
ಮಂಗಳೂರು, ಆಗಸ್ಟ್.25: ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಪಲ ವಿದ್ಯಾನಗರದ ಬಾವಿಯಲ್ಲಿ ಶನಿವಾರ ಸಂಜೆ ಹುಲಿವೇಷಧಾರಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.
ಮೃತರನ್ನು ಗರೋಡಿ ನಿವಾಸಿ ವಸಂತ್ ಕುಮಾರ್ (57) ಎಂದು ಹೆಸರಿಸಲಾಗಿದೆ. ಅವರು ಮಂಗಳೂರಿನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಕುಂಪಲದಲ್ಲಿ ಮೊಸರುಕುಡಿಕೆ ಉತ್ಸವಕ್ಕಾಗಿ ಶುಕ್ರವಾರ ವಸಂತ್ ಅವರು ಹುಲಿವೇಷ ಹಾಕಿದ್ದರು. ಅದೇ ದಿನ ರಾತ್ರಿ ನಾಪತ್ತೆಯಾಗಿದ್ದ ಅವರಿಗಾಗಿ ಶನಿವಾರ ಮಧ್ಯಾಹ್ನದವರೆಗೆ ಹುಡುಕಾಟ ನಡೆಸಲಾಗಿತ್ತು. ಬಳಿಕ ಕುಂಪಲದ ಬಾವಿಯಲ್ಲಿ ಟೋಪಿ ತೇಲುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಬಾವಿಯಲ್ಲಿ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.
ಶುಕ್ರವಾರ ರಾತ್ರಿ 2 ಗಂಟೆಗೆ ಟ್ರಕ್‌ನಿಂದ ಇಳಿದ ವಸಂತ್ ಸಮೀಪದಲ್ಲಿದ್ದ ಸಂಬಂಧಿಕರ ಮನೆಯ ಸಮೀಪದ ಬಾವಿಯ ಕಟ್ಟೆ ಬಳಿ ಕುಳಿತುಕೊಂಡಿದ್ದು, ನಿದ್ದೆಯ ಮಂಪರಿನಲ್ಲಿ ಬಾವಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
Comments are closed.