ಕರಾವಳಿ

ಮಂಗಳೂರು ರಥ ಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅನಂತ ಚತುರ್ದಶಿ ವ್ರತ

Pinterest LinkedIn Tumblr

ಮಂಗಳೂರು : ಅನಂತ ಚತುರ್ದಶಿ ವ್ರತ ಪ್ರಯುಕ್ತ ನಗರದ ರಥ ಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ದೇವರಿಗೆ ವಿಶೇಷ ಅನಂತ ದೇವರ ಅಲಂಕಾರದಿಂದ ಶೃಂಗರಿಸಿ, ಅನಂತ ಕಲಶ ಪ್ರತಿಷ್ಠಾಪಿಸಿ ದೇವಳದ ವೈದಿಕರಿಂದ ವಿಶೇಷ ಪೂಜಾ ವಿಧಿ ವಿಧಾನಗಳು ನಡೆದವು.

ಸಾವಿರಾರು ಭಜಕರು ಶ್ರೀ ದೇವರ ದರ್ಶನ ಪಡೆದು ಪುನೀತರಾದರು. ಇದೇ ಪರ್ವ ದಿನಂದಂದು ಕೋಟಾ ಶ್ರೀ ಕಾಶಿ ಮಠದಲ್ಲಿ ಚಾತುರ್ಮಾಸ ವ್ರತ ನಿರತ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಶ್ರೀ ಸಂಸ್ಥಾನದ ದೇವರ ಸನ್ನಿಧಿಯಲ್ಲಿ ವಿಶೇಷವಾಗಿ ಸ್ವರ್ಣಕಲಶ ಪ್ರತಿಷ್ಠಾಪನೆ ಬಳಿಕ ಶ್ರೀ ದೇವರ ಪೂಜಾ ಪುರಸ್ಕಾರಗಳು ಶ್ರೀಗಳವರ ಅಮೃತ ಹಸ್ತಗಳಿಂದ ನೆರವೇರಿತು .

ಚಿತ್ರಗಳು : ಮಂಜು ನೀರೇಶ್ವಾಲ್ಯ

ಭಾದ್ರಪದ ಶುಕ್ಲ ಚತುರ್ದಶಿ – ‘ಅನಂತ ಚತುರ್ದಶಿ’ – ಶ್ರೀ ವಿಷ್ಣು ಅನಂತ ಪದ್ಮನಾಭ ದೇವರಾಗಿ ಭೂಮಿಯಲ್ಲಿ ಅವತಾರ ತಾಳಿದ ದಿನ

ಭಾದ್ರಪದ ಶುಕ್ಲ ಚತುರ್ದಶಿಯನ್ನು ಸಾಮಾನ್ಯವಾಗಿ ‘ಅನಂತ ಚತುರ್ದಶಿ’ ಎಂದೇ ಕರೆಯುತ್ತಾರೆ. ಇದು ಗಣೇಶ ಚತುರ್ಥಿ ಆಚರಣೆಯ ಕಡೆಯ ದಿನ. ಹಿಂದುಗಳ ಹದಿನಾರು ಪರ್ವದಿನಗಳಲ್ಲಿ ಒಂದಾಗಿದೆ. ಮಹಾವಿಷ್ಣುವು ಈ ದಿನ ಅನಂತನಾಗಿ ಭೂಮಿಯಲ್ಲಿ ಅವತರಿಸಿದ ಎಂಬುದು ಆಸ್ತಿಕರ ನಂಬಿಕೆ.

ಮದುವೆಯಾದ ಹೊಸದರಲ್ಲಿ ತಮ್ಮ ವೈವಾಹಿಕ ಜೀವನ ಸುಖವಾಗಿರಲಿ ಎಂದು ಇಚ್ಛಿಸಿ ನವದಂಪತಿಗಳು ಈ ವ್ರತವನ್ನು ಆಚರಿಸಲು ಆರಂಭಿಸುತ್ತಾರೆ. ಈ ದಿನದಂದು ಶ್ರೀ ವಿಷ್ಣು ಅನಂತ ಪದ್ಮನಾಭ ದೇವರಾಗಿ ಭೂಮಿಯಲ್ಲಿ ಅವತಾರ ತಾಳಿದರು ಎಂದು ನಂಬಿಕೆಯಿದೆ. ಶ್ರೀ ಅನಂತ ಪದ್ಮನಾಭ ದೇವರು ಭಕ್ತರ ಎಲ್ಲ ಪ್ರಾರ್ಥನೆ, ಬೇಡಿಕೆಗಳನ್ನು ಈಡೇರಿಸುತ್ತಾರೆ ಮತ್ತು ಸುಖ, ಆರೋಗ್ಯ, ಸಂಪತ್ತನ್ನು ಪ್ರದಾನಿಸುತ್ತಾರೆ ಎಂದು ನಂಬಿಕೆಯಿದೆ.

ಅನೇಕರು ಅನಂತ ವ್ರತವನ್ನು 14 ವರ್ಷಗಳ ಕಾಲ ಆಚರಿಸುತ್ತಾರೆ. ಕೆಲವರು ಪರಂಪರಾಗತವಾಗಿ ಅನಂತ ವ್ರತವನ್ನು ಆಚರಿಸುತ್ತಾರೆ. ಇನ್ನು ಕೆಲವರು ಶಕ್ತಿಗನುಸಾರ ಆಚರಿಸುತ್ತಾರೆ. ನಿಷ್ಕಲ್ಮಶ ಮನಸ್ಸಿನಿಂದ, ಭಕ್ತಿಯಿಂದ, ಭಾವದಿಂದ ಅನಂತ ಚತುರ್ದಶಿ ವ್ರತವನ್ನು ಆಚರಿಸಿದವರಿಗೆ ಅನಂತ ದೇವರು ಒಲಿದು ಆರೋಗ್ಯ, ಆಯಸ್ಸು, ಸುಖ, ಸಂಪತ್ತು ಪ್ರದಾನಿಸುತ್ತಾರೆ.

ವ್ರತಾಚರಣೆಯ ಹಿನ್ನೆಲೆ: ಕೃತಯುಗದಲ್ಲಿ ಸುಮಂತ ಎಂಬ ವ್ಯಕ್ತಿಯಿದ್ದ. ಆತನ ಹೆಂಡತಿಯ ಹೆಸರು ದೀಕ್ಷಾ ಹಾಗೂ ಮಗಳು ಸುಶೀಲಾ. ಕೆಲವು ವರ್ಷಗಳಲ್ಲಿ ದೀಕ್ಷಾ ತೀರಿಹೋದಾಗ ಸುಮಂತನು ಕರ್ಕಶ ಎಂಬುವಳನ್ನು ಮದುವೆಯಾದ. ಆಕೆ ಮಲಮಗಳನ್ನು ತುಂಬ ಹಿಂಸಿಸುತ್ತಿದ್ದಳು. ಆ ವೇಳೆಗೆ ಕೌಂಡಿನ್ಯ ಎನ್ನುವವನ ಜತೆಗೆ ಸುಶೀಲೆಯ ವಿವಾಹವಾಯಿತು. ಚಿಕ್ಕಮ್ಮ ಕೊಡುವ ಕಷ್ಟ ಸಹಿಸಲಾರದೆ ಸುಶೀಲೆ ಪತಿಯೊಂದಿಗೆ ಮನೆಯಿಂದ ಹೊರಹೊರಟಳು. ಅವರು ಹೋಗುತ್ತಿದ್ದಾಗ ನದಿತಟವೊಂದರಲ್ಲಿ ಮಹಿಳೆಯರ ಗುಂಪೊಂದು ಪೂಜೆ ಮಾಡುತ್ತಿತ್ತು. ಸುಶೀಲೆ ಅದೇನೆಂದು ಕೇಳಿದಾಗ ಆ ಮಹಿಳೆಯರು ಪೂಜೆಯ ಬಗ್ಗೆ ವಿವರಿಸಿದರು. ಆಗ ಸುಶೀಲೆ ತನಗೆ ಮಕ್ಕಳಾಗಲು ಮತ್ತು ತನ್ನ ಗಂಡನ ವೃತ್ತಿಯಲ್ಲಿ ಯಶಸ್ಸು ಸಿಗಲು ಅನಂತ ವ್ರತ ಆಚರಿಸಿದಳು. ಅವರ ಇಷ್ಟಾರ್ಥ ನೆರವೇರಿತು. ಆದರೆ ಅವಳ ಪತಿಗೆ ವ್ರತದ ಮೇಲೆ ನಂಬಿಕೆಯಿರಲಿಲ್ಲ. ಸುಶೀಲೆ ವ್ರತದ ಅಂಗವಾಗಿ ತನ್ನ ಎಡಗೈ ತೋಳಿಗೆ ಕಟ್ಟಿದ್ದ ದಾರವನ್ನು ಕಿತ್ತು ಬೆಂಕಿಗೆಸೆದ. ಈ ಘಟನೆಯ ಬಳಿಕ ಅವರ ಸಂಪತ್ತು ನಶಿಸಿ ಬಡತನವನ್ನು ಅನುಭವಿಸಬೇಕಾಯಿತು.

ಹಲವು ಕಷ್ಟ-ತೊಂದರೆಗಳನ್ನು ಅನುಭವಿಸಿದ ಕೌಂಡಿನ್ಯ ಅನಂತನ ದರ್ಶನಕ್ಕೆಂದು ಕಾಡಿಗೆ ಹೋಗಿ, ನಿರಾಶನಾಗಿ ಸಾಯಲು ಮುಂದಾದ. ಆಗ ವಿಪ್ರನ ರೂಪದಲ್ಲಿ ಪ್ರತ್ಯಕ್ಷನಾದ ಅನಂತ ವರ ನೀಡಿದ್ದರಿಂದ ಕೌಂಡಿನ್ಯನ ಬಡತನ ತೊಲಗಿತು. ಮುಂದೆ ಆ ದಂಪತಿ ಹದಿನಾಲ್ಕು ವರ್ಷಗಳ ಕಾಲ ಅನಂತ ವ್ರತ ಆಚರಿಸಿದರು. ಕೆಲವರು ಪರಂಪರಾಗತವಾಗಿ ಈ ವ್ರತವನ್ನು ಆಚರಿಸಿದರೆ ಮತ್ತೆ ಅನೇಕರು ಹದಿನಾಲ್ಕು ವರ್ಷಗಳ ತನಕ ವ್ರತವನ್ನು ಆಚರಿಸುತ್ತಾರೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ್ಗಳಲ್ಲಿ ಈ ವ್ರತ ಹೆಚ್ಚು ಪ್ರಚಲಿತದಲ್ಲಿದೆ.

Comments are closed.