ಕರಾವಳಿ

ಕರಾವಳಿಯಲ್ಲಿ ಭಾರೀ ಮಳೆ :ಹಲವೆಡೆಗಳಲ್ಲಿ ಕೃತಕ ನೆರೆ ಸೃಷ್ಟಿ ;ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆ

Pinterest LinkedIn Tumblr

ಮಂಗಳೂರು, ಜುಲೈ.19: ಕರಾವಳಿ ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದ ಬಿರುಸಿನಿಂದ ಆರಂಭಗೊಂಡ ಮಳೆ ಗುರುವಾರ-ಶುಕ್ರವಾರವೂ ಮುಂದುವರಿದಿದ್ದು, ಮಂಗಳೂರಿನ ಕೆಲವೆಡೆ ಕೃತಕ ನೆರೆ ಪರಿಸ್ಥಿತಿ ಉದ್ಭವವಾಗಿದೆ.

ಕಳೆದ ಮೂರು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಾಂತ ಉತ್ತಮ ಮಳೆಯಾಗುತ್ತಿದ್ದು, ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನಗರದ ತಗ್ಗುಪ್ರದೇಶಗಳು ಜಲಾವೃತಗೊಂಡಿದೆ .ಮಂಗಳೂರಿನಲ್ಲಿರುವ ಕೇಂದ್ರ ರೈಲು ನಿಲ್ದಾಣದೊಳಗೆ ಮಳೆ ನೀರು ನುಗ್ಗಿದೆ. ಟಿಕೆಟ್ ಕೌಂಟರ್ ಹೊರಗಡೆ ನೀರು ನಿಂತಿದ್ದು, ಅದನ್ನು ಹೊರಹಾಕಲು ಸಿಬ್ಬಂದಿಗಳು ಹರಸಾಹಸಪಡುವುದು ಕಂಡು ಬಂತು.

ಕರಾವಳಿಯ ನಾನಾ ಕಡೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಆಗಾಗ್ಗೆ ಜೋರಾದ ಗಾಳಿ-ಮಳೆ ಸುರಿಯುತ್ತಿದೆ ಮಂಗಳೂರು ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ಮುಂಗಾರು ಮಳೆ ಅಬ್ಬರ ಪಡೆದಿದ್ದು, ಪಶ್ಚಿಮ ಘಟ್ಟ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಚುರುಕು ಪಡೆದಿದೆ. ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ. ಜಿಲ್ಲೆಯ ಜೀವನಾಡಿಯಾದ ನೇತ್ರಾವತಿ ಮತ್ತು ಕುಮಾರಾಧಾರಾ ನದಿ ನೀರಿನ ಮಟ್ಟ ಏರಿಕೆಯಾಗಿದೆ.

ದ.ಕ. ಜಿಲ್ಲಾದ್ಯಂತ ಮಳೆ ಬಿರುಸು ಪಡೆದಿದ್ದು, ಕೊಟ್ಟಾರ ಚೌಕಿಯಲ್ಲಿ ರಾಜಕಾಲುವೆಗಳು ತುಂಬಿ ಸಮೀಪದ ಮನೆಗಳಿಗೆ ನೀರು ನುಗ್ಗಿದೆ. ನಗರದ ಎಂಪೈರ್ ಮಾಲ್ ಸಮೀಪ, ಜೈಲು ರಸ್ತೆ, ಗುಜರಾತಿ ಶಾಲೆ ಬಳಿ, ಜ್ಯೋತಿ ವೃತ್ತದಲ್ಲಿ ಚರಂಡಿ ಅವ್ಯವಸ್ಥೆಯಿಂದಾಗಿ ರಸ್ತೆಯಲ್ಲೇ ನೀರು ನಿಂತಿದ್ದು, ಕೃತಕ ನೆರೆ ಸೃಷ್ಟಿಯಾಗಿದೆ. ಇದರಿಂದ ವಾಹನ ಸಂಚಾರಕ್ಕೂ ಕೆಲಕಾಲ ಅಡಚಣೆಯುಂಟಾಗಿತ್ತು. ಮಳೆ ನೀರು ನಿಂತು ಸಂಕಷ್ಟಕ್ಕೀಡಾದವರಿಗೆ ಅಗ್ನಿಶಾಮಕ ದಳ ನೆರವಾಯಿತು.

ಕರಾವಳಿಯಲ್ಲಿ ಸತತ ಮೂರು ದಿನಗಳಿಂದ ಧಾರಾಕರವಾಗಿ ಸುರಿಯುತ್ತಿರುವ ಮುಂಗಾರು ಮಳೆಯಿಂದಾಗಿ ಸಮುದ್ರದ ಭೋರ್ಗರೆತ ಭೀತಿ ಹುಟ್ಟಿಸುವಂತಿದೆ. ಕರಾವಳಿಯಲ್ಲಿ ಕಡಲು ಪ್ರಕ್ಷುಬ್ಧಗೊಂಡಿದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗುತ್ತಿದೆ. ಭಾರೀ ಗಾಳಿ-ಮಳೆಗೆ ಸಮುದ್ರದಲ್ಲಿ ಆಳೆತ್ತರದ ಅಲೆಗಳು ಏಳುತ್ತಿದೆ. ಪಣಂಬೂರು, ತಣ್ಣೀರು ಬಾವಿ, ಉಳ್ಳಾಲ ಹಾಗೂ ಸೋಮೇಶ್ವರ ಬೀಚ್‌ಗಳಲ್ಲಿ ಅಲೆಗಳ ಅಬ್ಬರ ಜೋರಾಗಿದೆ.ಭಾರೀ ಮಳೆಯಾಗುತ್ತಿರುವ ಹಿನ್ನಲೆ ಬೀಚ್‌ಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

ಕರಾವಳಿಯಲ್ಲಿ ಇನ್ನೆರಡು ದಿನಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಈ ನಡುವೆ ತೀವ್ರ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳಲ್ಲಿ ಕಂಟ್ರೋಲ್ ರೂಂಗಳನ್ನು ಸಕ್ರಿಯಗೊಳಿಸಲಾಗಿದೆ.

ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ : ಶನಿವಾರ ಶಾಲಾ ಕಾಲೇಜುಗಳಿಗೆ ರಜೆ

ಭಾರತೀಯ ಹವಾಮಾನ ಇಲಾಖೆ ಹೊರಡಿಸಿರುವ ಮುನ್ಸೂಚನೆಯಂತೆ, ಕರ್ನಾಟಕದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗುವ ಸೂಚನೆಯಿದ್ದು, ದಿನಾಂಕ 20-07-2019 ರಿಂದ 22-07-2019 ಪರೆಗೆ ಪ್ರತಿದಿನ ತಲಾ 200/771 ಮೇಲ್ಪಟ್ಟು ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜು 20 ರ ಶನಿವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿದ್ದಾರೆ

ರೆಡ್‌ ಆಲರ್ಟ್‌ ಘೋಷಣೆ ಆಗಿರುವ ಹಿನ್ನಲೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ತುರ್ತು ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.

Comments are closed.