ಕರಾವಳಿ

ಕರಾವಳಿಯಲ್ಲಿ ವರುಣಾರ್ಭಟ : ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ನಿಂದ ಪರಿಸರದ ಮನೆಗಳಿಗೆ ನುಗ್ಗಿದ ತ್ಯಾಜ್ಯದ ರಾಶಿ – ಆತಂಕದಲ್ಲಿ ಸ್ಥಳೀಯರು

Pinterest LinkedIn Tumblr

ಮಂಗಳೂರು : ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಪಚ್ಚನಾಡಿಯ ಡಂಪಿಂಗ್‌ ಯಾರ್ಡ್‌ನಿಂದ ತ್ಯಾಜ್ಯದ ರಾಶಿಯು ಹೊರಗೆ ಬಂದಿದ್ದು, ಸಮೀಪದ ಮಂದಾರ ಪರಿಸರದಲ್ಲಿ ವ್ಯಾಪಿಸಿದೆ

ಮಳೆ ನೀರಿನೊಂದಿಗೆ ತ್ಯಾಜ್ಯ ರಾಶಿಯು ಸುಮಾರು 1 ಕಿ.ಮೀ.ವರೆಗೆ ಮಂದಾರ ಪರಿಸರದಲ್ಲಿ ಹರಿದು ಸುಮಾರು 4 ಎಕರೆ ಪ್ರದೇಶದ ಜನರ ಜೀವನವನ್ನೇ ಬುಡಮೇಲು ಮಾಡಿದೆ. ಬೃಹತ್‌ ಗಾತ್ರದ ತ್ಯಾಜ್ಯ ರಾಶಿಯು ಮಳೆ ನೀರಿನೊಂದಿಗೆ ಬರುವ ವೇಗಕ್ಕೆ 2,000ಕ್ಕೂ ಅಧಿಕ ಅಡಿಕೆ ಮರ, 150ಕ್ಕೂ ಅಧಿಕ ತೆಂಗಿನಮರ, ಸುಮಾರು 75ಕ್ಕೂ ಅಧಿಕ ಇತರ ಮರಗಳು ತ್ಯಾಜ್ಯ ರಾಶಿಯೊಂದಿಗೆ ನೆಲಸಮವಾಗಿದೆ.

ಒಂದು ಹಳೆಯ ಮನೆ ತ್ಯಾಜ್ಯ ರಾಶಿಯಲ್ಲಿ ಸಂಪೂರ್ಣ ಮುಳುಗಡೆಯಾಗಿದೆ. ನಾಲ್ಕು ಮನೆಗಳು ಭಾರೀ ಅಪಾಯದಲ್ಲಿದ್ದರೆ, 6 ಮನೆಗಳು ಅಪಾಯದಲ್ಲಿದೆ. ಸಂಪರ್ಕ ರಸ್ತೆಯೊಂದು ಬಂದ್‌ ಆಗಿದೆ. ನಾಗಬನ-ದೈವಸ್ಥಾನ ಕೂಡ ತ್ಯಾಜ್ಯ ರಾಶಿಯಲ್ಲಿ ನೆಲಸಮವಾಗಿದೆ.

ಭಾರೀ ಮಳೆಯ ರಭಸಕ್ಕೆ ಭಾರೀ ಗಾತ್ರದಲ್ಲಿ ಸಂಗ್ರಹಿಸಲಾಗಿದ್ದ ತ್ಯಾಜ್ಯದ ರಾಶಿಯು ಹೊರಗೆ ಬಂದ ಪರಿಣಾಮ ಪಚ್ಚನಾಡಿ ಸಮೀಪದ ಮಂದಾರ ಪರಿಸರವೆಲ್ಲ ಸದ್ಯ ಕೊಳಚೆ ನೀರು ಹಾಗೂ ತ್ಯಾಜ್ಯ ರಾಶಿಯಿಂದ ತುಂಬಿಕೊಂಡಿದೆ. ಕ್ಷಣಕ್ಕೊಂದು ಮರಗಳು ತ್ಯಾಜ್ಯಕ್ಕೆ ಆಹುತಿಯಾಗುತ್ತಿದೆ. ಮಳೆ ಇನ್ನೂ ಮುಂದುವರಿದರೆ ಇನ್ನಷ್ಟು ಅಪಾಯ ಬಹುತೇಕ ನಿಚ್ಚಳಾವಾಗಿದೆ. ಹೀಗಾಗಿ ಪರಿಸರದ ಜನರು ಸದ್ಯ ಆತಂಕಿತರಾಗಿದ್ದಾರೆ.

ಸ್ಥಳಕ್ಕೆ ಮಾಜಿ ಮೇಯರ್ ಕೆ.ಭಾಸ್ಕರ್ ಮೊಯ್ಲಿ ಹಾಗೂ ಮನಪಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments are closed.