
ವಿದ್ಯುತ್ ದರ ಏರಿಕೆ ಖಂಡಿಸಿ ಮೆಸ್ಕಾಂ ಪ್ರಧಾನ ಕಚೇರಿಯೆದುರು ಸಿಪಿಐಎಂ ಪ್ರತಿಭಟನೆ
ಮಂಗಳೂರು : ವಿದ್ಯುತ್ ದರ ಏರಿಕೆ, ಹೆಚ್ಚುವರಿ ಡಿಪಾಸಿಟ್, ತಪ್ಪು ಲೆಕ್ಕಾಚಾರ ಮುಂತಾದ ಮೆಸ್ಕಾಂನ ಅವ್ಯವಸ್ಥೆಗಳ ವಿರುದ್ದ CPIM ನೇತ್ರತ್ವದಲ್ಲಿ ಶುಕ್ರವಾರ ನಗರದ ಮೆಸ್ಕಾಂ ಪ್ರಧಾನ ಕಚೇರಿಯೆದುರು ಪ್ರತಿಭಟನಾ ಪ್ರದರ್ಶನ ಜರುಗಿತು.
ನೂರಾರು ಸಂಖ್ಯೆಯಲ್ಲಿದ್ದ CPIM ಕಾರ್ಯಕರ್ತರು ಹಾಗೂ ಸಾರ್ವಜನಿಕರು, ವಿದ್ಯುತ್ ದರ ಏರಿಕೆಯನ್ನು ಹಿಂಪಡೆಯಿರಿ, ಹೆಚ್ಚುವರಿ ಡಿಪಾಸಿಟ್ ಬೇಡವೇ ಬೇಡ,ತಪ್ಪು ಲೆಕ್ಕಾಚಾರಗಳನ್ನು ಸರಿಪಡಿಸಿರಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಾ ಸಾಗಿದರು.ಬಳಿಕ ಬಿಜೈನಲ್ಲಿರುವ ಮೆಸ್ಕಾಂ ಪ್ರಧಾನ ಕಚೇರಿಯೆದುರು ಜಮಾವಣೆಗೊಂಡರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ CPIM ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿರುವುದರ ಜೊತೆಗೆ ವಿದ್ಯುತ್ ದರವೂ ಕೂಡ ತೀವ್ರವಾಗಿ ಹೆಚ್ಚುತ್ತಿದ್ದು, ಜನಸಾಮಾನ್ಯರ ಬದುಕು ತೀರಾ ದುಸ್ತರವಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.ಮತ್ತೊಂದು ಕಡೆ ಡಿಪಾಸಿಟ್ ಮೌಲ್ಯ ಕಡಿಮೆಯಾಗಿದೆ ಎಂದು ಜನತೆಗೆ ಪಂಗನಾಮ ಹಾಕಿ ಅವರಿಂದ ಹೆಚ್ಚುವರಿ ಡಿಪಾಸಿಟನ್ನು ವಸೂಲಿ ಮಾಡುವ ಮೂಲಕ ಮೆಸ್ಕಾಂ ಹಗಲು ದರೋಡೆ ನಡೆಸುತ್ತಿದೆ. ವಿದ್ಯುತ್ ಸಂಪರ್ಕ ಪಡೆಯುವಾಗಲೇ ಮೆಸ್ಕಾಂ ನಿಗದಿಪಡಿಸಿದ ಡಿಪಾಸಿಟ್ ನೀಡಲಾಗಿದ್ದರೂ ವರ್ಷಕ್ಕೆರಡು ಬಾರಿ ಬಲವಂತದಿಂದ ಗ್ರಾಹಕರಿಂದ ಡಿಪಾಸಿಟ್ ಹೆಸರಿನಲ್ಲಿ ಅಕ್ರಮ ವಸೂಲಿ ಮಾಡಲಾಗುತ್ತಿದೆ.ಮಾತ್ರವಲ್ಲದೆ ಜನರಿಗೆ ಅರ್ಥವಾಗದ ಲೆಕ್ಕಾಚಾರಗಳನ್ನು ಬಳಸಿ ಹೆಚ್ಚಿನ ಮೊತ್ತದ ಬಿಲ್ಲ್ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
CPIM ಮಂಗಳೂರು ನಗರ ಉತ್ತರ ಕಾರ್ಯದರ್ಶಿಗಳಾದ ದಯಾನಂದ ಶೆಟ್ಟಿಯವರು ಮಾತನಾಡುತ್ತಾ, ದಶಕಗಳ ಹಿಂದೆ ವಿದ್ಯುತ್ ದರವನ್ನು ಪೈಸೆಗಳ ಲೆಕ್ಕಾಚಾರದಲ್ಲಿ ಏರಿಸಲೂ ಕೂಡ ಹಿಂಜರಿಯುತ್ತಿತ್ತು ಹಾಗೂ ಅದನ್ನು ಬಹಿರಂಗವಾಗಿ ಮಾಧ್ಯಮಗಳ ಮೂಲಕ ಘೋಷಣೆ ಮಾಡುತ್ತಿತ್ತು.ಆದರೆ ಇತ್ತೀಚಿನ ದಿನಗಳಲ್ಲಿ ಜನತೆಗೆ ಯಾವುದೇ ರೀತಿಯ ಮುನ್ಸೂಚನೆ ನೀಡದೆ ವರ್ಷಕ್ಕೆ 2 ಬಾರಿ ಏಕಾಏಕಿಯಾಗಿ ವಿದ್ಯುತ್ ದರವನ್ನು ವಿಪರೀತವಾಗಿ ಹೆಚ್ಚಿಸಿದೆ. ಇದರಿಂದಾಗಿ ಕುಟುಂಬವೊಂದರ ಒಟ್ಟು ಖರ್ಚಿನ ಕಾಲು ಭಾಗ ವಿದ್ಯುತ್ ಬಿಲ್ಲ್ ಪಾವತಿಸಲು ಮೀಸಲಿಡಬೇಕಾದ ಅನಿವಾರ್ಯತೆ ಸ್ರಷ್ಠಿಯಾಗಿದೆ ಎಂದು ಹೇಳಿದರು.
CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ.ಬಾಲಕ್ರಷ್ಣ ಶೆಟ್ಟಿ ಹಾಗೂ CPIM ದ.ಕ.ಜಿಲ್ಲಾ ಸಮಿತಿ ಸದಸ್ಯರಾದ ಯೋಗೀಶ್ ಜಪ್ಪಿನಮೊಗರುರವರು ಮೆಸ್ಕಾಂ ಅವ್ಯವಸ್ಥೆಗಳನ್ನು ತೀವ್ರವಾಗಿ ಖಂಡಿಸುತ್ತಾ, ಈ ಬಗ್ಗೆ ಮಧ್ಯಪ್ರವೇಶಿಸಿ ಜನತೆಯ ಪರವಾಗಿ ತೀರ್ಮಾನ ಕೈಗೊಳ್ಳಬೇಕಾದ ರಾಜ್ಯ ಸರಕಾರವು ಡೋಲಾಯಮಾನ ಪರಿಸ್ಥಿತಿಯಲ್ಲಿದೆ.ತನ್ನ ಸ್ವಾರ್ಥ ಸಾಧನೆಗಾಗಿ ಜಾತ್ಯತೀತ ನೆಲೆಗಟ್ಟಿನಲ್ಲಿ ರಚಿತವಾದ ಸರಕಾರವನ್ನು ಕೆಲವೊಂದು ಶಾಸಕರು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹೇಳಿದರು.
ಬಳಿಕ ಉನ್ನತ ಮಟ್ಟದ ನಿಯೋಗವೊಂದು ಮೆಸ್ಕಾಂ ನ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿಯಾಗಿ ಈ ಬಗ್ಗೆ ಮನವಿ ಸಲ್ಲಿಸಿತು.
ಪ್ರತಿಭಟನೆಯಲ್ಲಿ CPIM ಜಿಲ್ಲಾ ನಾಯಕರಾದ ಜಯಂತಿ ಬಿ.ಶೆಟ್ಟಿ, ಸಂತೋಷ್ ಬಜಾಲ್,CPIM ಮಂಗಳೂರು ನಗರ ಮುಖಂಡರಾದ ಬಾಬು ದೇವಾಡಿಗ,ಬಶೀರ್ ಪಂಜಿಮೊಗರು,ದಿನೇಶ್ ಶೆಟ್ಟಿ, ಅಶೋಕ್ ಶ್ರೀಯಾನ್, ಮುಸ್ತಫಾ ಮುಂತಾದವರು ಭಾಗವಹಿಸಿದ್ದರು.
Comments are closed.