಗಳೂರಿನ ಕೆನರಾ ಕಾಲೇಜಿನಲ್ಲಿ ದ.ಕ.ಕಾರ್ಯನಿರತ ಪತ್ರಕರ್ತರ ಸಂಘ,ದ.ಕ.ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಆಶ್ರಯದಲ್ಲಿ ಮಂಗಳವಾರ ನಡೆದ `ಶಾಲಾ ಕಾಲೇಜುಗಳಲ್ಲಿ ಕೋಮುಸೌಹಾರ್ದತೆ ಜಾಗೃತಿ ಹಾಗೂ ಮಾದಕ ದ್ರವ್ಯ, ಸೈಬರ್ ಕ್ರೈಂ ವಿರುದ್ಧಅಭಿಯಾನದಲ್ಲಿ ಜಾಗೃತಿ ಪೋಸ್ಟರ್’ ಬಿಡುಡೆಗೊಳಿಸಿ ಅವರು ಮಾತನಾಡಿದರು.

ಮಾದಕದ್ರವ್ಯಗಳು ನಮ್ಮನ್ನು ವಾಸ್ತವ ಜಗತ್ತಿನಿಂದ ದೂರ ತಳ್ಳುತ್ತವೆ. ಇದರ ಬದಲು ಪ್ರಕೃತಿಯನ್ನು ಆಸ್ವಾದಿಸುವುದನ್ನು ಕಲಿಯಬೇಕು. ಪಶ್ಚಿಮಘಟ್ಟ, ನದಿ, ಕಿನಾರೆಗಳಲ್ಲಿ ಸಿಗುವ ಅಹ್ಲಾದಕರ ವಾತಾವರಣ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಮಾದಕದ್ರವ್ಯ ದಂಧೆಕೋರರು ಹಣಕ್ಕಾಗಿ ಇಂತಹಕೃತ್ಯಗಳಿಗೆ ಅಮಾಯಕ ಯುವಜನತೆಯನ್ನು ಬಲಿ ಪಡೆಯುತ್ತಿದ್ದಾರೆ.ಇದರಿಂದ ಸಿಗುವ ಮೊತ್ತವನ್ನು ಹವಾಲ, ಉಗ್ರ ಚಟುವಟಿಕೆಗೆ ಮುಂತಾದ ಕೃತ್ಯಗಳಿಗೆ ಬಳಕೆ ಮಾಡುತ್ತಾರೆ. ಆದ್ದರಿಂದ ಯುವ ಜನತೆ ಇಂತಹಪ್ರಲೋಭನೆಗೆ ಒಳಗಾಗಬಾರದು ಎಂದು ಅವರು ಕಿವಿ ಮಾತು ಹೇಳಿದರು.

ಸೈಬರ್ ಅಪರಾಧ ಎಚ್ಚರಿಕೆ: ಪ್ರಸಕ್ತ ಯುವಜನತೆಗೆ ಮನೆ ಮಂದಿ, ಸ್ನೇಹಿತರಿಗಿಂತ ಮೊಬೈಲ್ ಜೊತೆಗಾರಎನಿಸಿಬಿಟ್ಟಿದೆ. ಮೊಬೈಲ್‍ನಲ್ಲಿ ಆಟವಾಡುವುದನ್ನೇ ಶ್ರೇಷ್ಠ ಎಂದು ಭಾವಿಸಿರುವ ಯುವಜನತೆ ಸೈಬರ್ ಅಪರಾಧಗಳಲ್ಲಿ ತೊಡಗಿಕೊಳ್ಳುತ್ತದೆ. ಅಂತರ್ಜಾಲ ಎನ್ನುವುದು ತಳ ಇಲ್ಲದ ಬಾವಿಯಾಗಿದ್ದು, ಯುವಜನತೆ ಆನ್‍ಲೈನ್ ಮನೋವಿಕೃತಿಗೆ ಬಲಿಪಶುವಾಗುತ್ತಿದ್ದಾರೆ. ಜಾತಿ, ಕೋಮುವಾದದಿಂದ ದೂರವಾಗಿ, ಉತ್ತಮ ಭಾರತೀಯರಾಗಿ ರೂಪುಗೊಳ್ಳಬೇಕು. ಜವಾಬ್ದಾರಿಯುವ ಪ್ರಜೆಗಳಾಗಿ ಬಾಳಬೇಕು ಎಂದು ಅವರು ಹೇಳಿದರು.

ಮನೆಯಿಂದಲೇ ಜಾಗೃತಿಯಾಗಲಿ:ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಕಡ್ಲೂರ್ ಸತ್ಯನಾರಾಯಣಾಚಾರ್ಯ, ಸಮಾಜದ ಆಗುಹೋಗುಗಳನ್ನುಗುರುತಿಸುವ ಮಾಧ್ಯಮ ರಂಗ, ಸಂವಿಧಾನದ ನಿಜವಾದ ನಾಲ್ಕನೇ
ಆಧಾರಸ್ತಂಭವಾಗಿ ಕೆಲಸ ಮಾಡಬೇಕು. ಕೋನು ಸೌಹಾರ್ದತೆ ಬೆಸೆಯುವಲ್ಲಿ ಮಂಗಳೂರು ಬ್ರ್ಯಾಂಡ್ ಆಗಬೇಕು. ಪ್ರಸ್ತುತ ಮಾದಕದ್ರವ್ಯ ವ್ಯಸನ ಮೇರೆಮೀರುತ್ತಿದ್ದು, ಇದರ ಪಿಡುಗನ್ನು ಕಿತ್ತು ಹಾಕಲೇ ಬೇಕು. ಯುವ ಜನತೆಯ ಪಬ್ ಸಂಸ್ಕೃತಿ ದೂರವಾಗಬೇಕು. ಇಲ್ಲದಿದ್ದರೆ ಯುವಶಕ್ತಿಯನ್ನು ಹಾಳು ಮಾಡುವ ಜೊತೆಗೆ ದೇಶವನ್ನೂ ನಾಶ ಮಾಡುತ್ತದೆ. ಈ ಜಾಗೃತಿ ಮನೆಯಿಂದಲೇ ಆರಂಭವಾಗಬೇಕು ಎಂದು ಆಶಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಗಂಗಾಧರ್, ಕೆನರಾ ಕಾಲೇಜು ಆಡಳಿತ ಮಂಡಳಿ ಗೌರವ ಕಾರ್ಯದರ್ಶಿ ರಂಗನಾಥ ಭಟ್, ಕೆನರಾ ಕಾಲೇಜು ಪ್ರಾಂಶುಪಾಲೆ ಡಾ.ಕೆ.ವಿ.ಮಾಲಿನಿ, ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಪುಷ್ಪರಾಜ್ ಪ್ರತಿಜ್ಞೆ ಬೋಧಿಸಿದರು. ಭಾಸ್ಕರ ರೈ ಕಟ್ಲ ವಂದಿಸಿದರು. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ನಿರೂಪಿಸಿದರು.

Comments are closed.