
ಮಂಗಳೂರು,ಜುಲೈ.30: ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ ಸಿದ್ದಾರ್ಥ್ ಮಂಗಳೂರಿನ ತೊಕ್ಕೊಟ್ಟು ಸಮೀಪದ ನೇತ್ರಾವತಿ ಸೇತುವೆ ಬಳಿಯಿಂದ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮೀನುಗಾರರೊಬ್ಬರು ಸೋಮವಾರ ರಾತ್ರಿ ವ್ಯಕ್ತಿಯೊಬ್ಬರು ಸೇತುವೆಯಿಂದ ಕೆಳಗೆ ಹಾರಿದ್ದನ್ನು ತಾನು ನೋಡಿದ್ದಾಗಿ ದೃಢಪಡಿಸಿದ್ದಾರೆ.
ಸೋಮವಾರ ಸಂಜೆ 7 ಗಂಟೆ ವೇಳೆಗೆ ನಾನು ಮೀನುಗಾರಿಕೆಯಲ್ಲಿ ತೊಡಗಿದ್ದು, ಮನೆಗೆ ತೆರಳುವ ಸಿದ್ಧತೆಯಲ್ಲಿದ್ದೆ. ನೇತ್ರಾವತಿ ನದಿಯ ಸೇತುವೆಯಿಂದ ವ್ಯಕ್ತಿಯೋರ್ವರು ಹಾರಿದರು ಎಂದು ಸ್ಥಳೀಯ ಮೀನುಗಾರ ಉಳ್ಳಾಲ ಭಾಗದ ನಿವಾಸಿ ಸೈಮನ್ ಡಿಸೋಜಾ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತಾನು ಎಂದಿನಂತೆ ಸೋಮವಾರ ಸಾಯಂಕಾಲ ಮೀನು ಹಿಡಿಯಲೆಂದು ನೇತ್ರಾವತಿ ನದಿಯಲ್ಲಿ ಬಲೆ ಹಾಕುತ್ತಿದ್ದ ಸಂದರ್ಭದಲ್ಲಿ ಸುಮಾರು 7 ಗಂಟೆಯ ಹೊತ್ತಿಗೆ ಏನೋ ಒಂದು ಸೇತುವೆ ಮೇಲಿನಿಂದ ಬಿದ್ದ ಹಾಗೆ ಕಾಣಿಸಿತು.ಈ ವೇಳೆ ತಾನು ಸ್ಥಳಕ್ಕೆ ಹೋಗಿ ನೋಡಿದಾಗ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ನದಿಯ ಕೆಳಕ್ಕೆ ಹೋಗುತ್ತಾ ಮುಳುಗಿದರು. ಆತನನ್ನು ಹಿಡಿಯಲು ತಾನು ಹಲವು ಬಾರಿ ಯತ್ನಿಸಿದೆ. ಆದರೆ, ಪ್ರಯತ್ನ ವಿಫಲವಾಯಿತು ಎಂದು ಸೈಮನ್ ತಿಳಿಸಿದ್ದಾರೆ.
ಸೇತುವೆಯ ಆರನೇ ನಂಬರ್ ಪಿಲ್ಲರ್ ಹತ್ತಿರ ಇವರು ಮೀನು ಹಿಡಿಯುತ್ತಿದ್ದರು. ಮೇಲಿನಿಂದ ಬೀಳುವುದು ಇವರಿಗೆ ಕಾಣಿಸಿದ್ದು ಎಂಟನೇ ಕಂಬದ ಹತ್ತಿರ. ಸೇತುವೆ ಮೇಲಿನಿಂದ ಯಾರೋ ನದಿಗೆ ಹಾರಿದ್ದಾರೆ ಎಂದು ಸೈಮನ್ ಅಂದುಕೊಂಡು ಕೂಡಲೇ ತಮ್ಮ ದೋಣಿಯನ್ನು ಸೈಮನ್ ಅವರು ಎಂಟನೇ ಪಿಲ್ಲರ್ ಕಡೆಗೆ ಚಲಾಯಿಸಿಕೊಂಡು ಬಂದಿದ್ದಾರೆ. ಆದರೆ ಅಷ್ಟು ಹೊತ್ತಿಗಾಗಲೇ ನೀರಿಗೆ ಹಾರಿದ್ದ ಆ ವ್ಯಕ್ತಿ ಮುಳುಗಲಾರಂಭಿಸಿದ್ದರು. ಮತ್ತು ಸೈಮನ್ ಅವರು ಅಲ್ಲಿಗೆ ತಲುಪುವಷ್ಟರಲ್ಲಿ ಆ ಆಕೃತಿ ನೀರಿನ ಆಳಕ್ಕೆ ಮುಳುಗಿಯಾಗಿತ್ತು, ಹಾಗಾಗಿ ನಾನು ಅಸಹಾಯಕನಾದೆ ಎಂದು ಸೈಮನ್ ಅವರು ಮಾಹಿತಿ ನೀಡಿದ್ದಾರೆ.
ಈ ಸ್ಥಳೀಯ ಮೀನುಗಾರ ನೋಡಿರುವ ಘಟನೆ ಸಿದ್ಧಾರ್ಥ್ ನಾಪತ್ತೆ ಘಟನೆ ನಡೆದ ಅಂದಾಜು ಸಮಯದಲ್ಲೇ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ನದಿಗೆ ಹಾರಿದ ವ್ಯಕ್ತಿ ಸಿದ್ಧಾರ್ಥ್ ಅವರೇ ಇರಬಹುದೆಂದು ಮಂಗಳೂರು ಪೊಲೀಸರು ಶಂಕೆ ವ್ಯಕ್ತಪಡಿಸಿ, ತನಿಖೆ ಕೈಗೊಂಡಿದ್ದಾರೆ.
Comments are closed.