ಕರಾವಳಿ

ಕಾಫಿ ಡೇ ಸಿದ್ಧಾರ್ಥ ನಿಗೂಡ ನಾಪತ್ತೆ ಪ್ರಕರಣ : ಆತ್ಮಹತ್ಯೆ ಶಂಕೆ? – ನೇತ್ರಾವತಿ ನದಿಯಲ್ಲಿ ತೀವ್ರ ಶೋಧ

Pinterest LinkedIn Tumblr

ಮಂಗಳೂರು, ಜುಲೈ 30: ಮಂಗಳೂರು :ಕೇಂದ್ರದ ಮಾಜಿ ಸಚಿವ, ಮಾಜಿ ಸಿಎಂ ಎಸ್ ಎಂ ಕೃಷ್ಣ ಅಳಿಯ, ಕಾಫಿ ಡೇ ಆಡಳಿತ ನಿರ್ದೇಶಕ ಸಿದ್ಧಾರ್ಥ ನೇತ್ರಾವತಿ ನದಿ ತೀರದ ಸಮೀಪ ನಿಗೂಢವಾಗಿ ನಾಪತ್ತೆಯಾಗಿದ್ದು, ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ನದಿಯಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗಿದೆ.

ಸಿದ್ಧಾರ್ಥ ಮಂಗಳೂರಿನ ತೊಕ್ಕೋಟ್ ನೇತ್ರಾವತಿ ಸೇತುವೆ ಮೇಲಿನಿಂದ ನಾಪತ್ತೆಯಾಗಿರುವ ವಿಚಾರ ನಿಗೂಡವಾಗಿದ್ದು,ಅವರ ಶೋಧಕಾರ್ಯ ಮುಂದುವರೆದಿದೆ

ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್‌, ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀ ಗಣೇಶ್, ಎಸಿಪಿ ಶ್ರೀನಿವಾಸ್ ಸಿಬ್ಬಂದಿ, ಅಗ್ನಿಶಾಮಕದಳಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಹುಡುಕಾಟ ನಡೆಸಿದ್ದಾರೆ.

ಡಾಗ್ ಸ್ಕ್ವಾಡ್ ಸೇತುವೆಯುದ್ದಕ್ಕೂ ಹುಡುಕಾಟ ನಡೆಸಿಕೊಂಡು ಬಂದು ಸೇತುವೆ ಮಧ್ಯಭಾಗದಲ್ಲಿ ನದಿಯೆಡೆ ಮುಖಮಾಡಿ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ತಡ ರಾತ್ರಿಯಿಂದ ನೇತ್ರವತಿ ನದಿಯಲ್ಲಿ ಬೋಟ್ ಗಳನ್ನು ಬಳಸಿ ಶೋಧ ನಡೆಸಲಾಗುತ್ತಿದೆ.

ನದಿಯಲ್ಲಿ ನೀರಿನ ಸೆಳೆತ ಹೆಚ್ಚಾಗಿರುವುದರಿಂದ ಶೋಧಕಾರ್ಯಕ್ಕೆ ತೊಡಕಾಗಿದೆ. ಬೋಟ್‌ಗಳ ಮೂಲಕ ಕಾರ್ಯಾಚರಣೆ ಮುಂದುವರೆದಿದೆ. ಒಂದು ವೇಳೆ ನದಿಗೆ ಹಾರಿದ್ದಲ್ಲಿ ಅಳಿವೆ ಬಾಗಿಲು ಅಥವಾ ದಡದ ಬಳಿ ಶವ ದೊರೆಯುವ ಬಗ್ಗೆ ಪೊಲೀಸರ ಅಂದಾಜು ವ್ಯಕ್ತಪಡಿಸಿದ್ದಾರೆ.

ಕಾರಿನ ಚಾಲಕ ಪೊಲೀಸರಿಗೆ ನೀಡಿದ ಮಾಹಿತಿಯಂತೆ ಅವರು ಬೆಂಗಳೂರಿನಿಂದ ಮಂಗಳೂರಿಗೆಂದು ಹೇಳಿ ಚಾಲಕ ಮತ್ತು ಇಬ್ಬರ ಜತೆಗೂಡಿ ಕಾರಿನಲ್ಲಿ ಹೊರಟಿದ್ದರು. ಪಂಪ್‌ವೆಲ್‌ ತಲುಪಿದಾಗ ಜತೆಗಿದ್ದ ಇಬ್ಬರು ಕಾರಿನಿಂದ ಇಳಿದಿದ್ದರು. ಬಳಿಕ ಮಾಲಕನ ಸೂಚನೆಯಂತೆ ಚಾಲಕ ಕಾರನ್ನು ಕಾಸರಗೋಡು ಹೆದ್ದಾರಿಯತ್ತ ತಿರುಗಿಸಿದ್ದನು. ನೇತ್ರಾವತಿ ಸೇತುವೆ ಬಳಿ ತಲುಪುತ್ತಿದ್ದಂತೆ ಕಾರನ್ನು ಎಡ ಬದಿಯಲ್ಲಿರುವ ಕಂರ್ಬಿಸ್ಥಾನದ ರಸ್ತೆಯಲ್ಲಿ ಚಲಾಯಿಸಲು ಹೇಳಿದ್ದರು. ಕೆಲವು ಮೀಟರ್‌ ಮುಂದೆ ಸಾಗಿದ ಬಳಿಕ ಕಾರನ್ನು ನಿಲ್ಲಿಸಲು ಹೇಳಿ ಮೊಬೈಲ್‌ನಲ್ಲಿ ಮಾತನಾಡುತ್ತ ಸ್ವಲ್ಪ ಮುಂದಕ್ಕೆ ಹೋದವರು ಬಳಿಕ ನಾಪತ್ತೆಯಾಗಿದ್ದಾರೆ.

ಸೇತುವೆ ಮತ್ತೊಂದು ಭಾಗ ತೊಕ್ಕೋಟ್‌ನಿಂದ ಮಂಗಳೂರು ಕಡೆ ಬರೋ ದಾರಿಯಲ್ಲಿ ಸೇತುವೆಯ ಮಧ್ಯಭಾಗದಿಂದಲೇ ನಾಪತ್ತೆಯಾಗಿದ್ದಾರೆ. ಘಟನೆಯ ವೇಳೆ ಮಳೆ ಸುರಿಯುತ್ತಿದ್ದದ್ದರಿಂದ ಸಿದ್ದಾರ್ಥ ಉದ್ದಕ್ಕೆ ಮಾತಾಡಿಕೊಂಡು ಯಾವ ಕಡೆ ತೆರಳಿದ್ದಾರೆಂದು ಅವರ ಮಾಹಿತಿ ದೊರೆತಿರಲಿಲ್ಲ. ಮೊಬೈಲ್‌ಗೆ ಕರೆ ಮಾಡಿದರೆ ಸ್ವಿಚ್ ಆಫ್ ಸಂದೇಶ ಬರುತ್ತಿದೆ.

ಇದೇ ವೇಳೆ ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ನದಿಯಲ್ಲಿ ಶೋಧಕಾರ್ಯ ಮುಂದುವರೆದಿದೆ.

Comments are closed.