ಕರಾವಳಿ

ಯಡಮೊಗೆ ಜನರ ಮೊಗದ ನಗು ಕಸಿಯುತ್ತಿದೆ ಕುಮ್ಟೆಬೇರಿನ ‘ಡೆಡ್ಲಿ’ ಕಾಲು ಸಂಕ!

Pinterest LinkedIn Tumblr

ಕುಂದಾಪುರ: ಒಂದೆಡೆ ತುಂಬಿ ಹರಿಯುತ್ತಿರೋ ಕುಬ್ಜೆ ನದಿ. ಮತ್ತೊಂದೆಡೆ ಕಾಲು ಸಂಕದಲ್ಲಿ ಸರ್ಕಸ್ ತರಹ ನಡೆದು ಬರುತ್ತಿರೋ ಜನ..ಪುಟಾಣಿ ಮಗನನ್ನು ಕೈ ಹಿಡಿದು ನಾಜೂಕಾಗಿ ಕರೆತರುತ್ತಿರೋ ತಂದೆ. ಡೆಡ್ಲಿ ಕಾಲು ಸಂಕದ ಮೇಲೆ ಹಲವು ದಶಕಗಳಿಂದ ಯಡಮೊಗೆ ಜನರ ನಿತ್ಯ ಪಯಣ. ಇಲ್ಲಿನ ಬವಣೆ ಕುರಿತ ಸ್ಟೋರಿಯಿಲ್ಲಿದೆ.

ಯಡಮೊಗೆ ಜನರ ಮೊಗದಲ್ಲಿ ನಗುವಿಲ್ಲ!
ಬೈಂದೂರು ವಿಧಾನಸಭಾ ಕ್ಷೇತ್ರದ ಯಡಮೊಗೆ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶ. ನಕ್ಸಲ್ ಪೀಡಿತ ಎಂಬ ಹಣೆಪಟ್ಟಿ ಹೊತ್ತ ಈ ಊರಿನಲ್ಲಿ ಈಗಲೂ ಅಭಿವೃದ್ಧಿ ಮಾತ್ರ ಮರೀಚಿಕೆ. ಪ್ರತಿ ವರ್ಷ ಮಳೆಗಾಲ ಬಂದರೆ ಸಾಕು ಯಡಮೊಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಮ್ಟೆಬೇರು ಎಂಬಲ್ಲಿನ ಜನರ ಮೊಗದಲ್ಲಿನ ನಗುವೇ ಮಾಯವಾಗುತ್ತೆ. ಕುಮ್ಟೆಬೇರು ಹಾಗೂ ರಾಂಪೈ ಜೆಡ್ಡು ನಡುವೆ ಹರಿಯುವ ಕುಬ್ಜೆ ಅಕ್ಷರಶಃ ಇಲ್ಲಿನ ಜನರ ನೆಮ್ಮದಿ ಕಿತ್ತುಕೊಳ್ಳುತ್ತಾಳೆ. ಮಳೆಗಾಲದ ಮೂರು ತಿಂಗಳು ಜನರು ಪರಿಪಾಡಲು ದೇವರಿಗೆ ಪ್ರೀತಿ. ಕುಮ್ಟೆಬೇರು ಮತ್ತು ರಾಂ ಪೈ ಜೆಡ್ಡು ಸಂಪರ್ಕಕ್ಕೆ ಇಲ್ಲೊಂದು 40 ಅಡಿ ಉದ್ದದ ಸಣಕಲು ಕಾಲು ಸಂಕವಿದ್ದು ಮಳೆಗಾಲದಲ್ಲಿ ಜನರಿಗೆ ಅದುವೇ ಆಧಾರ. ಆದರೆ ನಡೆಯುವಾಗ ಕೊಂಚ ಎಡವಟ್ಟದರೂ ತುಂಬಿ ಹರಿಯುವ ಹೊಳೆಯಲ್ಲಿ ಬಿದ್ದು ಕೊಚ್ಚಿ ಹೋಗೋದು ಗ್ಯಾರೆಂಟಿ. ಕೆಲವು ವರ್ಷಗಳ ಹಿಂದೆ ಅಂತಹುದ್ದೆ ಒಂದು ಘಟನೆಯೂ ನಡೆದಿತ್ತು ಆದರೆ ಸ್ಥಳೀಯರ ಸಮಯಪ್ರಜ್ಞೆಯಿಂದ ಬಾಲಕನನ್ನು ರಕ್ಷಿಸಲಾಗಿತ್ತೆಂದು ಇಲ್ಲಿನ ಮಂದಿ ಹೇಳುತ್ತಾರೆ. ಯಾವುದೇ ಭದ್ರತೆಯಿಲ್ಲದ ಅಡಿಕೆ ಮರವನ್ನು ನಡೆಯಲು ಹಾಸಿದ್ದು ಇತರೆ ಮರದ ಫೋಲ್ಸ್ ಈ ಕಾಲು ಸಂಕದ ಪಿಲ್ಲರ್. ಪ್ರತಿವರ್ಷವೂ ಎಂಟತ್ತು ಸಾವಿರ ಖರ್ಚು ಮಾಡಿ ಸ್ಥಳೀಯರೇ ಕಾಲು ಸಂಕ ರಿಪೇರಿ ಮಾಡಿಕೊಂಡರೆ ಮಾತ್ರ ನಡೆದಾಡಲು ಸುಗಮ, ಇಲ್ಲವಾದಲ್ಲಿ ಮನೆಯಲ್ಲಿಯೇ ಕೂರಬೇಕಾದ ಅನಿವಾರ್ಯತೆ.

ಕೊಂಕಣ ಸುತ್ತಿ ಮೈಲಾರಕ್ಕೆ!
ರಾಂ ಪೈ ಜೆಡ್ಡು ಹಾಗೂ ಕುಮ್ಟೆಬೇರು ಪ್ರದೇಶದ ಮಂದಿ ಈ‌ ಕಾಲು ಸಂಕ ದಾಟಿ ಯಡಮೊಗೆ ಸೇರಿದರೆ ಮಾತ್ರ ಅವರಿಗೆ ಪೇಟೆ ಸಿಗುತ್ತೆ. ಅಥವಾ ದೂರದೂರಿಗೆ ತೆರಳಲು ಬಸ್ ಸಿಗುತ್ತೆ. ಒಂದೊಮ್ಮೆ ಕಾಲು ಸಂಕ ಬಳಸದೆ ನಡೆದು ಸಾಗಿದರೆ ಅರ್ಧ ಕಿಲೋಮೀಟರ್ ದಾರಿ ಬದಲು ಸುಮಾರು ಆರೇಳು ಕಿಲೋಮೀಟರ್ ಸುತ್ತಿಹಾಕಿ ಪೇಟೆ ಸೇರಬೇಕು. ಇನ್ನು ಇಲ್ಲಿನ ಶಾಲಾ ಕಾಲೇಜು, ಅಂಗನವಾಡಿ ವಿದ್ಯಾರ್ಥಿಗಳಿಗೆ ಈ ಕಾಲು ಸಂಕ ತುಂಬಾನೇ ಅಗತ್ಯ. ಪಡಿತರ ಸಾಮಾಗ್ರಿ, ಆಸ್ಪತ್ರೆ, ದಿನಸಿ ಸಾಮಾಗ್ರಿ ತರಲು ಈ ಭಯಾನಕ ಹಾದಿಯನ್ನೇ ಅವಲಂಭಿಸಬೇಕು. ಅಂಗನವಾಡಿ, ಶಾಲೆ- ಕಾಲೇಜಿಗೆ ತೆರಳುವ ಮೂವತ್ತಕ್ಕೂ ಅಧಿಕ ವಿದ್ಯಾರ್ಥಿಗಳ ಸಹಿತ ಸಾವಿರಾರು ಮಂದಿ ಈ ಕಾಲು ಸಂಕದಲ್ಲಿ ನಿತ್ಯ ಸಂಚಕಾರದ ಸಂಚಾರ ಮಾಡ್ತಾರೆ.

ಪೂಟ್ ಬ್ರಿಡ್ಜ್ ಮಾಡಿದ್ರು ಸಾಕು…
ಹೊಳೆಯ ಎರಡು ಬದಿಯಲ್ಲಿನ ಊರಲ್ಲಿ ನೂರಾರು‌ ಮನೆಗಳು, ತೋಟ ಕೃಷಿಭೂಮಿ, ಶಾಲೆ ಅಂಗನವಾಡಿ ಎಲ್ಲವೂ ಇದೆ. ಅಂದಹಾಗೆ ಇಲ್ಲಿಗೊಂದು ಶಾಶ್ವತ ಪೂಟ್ ಬ್ರಿಡ್ಜ್ ಮಾಡಿಕೊಡಿ ಎಂಬುದು ಕಳೆದ ಐವತ್ತು ವರ್ಷಗಳಿಂದಲು ಜನರು ಇಡುತ್ತಿರುವ ಬೇಡಿಕೆ. ಪ್ರತಿ ಚುನಾವಣೆ ಬಂದಾಗಲು ಬರುವ ಅಭ್ಯರ್ಥಿಗಳು ಈ ಬಾರಿ ಕಾಲು ಸೇತುವೆ ಮಾಡಿಯೇ ಸಿದ್ಧ ಎಂಬ ಬಣ್ಣದ ಮಾತುಗಳನ್ನಾಡಿದರೂ ಕೂಡ ಈವರೆಗೂ ಕೆಲಸ ಮಾತ್ರ ಆಗಿಲ್ಲ. ಅದಲ್ಲದೆ ಕೆರೆಕಟ್ಟೆಯಿಂದ ಕಾರೂರು ಮಾರ್ಗ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ಅಯೋಗ್ಯ ವಾಗಿದೆ.

ಒಟ್ಟಿನಲ್ಲಿ ತಮ್ಮೂರಿಗೆ ಬೇಕಾದ ಕಾಲು ಸೇತುವೆಯನ್ನು ನಮ್ಮಿಂದ ಆರಿಸಿ ಬಂದ ಜನಪ್ರತಿನಿಧಿಗಳು ಇಂದು ಮಾಡಿಕೊಟ್ಟಾರು….ನಾಳೆ ಮಾಡಿಕೊಟ್ಟಾರು ಎಂಬ ಆಕಾಂಕ್ಷೆಯೊಂದಿಗೆ ಇಲ್ಲಿನ ಮಂದಿ ಕಾಯುತ್ತಿರೋದಂತು ಸುಳ್ಳಲ್ಲ.

ಚಿತ್ರ, ವರದಿ- ಯೋಗೀಶ್ ಕುಂಭಾಸಿ

Comments are closed.