ಕರಾವಳಿ

ಕೋರ್ಟ್ ತಡೆಯಾಜ್ಞೆ ಹಿನ್ನೆಲೆ : ಗಿರಿಗಿಟ್ ಸಿನಿಮಾದ ಅಕ್ಷೇಪಾರ್ಹ ದೃಶ್ಯಕ್ಕೆ ಕತ್ತರಿ

Pinterest LinkedIn Tumblr

ಮಂಗಳೂರು, ಸೆಪ್ಟಂಬರ್, 13: ನಗರದ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತಿರುವ ಗಿರಿಗಿಟ್‌ ತುಳು ಚಿತ್ರದಲ್ಲಿ ನ್ಯಾಯವಾದಿಗಳನ್ನು ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ವಕೀಲರ ಸಂಘದ ವತಿಯಿಂದ ನ್ಯಾಯಾಲಯದಲ್ಲಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಚಿತ್ರ ಪ್ರದರ್ಶನ ಮಾಡದಂತೆ ಜಿಲ್ಲಾ ಪ್ರಧಾನ ಸಿವಿಲ್ ನ್ಯಾಯಾಲಯ ಗುರುವಾರ ತಡೆಯಾಜ್ಞೆ ವಿಧಿಸಿರುವುದರಿಂದ ಗಿರಿಗಿಟ್ ಸಿನಿಮಾದ ಅಕ್ಷೇಪಾರ್ಹ ದೃಶ್ಯ ತೆಗೆಯಲು ಚಿತ್ರ ತಂಡ ಒಪ್ಪಿಕೊಂಡಿದೆ.

ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಚಿತ್ರದ ನಿರ್ದೇಶಕ ರೂಪೇಶ್ ಶೆಟ್ಟಿ, ಗಿರಿಗಿಟ್’ ತುಳು ಚಲನಚಿತ್ರದಲ್ಲಿ ಬರುವ ಎಲ್ಲ ಪಾತ್ರಗಳು ಕಾಲ್ಪನಿಕ ಹಾಗೂ ಮನೋರಂಜನೆ ಸೀಮಿತವಾಗಿರುತ್ತದೆ. ಆದರೆ ಇದರಿಂದ ವಕೀಲರಿಗೆ ನೋವಾಗಿದ್ದರೆ ವಿಷಾದಿಸುತ್ತೇವೆ, ಈಗಾಗಲೇ ಗಿರಿಗಿಟ್ ಸಿನಿಮಾದ ಅಕ್ಷೇಪಾರ್ಹ ದೃಶ್ಯ ತೆಗೆಯಲು ನಾವು ತಾಂತ್ರಿಕ ತಂಡಕ್ಕೆ ಸೂಚನೆ ನೀಡಿದ್ದೇವೆ ಎಂದು ಹೇಳಿದರು.

ಇದಕ್ಕೂ ಮುನ್ನ, ಚಿತ್ರ ತಂಡದ ಪ್ರಮುಖರು ವಕೀಲರ ಸಂಘದ ಜೊತೆ ಮಾತುಕತೆ ನಡೆಸಿ ಚಿತ್ರದ ವಿರುದ್ಧ ಸಲ್ಲಿಸಲಾಗಿರುವ ದಾವೆಯನ್ನು ಕೈಬಿಡುವಂತೆ ಮನವಿ ಮಾಡಿತ್ತು. ವಕೀಲರ ಸಂಘ ವ್ಯಕ್ತಪಡಿಸಿರುವ ಎಲ್ಲ ಆಕ್ಷೇಪಗಳನ್ನು ಸೌಹಾರ್ದಯುತವಾಗಿ ಬಗೆಹರಿಸುವ ಭರವಸೆಯನ್ನು ಈ ಸಂದರ್ಭದಲ್ಲಿ ಚಿತ್ರ ತಂಡ ನೀಡಿತ್ತು. ಅಲ್ಲದೆ, ಪತ್ರಿಕಾಗೋಷ್ಠಿ ಕರೆದು ಸಾರ್ವಜನಿಕವಾಗಿ ಕ್ಷಮೆಯನ್ನೂ ಕೋರುವ ಬಗ್ಗೆ ವಾಗ್ದಾನ ಮಾಡಲಾಗಿತ್ತು.

ಮಾತ್ರವಲ್ಲದೇ ಚಿತ್ರದಲ್ಲಿ ನ್ಯಾಯಾಂಗ ನಿಂದನೆ ಮತ್ತು ವಕೀಲ ಸಮುದಾಯದ ಭಾವನೆಗಳಿಗೆ ಧಕ್ಕೆ ಮಾಡಲಾಗಿದೆ ಎಂಬ ಅಂಶ ಇರುವ ಭಾಗಗಳನ್ನು ಬೇಷರತ್ತಾಗಿ ತೆಗೆದು ಹಾಕಲು ಗಿರಿಗಿಟ್ ಚಿತ್ರ ತಂಡ ಒಪ್ಪಿಕೊಂಡಿದ್ದು, ಮಂಗಳೂರಿನ ಪ್ರಧಾನ ಕಿರಿಯ ಸಿವಿಲ್ ನ್ಯಾಯಾಧೀಶರ ಮುಂದೆ ಚಿತ್ರತಂಡದ ಪರವಾದ ಮಂಡಿಸಿದ ಗಿರಿಗಿಟ್ ಪರ ವಕೀಲರು ಚಿತ್ರ ಪ್ರದರ್ಶನ ಮುಂದುವರಿಸಲು ಅನುಮತಿ ಯಾಚಿಸಿದರು.

ತಾಂತ್ರಿಕ ಕಾರಣಗಳಿಂದ ಚಿತ್ರ ಪ್ರದರ್ಶನ ಮುಂದುವರಿಯುತ್ತಿದ್ದು, ಚೆನ್ನೈನಲ್ಲಿ ಚಲನಚಿತ್ರದ ಭಾಗಗಳನ್ನು ಎಡಿಟ್ ಮಾಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಸೂಕ್ತ ಸಮಯಾವಕಾಶ ಬೇಕಾಗಿದೆ ಎಂಬುದನ್ನು ನ್ಯಾಯಾಲಯದ ಮುಂದೆ ಅರಿಕೆ ಮಾಡಿಕೊಂಡರು. ಚಿತ್ರ ತಂಡದ ಪರವಾಗಿ ನಟ-ನಿರ್ದೇಶಕ ರೂಪೇಶ್ ಶೆಟ್ಟಿ ಹಾಜರಿದ್ದರು. ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ್ದಾರೆ.

ಆಗಸ್ಟ್ 23ರಂದು ತೆರೆ ಕಂಡಿರುವ ಈ ಸಿನೆಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.ರೂಪೇಶ್‌ ಶೆಟ್ಟಿಯವರು ನಾಯಕನಾಗಿ ಗಿರಿಗಿಟ್‌ ಚಿತ್ರದಲ್ಲಿ ನಟಿಸಿದ್ದು, ಶಿಲ್ಪ ಶೆಟ್ಟಿಯವರು ನಾಯಕಿಯಾಗಿದ್ದಾರೆ. ಅರವಿಂದ್ ಬೋಳಾರ್‌ ಅವರು ಈ ಚಿತ್ರದಲ್ಲಿ ವಕೀಲನ ಪಾತ್ರದಲ್ಲಿ ನಟಿಸಿದ್ದು, ಉಳಿದಂತೆ ಭೋಜರಾಜ ವಾಮಂಜೂರು, ನವೀನ್‌ ಪಡೀಲ್‌ , ಪ್ರಸನ್ನ ಶೆಟ್ಟಿ ನಟಿಸಿದ್ದಾರೆ.

Comments are closed.