ಕರಾವಳಿ

ಜಾತಿ-ಧರ್ಮದ ನಡುವೆ ನಡೆದ ಘರ್ಷಣೆಯೇ ಭಾರತಕ್ಕೆ ವಿದೇಶಿಗರ ಆಗಮನಕ್ಕೆ ಕಾರಣ :ಡಾ. ಇಸ್ಮಾಯಿಲ್

Pinterest LinkedIn Tumblr

ಮಂಗಳೂರು : ಮಹಾತ್ಮಗಾಂಧಿ ಶಾಂತಿ ಪ್ರತಿಷ್ಠಾನ ಮಂಗಳೂರು ಮತ್ತು ಬಲ್ಮಠದ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ‘ಗಾಂಧಿ 150’ ವಿಶೇಷ ಉಪನ್ಯಾಸ ಕಾರ್ಯಕ್ರಮವು ಕಾಲೇಜಿನಲ್ಲಿ ನಡೆಯಿತು.

ಈ ಸಂದರ್ಭ ಮಾತನಾಡಿದ ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ಇಸ್ಮಾಯಿಲ್ ಮಹಾತ್ಮ ಗಾಂಧೀಜಿಯ ನಾಯಕತ್ವ ರೀತಿ ತುಂಬಾ ಸರಳವಾಗಿತ್ತು. ತಾಳ್ಮೆ ಮತ್ತು ಸಹನೆ ಅವರಲ್ಲಿತ್ತು. ಗಾಂಧೀಜಿಯವರಲ್ಲಿ ಸತ್ಯ ಪ್ರತಿಪಾದನೆಯ ಧೈರ್ಯವಿತ್ತು. ವಸಾಹತು ಸಂದರ್ಭದ ಪೂರ್ವ ದಿನಗಳಲ್ಲಿ ರಾಜರು ಭಾರತವನ್ನು ಆಳುತ್ತಿದ್ದರು. ಅವರ ವಿರೋಧದ ಆಲೋಚನೆಗಳಿಂದ ಜಾತಿ-ಧರ್ಮದ ನಡುವೆ ಘರ್ಷಣೆ ನಡೆದ ಕಾರಣ ಭಾರತಕ್ಕೆ ವಿದೇಶಿಗರ ಆಗಮನಕ್ಕೆ ಕಾರಣವಾಯಿತು ಎಂದು ಹೇಳಿದರು.

ನಮ್ಮಲ್ಲಿ ಸಮನ್ವಯದ ಕೊರತೆಯಿದ್ದ ಕಾರಣ ಬ್ರಿಟಿಷರು ಭಾರತಕ್ಕೆ ಬಂದರು. ವಸಾಹತು ಯುಗದಲ್ಲಿ ಭಾರತದಲ್ಲಿ ರಾಷ್ಟ್ರೀಯತೆ ಕಲ್ಪನೆ ಇರಲಿಲ್ಲ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಳಿಕ ರಾಷ್ಟ್ರೀಯತೆಯ ವಿಚಾರ ಜನಜನಿತವಾಯಿತು. ಮಹಾತ್ಮ ಗಾಂಧೀಜಿ ಪ್ರತಿಯೊಬ್ಬರನ್ನು ಪ್ರೀತಿಯಿಂದ ಕಾಣುವ ಮುಖೇನ ಜನಮನ ಮುಟ್ಟಿದರು ಎಂದು ಪ್ರೊ. ಇಸ್ಮಾಯೀಲ್ ತಿಳಿಸಿದರು.

ಪ್ರತಿಷ್ಠಾನದ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಮಾತನಾಡಿದರು. ಬಲ್ಮಠ ಸರಕಾರಿ ಕಾಲೇಜು ಪ್ರಾಂಶುಪಾಲ ಪ್ರೊ.ಜಗದೀಶ್ ಬಾಳ ಅಧ್ಯಕ್ಷತೆ ವಹಿಸಿದ್ದರು. ಭಾರತ ಸೇವಾದಳದ ಸಕ್ರೀಯರಾದ ಪ್ರಭಾಕರ ಶ್ರೀಯಾನ್, ಮೋಹಿತ್ ಸುವರ್ಣ, ಶ್ರೀನಿವಾಸ್, ಶಿಕ್ಷಕಿ ಡಾ. ಶೈಲಾ, ಜೋಸ್ನಾ ಉಪಸ್ಥಿತರಿದ್ದರು.

ಶಿಕ್ಷಕಿ ಜೋಸ್ನಾ ಸ್ವಾಗತಿಸಿದರು. ಡಾ. ಶೈಲಾ ವಂದಿಸಿದರು. ವಿದ್ಯಾರ್ಥಿನಿ ವೈಶಾಲಿ ಕಾರ್ಯಕ್ರಮ ನಿರೂಪಿಸಿದರು.

Comments are closed.