ಕರಾವಳಿ

ನಮ್ಮ ಹಣ ವಾಪಸ್ ಬರಬೇಕಾದರೆ ತಾಂತ್ರಿಕತೆಯ ಜೊತೆಗೆ ಮೌಲಿಕವಾದ ಸಿನಿಮಾ ನೀಡಬೇಕು ; ಕ್ಯಾಸ್ಟಲಿನೋ

Pinterest LinkedIn Tumblr

ಮಂಗಳೂರು : ‘ಇಂದಿನ ತುಳು ಸಿನಿಮಾಗಳನ್ನು ಮಾಡಿದವರು ‘ಅಸೆಟ್ ಉಂಡು, ಕಿಸೆಟ್ ಇಜ್ಜಿ’ (ಆಸ್ತಿ ಇದೆ. ಕಿಸೆಯಲ್ಲಿ ಇಲ್ಲ) ಎನ್ನುವಂತಾಗಿದೆ. ಅದಕ್ಕಾಗಿ ತಾಂತ್ರಿಕತೆಯ ಜೊತೆಗೆ ಜನತೆಗೆ ಮೌಲಿಕವಾದ ಸಿನಿಮಾವನ್ನು ನೀಡಬೇಕು. ಸಿನಿಮಾವು ಮೌಲಿಕ ಹಾಗೂ ತಾಂತ್ರಿಕವಾಗಿರುವ ಜೊತೆಗೆ ಹಾಕಿದ ಹಣವನ್ನು ವಾಪಸ್ ಪಡೆಯುವಂತಿರಬೇಕು’ ಎಂದು ಚಿತ್ರ ನಿರ್ಮಾಪಕ / ನಿರ್ದೇಶಕ ರಿಚರ್ಡ್ ಕ್ಯಾಸ್ಟಲಿನೋ ಹೇಳಿದರು.

ತುಳು ಅಕಾಡೆಮಿ ಚಾವಡಿಯಲ್ಲಿ ‘ನಾಟಕ ನಿರ್ದೇಶಕ ಮತ್ತು ಬರಹಗಾರ ವಸಂತ ವಿ ಅಮೀನ್’ ಇವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಹಮ್ಮಿಕೊಳ್ಳಲಾದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಲ್ಲಿ ‘ಚಾವಡಿ ತಮ್ಮನ ಬೊಕ್ಕ ಪಾತೆರಕತೆ’ (ಚಾವಡಿ ಸನ್ಮಾನ ಮತ್ತು ಮಾತುಕತೆ) ಸಮಾರಂಭದಲ್ಲಿ ಅವರು ಮಾತನಾಡಿದರು.

ನಾನು ಹುಟ್ಟು ಕೊಂಕಣಿಗ ಆಗಿರಬಹುದು. ಆದರೆ, ತೌಳವ ಸಂಸ್ಕೃತಿಯಲ್ಲಿ ನನ್ನಲ್ಲಿ ತುಂಬಿದೆ. ಅದು ತುಳುಭಾಷೆ ಹಾಗೂ ನೆಲದ ಪ್ರಭಾವ’ ಎಂದರು. ‘ನಿರ್ದೇಶಕ ವಸಂತ ವಿ. ಅಮೀನ್ ಅವರು ಬದುಕೊಂಜಿ ಕವಿತೆ ಮೂಲಕ ಹಲವಾರು ತುಳು ನಾಟಕ, ಸಿನಿಮಾಗಳನ್ನು ನೀಡಿದರು. ಅವರ ಕೊಡುಗೆ ಅಪಾರವಾಗಿದೆ ಎಂದು ಕ್ಯಾಸ್ಟಲಿನೋ ಹೇಳಿದರು.

ಚಾವಡಿ ಸನ್ಮಾನ ಸ್ವೀಕರಿಸಿ ಸಂವಾದಲ್ಲಿ ಮಾತನಾಡಿದ ವಸಂತ ವಿ. ಅಮೀನ್’ ಹಿಂದಿನ ಸಿನಿಮಾಗಳನ್ನು ಮತ್ತೆ ಮತ್ತೆ ನೋಡಬೇಕು ಎಂದು ಅನಿಸುತ್ತಿತ್ತು. ಆದರೆ ಇಂದಿನ ಸಿನಿಮಾಗಳು ನಾವು ಚಿತ್ರಮಂದಿರಕ್ಕೆ ಹೋಗುವ ಮೊದಲೇ ಹೋಗಿರುತ್ತವೆ. ಹಣದ ಪ್ರಭಾವದಿಂದ ಸಿನಿಮಾವನ್ನು ನೂರು ದಿನ ಓಡಿಸಬಹುದು. ಆದರೆ, ಜನಮಾನಸದಲ್ಲಿ ನೆಲೆ ನಿಲ್ಲುವಂತೆ ಮಾಡಲು ಕಲಾಪ್ರಜ್ಞೆ ಮತ್ತು ಸ್ಪಂದನೆ ಬೇಕು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಅಂದಿನ ಮತ್ತು ಇಂದಿನ ಕಲಾವಿದರೆಲ್ಲರೂ ಒಂದೇ. ನಡುವೆ ವಯಸ್ಸಿನ ಅಂತರ ಇರಬಹುದು. ಆದರೆ, ನೈಜ ಕಲಾವಿದರ ವ್ಯಕ್ತಿತ್ವ ಬದಲಾಗುವುದಿಲ್ಲ’ ಎಂದರು. ನಿರ್ದೇಶಕ ಡಾ. ಸಂಜೀವ ದಂಡಕೇರಿ ಮಾತನಾಡಿ, ‘ತುಳು ಸಾಹಿತ್ಯ ಅಕಾಡೆಮಿಯು ತುಳುವರಿಗೆ ತವರು ಮನೆಯಂತೆ’ ಎಂದರು. ‘ಕಲಾವಿದನಿಗೆ ಕಲೆಯ ಜೊತೆ ಹೃದಯ ವಿಶಾಲತೆಯೂ ಇರಬೇಕು. ತಾಳ್ಮೆ, ಸಂಯಮ, ಪರಿಶ್ರಮವಿದ್ದರೆ ಕಲಾವಿದರು ಬೆಳೆದು ನಿಲ್ಲಲು ಸಾಧ್ಯ. ಅಂತಹ ಕಲಾವಿದ ವಸಂತ ವಿ. ಅಮೀನ್’ ಎಂದು ಶ್ಲಾಘಿಸಿದರು.

ಅಕಾಡೆಮಿ ಅಧ್ಯಕ್ಷ ಎ. ಸಿ. ಭಂಡಾರಿ ಮಾತನಾಡಿ, ‘ತುಳುವರು ಒಂದು ಜಾತಿ, ಧರ್ಮ, ವೃತ್ತಿ ಪ್ರದೇಶಕ್ಕೆ ಸೀಮಿತವಾಗಿಲ್ಲ. ಸದಾ ಮೃದು ವ್ಯಕ್ತಿತ್ವದ ಮೂಲಕ ಎಲ್ಲರನ್ನೂ ಒಳಗೊಳ್ಳುವವರು ಎಂದರು. ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ. ಬಿ, ಎ. ಶಿವಾನಂದ ಕರ್ಕೇರ, ವಾಸುದೇವ ಮೂಡುಬೆಳ್ಳೆ, ಬೆನೆಟ್ ಜಿ ಅಮ್ಮನ್ನ ಹಾಗೂ ವಿಜಯಾ ಶೆಟ್ಟಿ ಸಾಲೆತ್ತೂರು ಇದ್ದರು.

Comments are closed.