ಕರಾವಳಿ

‘ಕ್ಲೀನ್’ ಬಯಸದ ಕಿಡಿಗೇಡಿಗಳು ಎಸೆದ ತ್ಯಾಜ್ಯದಿಂದ ಬೀಜಾಡಿಯಲ್ಲಿ ನಾಗನಿಗೆ ‘ತನು’ ಎರೆಯಲು ತತ್ವಾರ!

Pinterest LinkedIn Tumblr

ಕುಂದಾಪುರ: ಒಂದು ಕೈಯಲ್ಲಿ ಪೂಜಾ ಸಾಮಗ್ರಿ ತಟ್ಟೆ ಇನ್ನೊಂದು ಕೈ ಮೂಗಿನ ಮೇಲೆ.. ಅಸಹ್ಯಕರ ವಾತಾವರಣದಲ್ಲಿಯೇ ಕೆಲವರು ವಾಕರಿಕೆ ಬರುವ ರೀತಿಯಲ್ಲೇ ನಾಗನಿಗೆ ತನು ಎರೆದರೆ, ಮತ್ತೆ ಕೆಲವರು ಮತ್ತೊಂದು ನಾಗನ ಬನಕ್ಕೆ ಹೋಗಿ ಹರಕೆ ಸಲ್ಲಿಸಿದ್ದರು. ನಾಗರ ಪಂಚಮಿ ಆಚರಣೆಗೆ ತ್ಯಾಜ್ಯ ಸಮಸ್ಯೆಗೆ ಆ ಊರಿನ ಮಂದಿ ಸಂಬಂದಪಟ್ಟವರಿಗೆ ಹಿಡಿಶಾಪ ಹಾಕುವಂತಾಗಿದೆ.

ತನು ಹಾಕಲು ತತ್ವಾರ!
ಅವರು ಸಾಗುವ ನಾಗಬನದ ದಾರಿಯಲ್ಲಿ ರಾಶಿ ರಾಶಿ ತ್ಯಾಜ್ಯದ ಮೂಟೆ.. ತ್ಯಾಜ್ಯ ಸಮಸ್ಯೆ ನಾಗನಿಗೆ ತನು ಎರೆಯಲು ತತ್ವಾರ ಸೃಷಿಸಿ ಭಕ್ತರು ಪರದಾಡುವಂತೆ ಮಾಡಿದ್ದು ಕುಂದಾಪುರ ತಾಲೂಕು ಬೀಜಾಡಿ ಪಡುಚಾವಡಿಬೆಟ್ಟು ಎಂಬಲ್ಲಿ. ಬೀಜಾಡಿ ಗ್ರಾಪಂ ವ್ಯಾಪ್ತಿಯ ಸ್ಮಶಾನ ರಸ್ತೆ ಸಂಪೂರ್ಣ ತ್ಯಾಜ್ಯದಿಂದ ಬಂದಾಗಿತ್ತು. ಹದಿನೈದು ದಿನಗಳ ಹಿಂದೆ ರಾಶಿಗಟ್ಟಲೇ ತ್ಯಾಜ್ಯ ಎಸೆದಿದ್ದು ಅದನ್ನು ಯಾರೋ ತಡರಾತ್ರಿ ರಸ್ತೆಗೆ ಅಡ್ಡವಾಗಿ ಇಟ್ಟಿದ್ದು ಬೆಳಗ್ಗೆ ತನು ಸಮರ್ಪಣೆಗೆ ಬಂದ ಜನರಿಗೆ ಫುಲ್ ಶಾಕ್ ಆಗಿದೆ. ಮದ್ಯದ ಬಾಟಲಿ, ಬಲೆ, ಪ್ಲಾಸ್ಟಿಕ್ ಇತರೆ ತ್ಯಾಜ್ಯಗಳು ಕಪ್ಪು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ರಸ್ತೆ ತುಂಬಾ ಇಡಲಾಗಿದ್ದನ್ನು ಕಂಡು ಸ್ಥಳೀಯ ಭಕ್ತ ಸಮೂಹ ಆಕ್ರೋಷ ವ್ಯಕ್ತಪಡಿಸಿದರು. ಇಡೀ ನಾಗಬನದ ಸಮೀಪ ಪರಿಸರ ಗಬ್ಬು ನಾರುತ್ತಿತ್ತು.

ತ್ಯಾಜ್ಯ ಹಾಕಿದ್ದ್ಯಾರು?
ಅಂದಾಜು ಲೋಡಿನಷ್ಟಿರುವ ತ್ಯಾಜ್ಯ ಯಾರು ಹಾಕಿದ್ದಾರೆಂಬುದು ಮಾತ್ರ ಇನ್ನೂ ನಿಗೂಢ. ಆದರೆ ತ್ಯಾಜ್ಯ ಎಸೆಯಲ್ಪಟ್ಟ ಕಪ್ಪು ಬಣ್ಣದ ದೊಡ್ಡ ಗಾತ್ರದ ಪ್ಲಾಸ್ಟಿಕ್ ಲಕೋಟೆಗಳನ್ನು ಗಮನಿಸಿದರೆ ಇದ್ಯಾವುದೋ ಒಂದೆರಡು ಮನೆಯ ಕಸವಲ್ಲ ಅನ್ನೋದು ಮಾತ್ರ ಗ್ಯಾರೆಂಟಿ. ಬಲೆಗಳು, ಮದ್ಯದ ಬಾಟಲ್, ಪ್ಲಾಸ್ಟಿಕ್ ಬಾಟಲ್, ಸೇರಿದಂತೆ ಹಲವು ತ್ಯಾಜ್ಯದ ಸಂಗ್ರಹವೇ ಈ ರಾಶಿಯಲ್ಲಿದ್ದು ನಿಜಕ್ಕೂ ಅಸಹನೀಯ ಸ್ಥಿತಿ ನಿರ್ಮಾಣವಾಗಿದೆ.

ಜನರು ಕಂಗಾಲು..
ಹಲವು ದಿನಗಳಿಂದಿರುವ ಕಪ್ಪು ಬಣ್ಣದ ಜರಿಯ ತ್ಯಾಜ್ಯದ ಲಕೋಟೆಗಳು ದುರ್ನಾತ ಬೀರುತ್ತಿದೆ. ನಾಯಿಗಳ ಕಾಟ ಹಾಗೂ ಸೊಳ್ಳೆ ಕಾಟದಿಂದ ಜನ ಹೈರಾಣಾಗಿದ್ದಾರೆ. ಆಹಾರಕ್ಕಾಗಿ ತ್ಯಾಜ್ಯ ರಾಶಿಯತ್ತ ಬರುವ ನಾಯಿಗಳು ಜಾನುವಾರುಗಳ ಮೇಲೂ ದಾಳಿ ನಡೆಸಿದ್ದು ಅಂತಹ ಗಾಯಾಳು ಜಾನುವಾರುಗಳಿಗೆ ಸ್ಥಳಿಯರೇ ಚಿಕಿತ್ಸೆ ನೀಡುವ ಪರಿಸ್ಥಿತಿ ಬಂದೊದಗಿದೆ. ಇಷ್ಟೆಲ್ಲಾ ಆದರೂ ಕೂಡ ಸಂಬಂದಪಟ್ಟವರು ಮಾತ್ರ ಜಣಕುರುಡರಾಗಿದ್ದು ಕೂಡಲೇ ತ್ಯಾಜ್ಯ ವಿಲೇವಾರಿ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.