ಕರಾವಳಿ

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯರಿಂದ ಮಂದಾರ ಪ್ರದೇಶಕ್ಕೆ ವ್ಯಾಪಿಸಿರುವ ತ್ಯಾಜ್ಯ ರಾಶಿ ವೀಕ್ಷಣೆ ; ಸಂತ್ರಸ್ತ ಕುಟುಂಬಗಳಿಗೆ ಸಾಂತ್ವಾನ

Pinterest LinkedIn Tumblr

ಮಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶನಿವಾರ ಪಚ್ಚನಾಡಿ ತ್ಯಾಜ್ಯ ಹರಿದು ಸಂಕಷ್ಟಕ್ಕೀಡಾದ ಮಂದಾರ ಪ್ರದೇಶದ ಸಂತ್ರಸ್ತ ಜನತೆಯನ್ನು ಭೇಟಿ ಮಾಡಿ ಅಲ್ಲಿನ ಸಮಸ್ಯೆಯನ್ನು ಆಲಿಸಿದರು.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಅಲ್ಲಿಂದ ನೇರವಾಗಿ ಮಂದಾರ ಪ್ರದೇಶಕ್ಕೆ ಭೇಟಿ ನೀಡಿ ಪ್ರವಾಹದ ರೀತಿಯಲ್ಲಿ ಡಂಪಿಂಗ್ ಯಾರ್ಡ್‌ನಿಂದ ಮಂದಾರಕ್ಕೆ ವ್ಯಾಪಿಸಿರುವ ತ್ಯಾಜ್ಯ ರಾಶಿಯನ್ನು ವೀಕ್ಷಿಸಿದರು. ಈ ವೇಳೆ ಸಂತ್ರಸ್ತರು ತಮ್ಮ ಸಮಸ್ಯೆಗಳನ್ನು ವಿವರಿಸಿ, ಶಾಶ್ವತ ಪರಿಹಾರದ ಬೇಡಿಕೆಯನ್ನು ಪ್ರಸ್ತಾಪಿಸಿದರು.

ಪಚ್ಚನಾಡಿಯ ಡಂಪಿಂಗ್ ಯಾರ್ಡ್‌ನಿಂದ ತ್ಯಾಜ್ಯ ಕುಸಿದು ಸಂತ್ರಸ್ತರಾಗಿರುವ ಮಂದಾರ ಪ್ರದೇಶದ 27 ಕುಟುಂಬಗಳಿಗೆ ಶಾಶ್ವತ ಪರಿಹಾರಕ್ಕೆ ಸರಕಾರವನ್ನು ಆಗ್ರಹಿಸಲಾಗುವುದು ಎಂದು ಸಿದ್ದರಾಮಯ್ಯ ಅವರು ಸಂತ್ರಸ್ತ ಕುಟುಂಬಗಳಿಗೆ ಸಾಂತ್ವಾನ ಹೇಳಿದರು.

ಈ ಸಂದರ್ಭ ಸ್ಥಳೀಯರಾದ ರಾಜೇಶ್ ಭಟ್ ಅವರು ಇಲ್ಲಿನ ಸಂಕಷ್ಟಗಳನ್ನು ಎಳೆ ಎಳೆಯಾಗಿ ಸಿದ್ಧರಾಮಯ್ಯನವರ ಮುಂದಿಟ್ಟರು. ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್ ಅವರು ನಗರ ಪಾಲಿಕೆಯಿಂದ ಸಂತ್ರಸ್ತರಿಗೆ ನೆರವಾಗಲು ಕೈಗೊಂಡ ಕೆಲಸಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಸ್ಥಳೀಯರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಮಾಜಿ ಸಚಿವ ಯು ಟಿ ಖಾದರ್ ಅವರು ಸಿದ್ಧರಾಮಯ್ಯನವರಿಗೆ ವಿವರಿಸಿದರು.

ಸಂತ್ರಸ್ತರಿಗೆ ಮನೆ ನಿರ್ಮಿಸುವವರೆಗೆ ಜೀವನೋಪಾಯಕ್ಕಾಗಿ ನಿರ್ದಿಷ್ಟ ಮೊತ್ತವನ್ನು ನೀಡಬೇಕು ಅಥವಾ ಬಾಡಿಗೆ ಮನೆಯಲ್ಲಿ ತಿಂಗಳಿಗೆ 10,000 ರೂ.ನಂತೆ ಒದಗಿಸಲು ಒತ್ತಾಯಿಸಲಾಗುವುದು. ಇದೇ ವೇಳೆ ಸರಕಾರವು ಮಂದಾರ ಪ್ರದೇಶವನ್ನು ವ್ಯಾಪಿಸಿರುವ ತ್ಯಾಜ್ಯವನ್ನು ಸಂಪೂರ್ಣವಾಗಿ ತೆರವುಗೊಳಿಸಿ ಬದುಕಲು ಯೋಗ್ಯವಾಗಿಸಬೇಕು. ಅದು ಸಾಧ್ಯವಾಗದಿದ್ದಲ್ಲಿ ಇಲ್ಲಿ ತಡೆಗೋಡೆ ನಿರ್ಮಿಸಿ ಆ ಜಾಗವನ್ನೂ ಸ್ವಾಧೀನಪಡಿಸಿಕೊಂಡು ಜಮೀನುದಾರರಿಗೆ ಪರಿಹಾರ ಮೊತ್ತ ನೀಡಬೇಕು. ಕಲುಷಿತ ನೀರು ಹರಿದು ಹೋಗದಂತೆ ತಡೆಯಲು, ಕೃಷಿ ಯೋಗ್ಯ ಜಮೀನನ್ನಾಗಿಸುವಲ್ಲಿ ಕ್ರಮ ವಹಿಸುವ ಬಗ್ಗೆ ಸರಕಾರಕ್ಕೆ ಸಲಹೆ ನೀಡಲಾಗುವುದು ಎಂದು ಅವರು ಹೇಳಿದರು.

ಮಾಜಿ ಸಚಿವ ಬಿ.ರಮಾನಾಥ ರೈ, ಶಾಸಕ ಯು.ಟಿ,ಖಾದರ್, ಮಾಜಿ ಶಾಸಕ ಮೊಯಿದ್ದಿನ ಭಾವ, ಮಾಜಿ ಮೇಯರ್ ಗಳಾದ ಭಾಸ್ಕರ್ ಮೊಯಿಲಿ, ಶಶಿಧರ ಹೆಗ್ಡೆ, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮನಪಾ ಆಯುಕ್ತ ಮುಹಮ್ಮದ್ ನಝೀರ್ ಸೇರಿದಂತೆ ಜಿಲ್ಲೆಯ ಹಲವು ಕಾಂಗ್ರೆಸ್‌ ಕಾರ್ಯಕರ್ತರು ಉಪಸ್ಥಿತರಿದ್ದರು.

Comments are closed.