ಕರಾವಳಿ

ನೆಂಟನ ನೆಪದಲ್ಲಿ ಮನೆಗೆ ಕನ್ನವಿಟ್ಟ ಖತರ್ನಾಕ್ ಆರೋಪಿಯನ್ನು ಬಂಧಿಸಿದ ಕಾಪು ಪೊಲೀಸರು

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ಕಾಪುವಿನ ಶಂಕರಪುರ ಮೂಡಬೆಟ್ಟು ಗ್ರಾಮ ವ್ಯಾಪ್ತಿಯ ಮನೆಯೊಂದರಲ್ಲಿ ನಡೆದ ನಾಲ್ಕು ಮುಕ್ಕಾಲು ಲಕ್ಷದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಕಾಪು ಪೊಲೀಸರು ಆರೋಪಿಯನ್ನು ಬಂಧಿಸಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕಾಪು ಪೊಲಿಪು ನಿವಾಸಿ ನಿಶಾಂತ್ ಎಸ್.ಕುಮಾರ್ (19) ಬಂಧಿತ ಆರೋಪಿ.

ಘಟನೆ ವಿವರ:
ಸೆಪ್ಟೆಂಬರ್ 11 ರಂದು ಶಂಕರಪುರ ಮೂಡಬೆಟ್ಟು ನಿವಾಸಿ ಶಂಕರ ಎಂಬವರು ಮನೆಯ ಕಪಾಟನ್ನು ತೆರೆದು ನೋಡಿದಾಗ ಒಳಗಡೆ ಇಟ್ಟಿದ್ದ ಸುಮಾರು 145.575 ಗ್ರಾಂ ತೂಕದ ಚಿನ್ನಾಭರಣಗಳು ಕಾಣೆಯಾಗಿದ್ದು, ಸುಮಾರು 2 ತಿಂಗಳಿನಿಂದ ಮನೆಯಲ್ಲಿ ತಾಯಿಯನ್ನು ಬಿಟ್ಟು ಉಳಿದ ಎಲ್ಲರೂ ಕೆಲಸಕ್ಕೆ ಹೋದ ಸಮಯದಲ್ಲಿ ಯಾರೋ ಕಳ್ಳರು ಚಿನ್ನಾಭರಣವನ್ನು ಕಪಾಟಿನಿಂದ ಕೀ ಉಪಯೋಗಿಸಿ ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಚಿನ್ನಾಭರಣದ ಅಂದಾಜು ಮೌಲ್ಯ 4,80,000/- ರೂಪಾಯಿ ಆಗಬಹುದು ಎಂಬಿತ್ಯಾದಿ ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು.

ಪೊಲೀಸರಿಗೆ ಸಿಕ್ಕ ಖತರ್ನಾಕ್..
ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ ಕಾಪು ಪೊಲೀಸರು ಸಪ್ಟೆಂಬರ್ 18ರಂದು ಬೆಳಗ್ಗೆ 08:00 ಗಂಟೆಗೆ ಕಾಪು ಬಸ್‌ನಿಲ್ದಾಣದ ಬಳಿ ಸಂಶಯಾಸ್ಪದ ವ್ಯಕ್ತಿಯು ಇದ್ದ ಬಗ್ಗೆ ಮಾಹಿತಿ ದೊರೆತಂತೆ ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದ್ದು ಆತ ತನ್ನ ಹೆಸರು ನಿಶಾಂತ್ ಎಸ್.ಕುಮಾರ್ ಎಂದು ಮಾಹಿತಿ ನೀಡಿದ್ದ. ಆತನನ್ನು ಪ್ರಕರಣಕ್ಕೆ ಸಂಬಂಧಿಸಿ ಕೂಲಂಕುಷವಾಗಿ ವಿಚಾರಿಸಲಾಗಿ ಆತನು ಕಳವು ಮಾಡಿದ ಚಿನ್ನಾಭರಣಗಳಲ್ಲಿ ಕೆಲವು ಚಿನ್ನಾಭರಣಗಳನ್ನು ಬಂಗಾರದ ಮಳಿಗೆಗಳಲ್ಲಿ ಬದಲಿಸಿ ಬೇರೆ ಆಭರಣಗಳನ್ನು ಪಡೆದಿದ್ದು, ಅವುಗಳನ್ನು ಸಹಕಾರಿ ಬ್ಯಾಂಕ್‌ನಲ್ಲಿ ಅಡವು ಇಟ್ಟಿರುವುದಾಗಿ ಹಾಗೂ ಉಳಿದ ಚಿನ್ನಾಭರಣಗಳು ತನ್ನಲ್ಲಿಯೇ ಇದ್ದು, ಈ ದಿನ ಅವುಗಳನ್ನು ಉಡುಪಿ ಕಡೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದ.

ವಶಕ್ಕೆ ಪಡೆದ ಸೊತ್ತುಗಳು!
ಆತನ ವಶದಲ್ಲಿದ್ದ ಹಾಗೂ ಸಹಕಾರಿ ಬ್ಯಾಂಕ್‌ನಲ್ಲಿ ಅಡವು ಇರಿಸಿದ್ದ 1) ಚಿನ್ನದ ಗಜಲಕ್ಷ್ಮಿಯ ಚಿತ್ರದ ಪೆಂಡೆಂಟ್ ಇರುವ ನೆಕ್ಲೇಸ್ ಸರ -1, ಅಂದಾಜು ಮೌಲ್ಯ ರೂ. 52,300, 2) ಚಿನ್ನದ ರಾಣಿ ಎಲಿಜಬೆತ್‌ನ ಪೆಂಡೆಂಟ್ ಇರುವ ರೋಪ್‌ಚೈನ್-1 ಅಂದಾಜು ಮೌಲ್ಯ ರೂ. 38,000/-, 3) ಚಿನ್ನದ ಹವಳ ಕೂರಿಸಿದ ಅಗಲದ ಬಳೆ -1 ಅಂದಾಜು ಮೌಲ್ಯ ರೂಪಾಯಿ 29,700/-, 4) ಚಿನ್ನದ ನವರತ್ನ ಉಂಗುರ -1 ಅಂದಾಜು ಮೌಲ್ಯ ರೂಪಾಯಿ 19,000/-, 5) ಚಿನ್ನದ ಕೆಂಪು ಕಲ್ಲು ಇರುವ ಬೆಂಡೋಲೆ -1 ಜೊತೆ ಅಂದಾಜು ಮೌಲ್ಯ ರೂಪಾಯಿ 8,200/-, 6) ಚಿನ್ನದ ಅಮೇರಿಕನ್ ಡೈಮಂಡ್‌ನ ಬೆಂಡೋಲೆ -1 ಜೊತೆ ಅಂದಾಜು ಮೌಲ್ಯ ರೂಪಾಯಿ 7,000/-, 7) ಪದಕ ಇರುವ ಮುತ್ತಿನ ಸರ – 1 ಅಂದಾಜು ಮೌಲ್ಯ ರೂಪಾಯಿ 25,000/-, 8) ಚಿನ್ನದ ಸಿಂಗಲ್ ಬೆಂಡೋಲೆ -1 ಅಂದಾಜು ಮೌಲ್ಯ ರೂಪಾಯಿ 6,200/-, 9) ಚಿನ್ನದ ಪೆಂಡೆಂಟ್ ಇರುವ ಚೈನ್ ಅಂದಾಜು ಮೌಲ್ಯ ರೂಪಾಯಿ 24,970/-, 10) ಚಿನ್ನದ ಪವಿತ್ರ ಉಂಗುರ -1 ಅಂದಾಜು ಮೌಲ್ಯ ರೂಪಾಯಿ 8,398/-, 11) ಚಿನ್ನದ ಉಂಗುರ -1 ಅಂದಾಜು ಮೌಲ್ಯ ರೂಪಾಯಿ 3,822/-ನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತನಿಂದ ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ಅಂದಾಜು ಎರಡುವರೆ ಲಕ್ಷ ಆಗಿದೆ.

ದೂರುದಾರನ ಸಂಬಂಧಿಯೇ ಆಗಿದ್ದ…
ದೂರುದಾರ ಶಂಕರ್ ಅವರಿಗೆ ಬಂಧಿತ ಆರೋಪಿಯು ದೂರದ ಸಂಬಂಧಿಕನಾಗಿದ್ದು, ಆಗಾಗ ಸಂಬಂಧ ನೆಪದಲ್ಲಿ ಅವರ ಮನೆಗೆ ಬಂದು ಹೋಗಿ ಮನೆಯವರೆಲ್ಲರ ಸಲುಗೆ ಬೆಳೆಸಿಕೊಂಡು ಅದನ್ನೇ ಅವಕಾಶ ಮಾಡಿಕೊಂಡು ಕೃತ್ಯವೆಸಗಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ.

ಕಾರ್ಯಾಚರಣೆಯ ತಂಡ…
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಕೆ. ಕೃಷ್ಣಕಾಂತ್ ಮಾರ್ಗದರ್ಶನದಂತೆ ಕಾಪು ಸಿಪಿಐ ಮಹೇಶ್ ಪ್ರಸಾದ್, ಕಾಪು ಠಾಣೆ ಕ್ರೈಮ್ ವಿಭಾಗದ ಪಿಎಸ್ಐ ಜಯ ಕೆ., ಕಾನೂನು ಮತ್ತು ಸುವ್ಯವಸ್ಥೆ ಪಿಎಸ್ಐ ರಾಜಶೇಖರ , ಪ್ರೊಬೇಷನರಿ ಪಿ.ಸ್.ಐ. ಉದಯರವಿ, ಎ.ಎಸ್.ಐ. ಪ್ರದೀಪ್, ರಾಜೇಂದ್ರ ಮಣಿಯಾಣಿ ಹಾಗೂ ಸಿಬ್ಬಂದಿಗಳಾದ ಅಮೃತೇಶ್, ಮಹಾಬಲ, ರವಿಕುಮಾರ್, ಆನಂದ, ಸಂದೇಶ್ ಹಾಗೂ ನಾಗೇಶ್ ಇದ್ದರು.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅಕ್ಟೋಬರ್ 3 ರವರೆಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.