ಕುಂದಾಪುರ: ಇಲ್ಲಿಗೆ ಸಮೀಪದ ಹೆಸ್ಕತ್ತೂರು ಗ್ರಾಮದ ಕಟ್ಟಿನ ಬುಡದ ಮನೆ ಎಂಬಲ್ಲಿನ ನಿವಾಸಿ ಕನಕ ಕುಲಾಲ್ತಿ (62) ಎನ್ನುವವರು ಶನಿವಾರ ರಾತ್ರಿ ತಮ್ಮ ಮನೆಯ ಸಮೀಪದಲ್ಲಿ ಹರಿಯುವ ತೋಡಿಗೆ ಬಿದ್ದು, ಕೊಚ್ಚಿಕೊಂಡು ಹೋಗಿರುವುದಾಗಿ ನಾಗರಾಜ್ ಎನ್ನುವವರು ಕಂಡ್ಲೂರಿನ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.


ಶನಿವಾರ ತಡ ರಾತ್ರಿ 12.50 ರ ವೇಳೆಯಲ್ಲಿ ಮನೆಯಲ್ಲಿ ಮಲಗಿದ್ದ ಕನಕ ಅವರು ಮೂತ್ರ ಶಂಕೆಯಿಂದಾಗಿ ಎದ್ದು, ಮನೆಯ ಹೊರಗಿರುವ ಬಚ್ಚಲ ಮನೆಗೆ ಹೋಗಿದ್ದವರು ಒಮ್ಮೆಲೆ ಗಟ್ಟಿಯಾಗಿ ಕೂಗಿ ಕೊಂಡಿದ್ದರು. ಅವರ ಬೊಬ್ಬೆ ಕೇಳಿ ಹೊರಗೆ ಬಂದಿದ್ದ ಮನೆಯವರು ಬಚ್ಚಲು ಮನೆ ಸೇರಿದಂತೆ ಮನೆಯ ಆಸುಪಾಸಿನಲ್ಲಿ ಹುಡುಕಾಟ ನಡೆಸಿದರೂ ಅವರು ಪತ್ತೆಯಾಗಿರಲಿಲ್ಲ.
ಬಚ್ಚಲ ಮನೆಗೆ ತಾಗಿಕೊಂಡಂತೆ ಒಂದು ತೋಡು ಇದ್ದು, ವಿದ್ಯುತ್ ಬೆಳಕು ಇಲ್ಲದೆ ಇದ್ದ ಕಾರಣ ಕನಕ ಅವರು ಆಕಸ್ಮಿಕವಾಗಿ ತೋಡಿನ ಕಡೆ ಹೆಜ್ಜೆ ಹಾಕಿ, ಜಾರಿ ತೋಡಿಗೆ ಬಿದ್ದ ಕಾರಣ, ತೋಡಿನಲ್ಲಿ ಹರಿಯುತ್ತಿರುವ ಮಳೆಗಾಲದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರ ಬಹುದು ಎಂದು ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಲಾಗಿದೆ.
ಘಟನೆಯ ಮಾಹಿತಿ ಪಡೆದುಕೊಂಡ ಗ್ರಾಮಾಂತರ ಠಾಣಾಧಿಕಾರಿ ಶ್ರೀಧರ ನಾಯ್ಕ್ ಹಾಗೂ ಪೊಲೀಸರು ರಾತ್ರಿಯೇ ಸ್ಥಳಕ್ಕೆ ತೆರಳಿ ಸ್ಥಳೀಯರ ಸಹಕಾರದಿಂದ ಹುಡುಕಾಟ ನಡೆಸುತ್ತಿದ್ದರೂ, ಭಾನುವಾರ ಸಂಜೆಯವರೆಗೂ ಕಾಣೆಯಾದವರ ಬಗ್ಗೆ ಯಾವುದೆ ಮಾಹಿತಿ ಲಭ್ಯವಾಗಿಲ್ಲ. ಈ ತೋಡು ಹೊಳೆಗೆ ಸಂಪರ್ಕ ಹೊಂದಿರುವ ಹಿನ್ನೆಲೆ ಹೊಳೆಯಲ್ಲೂ ಕೂಡ ಅಗ್ನಿಶಾಮಕದಳದವರು ನಿರಂತರವಾಗಿ ಹುಡುಕಾಟ ನಡೆಸಿದ್ದಾರೆ.
ಸ್ಥಳಕ್ಕೆ ಉಡುಪಿ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್, ಕುಂದಾಪುರ ಎಎಸ್ಪಿ ಹರಿರಾಂ ಶಂಕರ್, ಸಿಪಿಐ ಮಂಜಪ್ಪ ಮೊದಲಾದವರು ಭೇಟಿ ನೀಡಿದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.