ಕರಾವಳಿ

ದ.ಕ.ಜಿಲ್ಲೆಯಾದ್ಯಂತ ಮಳೆಯ ರುದ್ರ ನರ್ತನ : ಉಕ್ಕಿ ಹರಿದ ನೇತ್ರಾವತಿ, ಕುಮಾರಧಾರೆ ನದಿಗಳು – ತಗ್ಗು ಪ್ರದೇಶಗಳು ಜಲಾವೃತ – ಜನಜೀವನ ಅಸ್ತವ್ಯಸ್ತ – ಗಂಜಿ ಕೇಂದ್ರದಲ್ಲಿ ಸಂತ್ರಸ್ತರ ಸಂಖ್ಯೆ ಹೆಚ್ಚಳ

Pinterest LinkedIn Tumblr

ಮಂಗಳೂರು, ಆಗಸ್ಟ್ 10 : ದ.ಕ.ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕರ ಮಳೆಯಿಂದಾಗಿ ದಕ್ಷಿಣ ಕನ್ನಡದ ಜೀವನದಿಗಳಾದ, ನೇತ್ರಾವತಿ, ಕುಮಾರಧಾರೆ, ಸೇರಿ ಜಿಲ್ಲೆಯಲ್ಲಿ ಹರಿಯುವ ಎಲ್ಲಾ ನದಿಗಳು ರೌದ್ರರೂಪ ತಾಳಿ ಹರಿಯುತ್ತಿದೆ. ನೂರಾರು ಮಂದಿ ನದಿ ಪ್ರವಾಹದಲ್ಲಿ ಸಿಲುಕಿದ್ದು, ಮನೆ ಮಠ ಕಳೆದುಕೊಂಡು ಕಣ್ಣೀರು ಸುರಿಸುತ್ತಿದ್ದಾರೆ.

ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಜನವಾಸ ಪ್ರದೇಶಗಳಿಗೆ ನೀರು ನುಗ್ಗಿದ್ದು ನದಿ ತಟದಲ್ಲಿರುವ ಬಹುತೇಕ ಮನೆಗಳು ಮುಳುಗಡೆಯಾಗಿದೆ. ಬಂಟ್ವಾಳ ತಾಲೂಕಿನಾದ್ಯಂತ ಭಾರೀ ಗಾಳಿ- ಮಳೆ ಮುಂದುವರಿದಿದ್ದು, ನೇತ್ರಾವತಿ ನೀರಿನ ಮಟ್ಟ ತೀವ್ರ ಹೆಚ್ಚಾಗಿದ್ದು, ಅಪಾಯಕಾರಿಯಾಗಿ ಹರಿಯುತ್ತಿದೆ.

ಕಳೆದ ರಾತ್ರಿಯಿಂದ ಸುರಿದ ಮಳೆಗೆ ಬಂಟ್ವಾಳದಲ್ಲಿ ಹಲವಾರು ಮನೆಗಳು ಜಲಾವೃತಗೊಂಡಿದೆ. ಅಂಗಡಿ, ಮುಂಗಟ್ಟುಗಳು ಜಲಾವೃತಗೊಂಡಿದ್ದರೆ, ನಿರಂತರ ಮಳೆಯಿಂದಾಗಿ ಹಲವಾರುಮಂದಿ ಸಂತ್ರಸ್ತರಾಗಿದ್ದಾರೆ. ಈ ನಡುವೆ ಬಂಟ್ವಾಳ ತಾಲೂಕಿನಲ್ಲಿ ಐ.ಬಿ. ಮತ್ತು ಪಾಣೆಮಂಗಳೂರಿನ ಶಾರದಾ ಪ್ರೌಢಶಾಲೆಯಲ್ಲಿ ತೆರೆದಿರುವ ಗಂಜಿ ಕೇಂದ್ರದಲ್ಲಿ ಸಂತ್ರಸ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ಭಾರೀ ಮಳೆಯಿಂದಾಗಿ ಬಿ.ಸಿ ರೋಡ್ ನ ಬಂಟರ ಭವನಕ್ಕೂ ನೆರೆ ನೀರು ಪ್ರವೇಶಿಸಿದೆ. ಭವನದ ತಳ ಅಂತಸ್ತಿಗೆ ನೀರು ನುಗ್ಗಿದ್ದು, ಪಾರ್ಕಿಂಗ್ ಏರಿಯಾ ಸಂಪೂರ್ಣ ಜಲಾವೃತಗೊಂಡಿದೆ. ಬ್ರಹ್ಮರಕೋಟ್ಲು ದೇವಸ್ಥಾನ , ಬಿಸಿ ರೋಡ್ ಸರ್ವಿಸ್ ರಸ್ತೆ, , ಮಾಣಿ , ಪಾಣೇರು, ಪಡೀಲ್ , ಜಪ್ಪಿನ ಮೊಗೇರು, ಉಳ್ಳಾಲ, ಮಂಗಳೂರು ಬಂದರು, ಕಡೆಕಾರು, ಜಕ್ರೀಬೆಟ್ಟು ಮೊದಲಾದ ಪ್ರದೇಶ ಸಂಪೂರ್ಣ ಜಲಾವೃತ್ತಗೊಂಡಿದೆ.

ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಬಂಟ್ವಾಳದ ರಸ್ತೆ ಸಂಚಾರ ರದ್ದುಗೊಳಿಸಲಾಗಿದೆ. ಬಂಟ್ವಾಳ, ಬೆಳ್ತಂಗಡಿ ಸಂಚಾರ ಸ್ಥಗಿತಗೊಂಡಿದೆ. ಮಾರ್ನಬೈಲು, ಪಣೋಲಿಬೈಲು ಮದ್ಯೆ ಇರುವ ರಸ್ತೆಯಲ್ಲಿ ನೀರಿ‌ನಂತಿದೆ. ವಾಹನಗಳು ದಾಟುವಂತಿಲ್ಲ.ಮಾಣಿ, ಉಪ್ಪಿನಂಗಡಿ ಮಾಣಿ ರಸ್ತೆ ಬಂದ್. ಉಪ್ಪಿನಂಗಡಿಗೆ‌ ಮಾಣಿ,‌ ಪುತ್ತೂರು ಬೆಳ್ತಂಗಡಿ ‌ಕಡೆಯಿಂದ ವಾಹನ ಸಂಚಾರ‌ ನಿಷೇಧಿಸಲಾಗಿದೆ.

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತಲಪಾಡಿಯಲ್ಲಿರುವ ಸರ್ವೀಸ್ ರಸ್ತೆ ಜಲಾವೃತಗೊಂಡಿದ್ದು, ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇಂದು ಬೆಳಗ್ಗೆಯಿಂದ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ನೀರು ಮತ್ತೆ ಏರಿಕೆಯಾಗುವ ಸಾಧ್ಯತೆಯಿದ್ದು, ತೀರವಾಸಿಗಳು ತೀವ್ರ ಆತಂಕಿತರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಆರ್ಭಟದಿಂದ ಉಳ್ಳಾಲದ ಬಹುತೇಕ ಪ್ರದೇಶಗಳು ಜಲಾವೃತಗೊಂಡಿದೆ. ಉಳ್ಳಾಲ ಒಳಜೆಪ್ಪಿನಮೊಗರು ಜಲಾವೃತಗೊಂಡಿದ್ದು ಅಲ್ಲಿನ ನಿವಾಸಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಇಲ್ಲಿ ಸುಮಾರು 50-60 ಮನೆಗಳಿಗೆ ನೆರೆ ನೀರು ನುಗ್ಗಿದ್ದು, ಸ್ಥಳೀಯವಾಗಿ ಲಭ್ಯವಿರುವ ತೆಪ್ಪ ಹಾಗೂ ದೋಣಿಯನ್ನು ಬಳಸಿ ಸ್ಥಳೀಯ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವಲ್ಲಿ ಸ್ವಯಂ ಸೇವಾ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಿದ್ದಾರೆ. ಕಾರ್ಯಚರಣೆಗೆ ಮತ್ತಷ್ಟು ಕಾರ್ಯಕರ್ತರು ಆಗಮಿಸಿ ಕೈ ಜೋಡಿಸುವಂತೆ ಕಾರ್ಯಚರಣೆಯಲ್ಲಿ ನಿರತರಾದವರು ವಿನಂತಿಸಿಕೊಂಡಿದ್ದಾರೆ.

ಉಳ್ಳಾಲದ ಅಳೇಕಲ, ಹಳೆಕೋಟೆ, ಉಳಿಯ, ಮಿಲ್ಲತ್ ನಗರ, ಬಸ್ತಿಪಡ್ಪು ಮತ್ತಿತರ ಪ್ರದೇಶಗಳು ಜಲಾವೃತಗೊಂಡಿವೆ. ಹಲವು ಮನೆ,ಅಂಗಡಿ ಮುಂಗಟ್ಟುಗಳ ಅಂಗಳ ಮತ್ತು ಒಳಗೆ ನೆರೆ ನೀರು ನುಗ್ಗಿವೆ. ಕಲ್ಲಾಪು, ಪಟ್ಲದಲ್ಲೂ ಮನೆಗಳಿಗೆ ನೆರೆ ನೀರು ನುಗ್ಗಿದೆ. ಇಲ್ಲಿನ ಜನರನ್ನು ದೋಣಿ ಮೂಲಕ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತದೆ. ಈ ಪ್ರದೇಶದ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಇಂದು ಬೆಳಗ್ಗೆಯಿಂದ ಮಳೆ ಮತ್ತಷ್ಟು ಬಿರುಸು ಪಡೆಯುತ್ತಿದ್ದು ಜನರು ಮನೆಯಿಂದ ಹೊರಗಿಳಿಯಲು ಹಿಂಜರಿಯುತ್ತಿದ್ದಾರೆ. ಉಳ್ಳಾಲ ತೋಟ ಮಸೀದಿಗೂ ನೆರೆ ನೀರು ನುಗ್ಗಿದೆ.

Comments are closed.