ಕರಾವಳಿ

ಶಾಸಕ ಕಾಮಾತ್‌ರಿಂದ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಮುಂದೂಡುವಂತೆ ಸಚಿವರಿಗೆ ಮನವಿ

Pinterest LinkedIn Tumblr

ಮಂಗಳೂರು : ಕಂದಾಯ ಸಚಿವ ಆರ್ ವಿ ದೇಶಪಾಂಡೆಯವರು, ಉಸ್ತುವಾರಿ ಸಚಿವ ಯುಟಿ ಖಾದರ್, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾಪಂಚಾಯತ್ ಸಿಇಒ ಸೆಲ್ವಮಣಿ, ಪಾಲಿಕೆ ಆಯುಕ್ತರು, ಜಿಲ್ಲೆಯ ಎಲ್ಲಾ ಶಾಸಕರು ಉಪಸ್ಥಿತರಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ನಗರದ ಪ್ರಾಪರ್ಟಿ ಕಾರ್ಡ್ ಸಮಸ್ಯೆಯ ಬಗ್ಗೆ ವಿವರಿಸಿ ಸಚಿವರಾದ ಆರ್ ವಿ ದೇಶಪಾಂಡೆ ಹಾಗೂ ಯುಟಿ ಖಾದರ್ ಅವರಿಗೆ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಮಾಡುವುದನ್ನು ಸದ್ಯ ಮುಂದೂಡಬೇಕೆಂದು ಮನವಿ ಮಾಡಿದ್ದಾರೆ.

ಅಂದಾಜು 1,60,000 ಅರ್ಜಿಗಳಲ್ಲಿ ಸದ್ಯ 30 ಶೇಕಡಾ ಜನರಿಗೆ ಮಾತ್ರ ಪ್ರಾಪರ್ಟಿ ಕಾರ್ಡ್ ಸಿಕ್ಕಿದೆ. ಆದ್ದರಿಂದ ಈಗಲೇ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಮಾಡುವುದು ಸರಿಯಲ್ಲ ಎಂದು ತಿಳಿಸಿದ ಶಾಸಕ ಕಾಮತ್ ಶಿವಮೊಗ್ಗದಲ್ಲಿ 80% ಪ್ರಾಪರ್ಟಿ ಕಾರ್ಡ್ ವಿತರಿಸಿದ ನಂತರವೇ ಕಡ್ಡಾಯಗೊಳಿಸಲಾಗಿತ್ತು ಎಂದು ತಿಳಿಸಿದರು. ಯಾವುದೇ ಹೊಸ ಯೋಜನೆ ಜಾರಿಗೆ ತರುವಾಗ ಅದಕ್ಕೆ ಸರ್ವ ಸಿದ್ಧತೆಗಳನ್ನು ಮಾಡಿಯೇ ಜಾರಿಗೆ ತರಬೇಕು. ಹಾಗೆ ಮಾಡದೇ ಅನುಷ್ಟಾನಕ್ಕೆ ತರುವುದು ಸರಿಯಲ್ಲ ಎಂದು ಶಾಸಕ ಕಾಮತ್ ತಿಳಿಸಿದರು.

ಜಿಲ್ಲೆಯಲ್ಲಿ ಈ ಹಿಂದೆ ಸರ್ವೆ ನಂಬರ್ ಆಧಾರಿತವಾಗಿ ಆರ್ ಟಿಸಿ ಮಾಡಲಾಗುತ್ತಿತ್ತು. ಈಗ ಪ್ರಾಪರ್ಟಿ ಕಾರ್ಡ್ ಬಂದ ನಂತರ ಸರ್ವೆ ನಂಬರ್ ಇರುವುದಿಲ್ಲ. ಹಾಗಿರುವಾಗ ಪ್ರಾಪರ್ಟಿ ಕಾರ್ಡ್ ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ಅನುಷ್ಟಾನಕ್ಕೆ ಬಂದಾಗ ಆರ್ ಟಿಸಿ, ಖಾತಾ ಅವಶ್ಯಕತೆ ಇರುವುದಿಲ್ಲ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಆದರೆ ಆರ್ಟಿಸಿ ಕಂದಾಯ ಇಲಾಖೆಗೆ ಸಂಬಂಧಪಟ್ಟ ದಾಖಲೆ. ಖಾತಾವನ್ನು ಮಹಾನಗರ ಪಾಲಿಕೆ ನೀಡುವುದು. ಹಾಗಿರುವಾಗ ಪ್ರಾಪರ್ಟಿ ಕಾರ್ಡ್ ಅನುಷ್ಟಾನಗೊಂಡ ನಂತರ ಖಾತಾ ಅವಶ್ಯಕತೆ ಇರುವುದಿಲ್ಲ ಎಂದು ಸಚಿವರು ಅಧಿಕೃತವಾಗಿ ಆದೇಶ ಹೊರಡಿಸಬೇಕು ಎಂದು ಶಾಸಕ ಕಾಮತ್ ಹೇಳಿದರು.

ಇನ್ನು ಬಡವರು ಹಕ್ಕುಪತ್ರದ ಮುಖಾಂತರ ಸಿಕ್ಕಿದಂತಹ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದರೆ ಪ್ರಾಪರ್ಟಿ ಕಾರ್ಡ್ ಹಕ್ಕುಪತ್ರದಿಂದ ಪಡೆದುಕೊಂಡ ಜಾಗ ಎಂದು ಎಲ್ಲಿಯೂ ನಮೂದಿಸಿರುವುದಿಲ್ಲ. ಹೀಗಿರುವಾಗ ಹಕ್ಕುಪತ್ರ ಪಡೆದುಕೊಂಡಿರುವ ಬಡವರು ಸರಕಾರಿ ಜಾಗದಲ್ಲಿ ವಾಸಿಸುತ್ತಿದ್ದಾರೆ ಎಂದೇ ಪ್ರಾಪರ್ಟಿ ಕಾರ್ಡ್ ಹೇಳುತ್ತದೆ. ಇದನ್ನು ಸರಿಪಡಿಸಬೇಕು ಎಂದು ಶಾಸಕ ಕಾಮತ್ ಹೇಳಿದರು.

ಪ್ರಾಪರ್ಟಿ ಕಾರ್ಡ್ ನಲ್ಲಿ ಅನ್ ಡಿವೈಡ್ ರೈಟ್ ಉಲ್ಲೇಖ ಇಲ್ಲ ಎಂದು ಹೇಳಿದ ಶಾಸಕ ಕಾಮತ್ ಫ್ಲಾಟಿನಲ್ಲಿ ಪಾರ್ಕಿಂಗ್ ನಿಗದಿಪಡಿಸಿ ಫ್ಲಾಟ್ ಖರೀದಿಸುವಾಗ ಪಾರ್ಕಿಂಗ್ ಜಾಗ ನೀಡಿರುತ್ತಾರೆ. ಅಲ್ಲಿ ಪಾರ್ಕಿಂಗ್ ಪಡೆದುಕೊಂಡಿರುವ ದಾಖಲೆ ಸಬ್ ರಿಜಿಸ್ಟ್ರಾರ್ ಮೂಲಕ ರಿಜಿಸ್ಟ್ರೇಶನ್ ಮಾಡಿಕೊಂಡಿರುವುದು ಎಲ್ಲಾ ದಾಖಲೆ ಇದ್ದರೂ ಪಾರ್ಕಿಂಗ್ ಜಾಗ ಪ್ರಾಪರ್ಟಿ ಕಾರ್ಡ್ ನಲ್ಲಿ ತೋರಿಸಿಕೊಡಲು ಆಗ್ತಾ ಇಲ್ಲ. ಗಡಿಗುರುತು ಇಲ್ಲದೆ ಯಾವ ಆಧಾರದಲ್ಲಿ ಸರ್ವೆ ಮಾಡುತ್ತೀರಿ ಎಂದು ಕೇಳಿದ ಶಾಸಕ ಕಾಮತ್ ಸಾಫ್ಟ್ ವೇರ್ ನಲ್ಲಿ ಎಲ್ಲವೂ ಸರಿ ಆದ ನಂತರ ಅನುಷ್ಟಾನಕ್ಕೆ ತರಬೇಕು. ಈಗಾಗಲೇ ನಾಲ್ಕೈದು ಬಾರಿ ಕಡ್ಡಾಯ ದಿನಾಂಕಗಳನ್ನು ಮುಂದೂಡುತ್ತಾ ಬಂದಿರುವುದೇ ಸಮಸ್ಯೆಯಿರುವ ಕಾರಣಕ್ಕೆ ಎಂದು ಸಚಿವರಿಗೆ ತಿಳಿಸಿದರು.

ಕಂಪ್ಯೂಟರ್ಸ್, ಸ್ಕ್ಯಾನರ್, ಕ್ಯಾಡ್, ನಾಗರಿಕರಿಗೆ ಕುಳಿತುಕೊಳ್ಳುವ, ಕುಡಿಯುವ ನೀರಿನ , ಶೌಚಾಲಯದ ಅವ್ಯವಸ್ಥೆ ಹಾಗೆಯೇ ಇದೆ ಎಂದು ಕೂಡ ತಿಳಿಸಿದರು. ಅದನ್ನಾದರೂ ಸರಿ ಮಾಡಬಹುದು ಆದರೆ ಸಾಫ್ಟ್ ವೇರ್ ಬದಲಾವಣೆ ಅತ್ಯಗತ್ಯ ಎಂದು ಹೇಳಿದರು. ಇಷ್ಟೆಲ್ಲಾ ಗೊತ್ತಿದ್ದೂ ಉಸ್ತುವಾರಿ ಸಚಿವ ಯುಟಿ ಖಾದರ್ ಹಾಗೂ ಎಂಎಲ್ ಸಿ ಐವನ್ ಡಿಸೋಜಾ ಅವರು ಜನರ ಕಷ್ಟಗಳನ್ನು ಪರಿಹರಿಸುವುದು ಬಿಟ್ಟು ಪ್ರಾಪರ್ಟಿ ಕಾರ್ಡ್ ಕಡ್ಡಾಯಗೊಳಿಸಲು ಮುಂದಾಗುವುದು ಯಾಕೆ. ಅವರಿಗೆ ಜನರ ಕಷ್ಟ ಅರ್ಥವಾಗುವುದಿಲ್ಲವೇ ಎಂದು ಕಾಮತ್ ಪ್ರಶ್ನಿಸಿದರು.

ಇನ್ನು ಚರಂಡಿ, ತೋಡುಗಳ ಹೂಳು ಸರಿಯಾಗಿ ತೆಗೆಯಲಾಗಿಲ್ಲ. ಜನರು ನಿರಂತರವಾಗಿ ದೂರು ಸಲ್ಲಿಸುತ್ತಿದ್ದಾರೆ. 150 ದೂರುಗಳನ್ನು ಅಧಿಕಾರಿಗಳಿಗೆ ಕಳುಹಿಸಿಕೊಟ್ಟಿದ್ದೇವೆ. 50 ಕಡೆಗಳಲ್ಲಿ ಮನೆಯೊಳಗೆ ನೀರು ನುಗ್ಗಿದೆ. ಆರೋಗ್ಯ ವಿಭಾಗದವರು ಸರಿಯಾಗಿ ಕೆಲಸ ನಿರ್ವಹಿಸಿಲ್ಲ. ತೋಡಿನಿಂದ ದೊಡ್ಡ ಚರಂಡಿಗೆ ಅಲ್ಲಿಂದ ರಾಜಕಾಲುವೆಯ ಮೂಲಕ ನೀರು ಸಾಗಬೇಕು. ಆದರೆ ಅದು ಬ್ಲಾಕ್ ಆಗಿ ಸಮಸ್ಯೆಯಾಗುತ್ತಿದೆ. ಆಂಟೋನಿ ವೇಸ್ಟ್ ಮ್ಯಾನೆಂಜ್ ಮೆಂಟಿನವರು ಸರಿಯಾಗಿ ಕರ್ತವ್ಯ ನಿರ್ವಹಿಸದೇ ಚರಂಡಿಯ ಹೂಳೆತ್ತದೆ ಇದ್ದ ಕಾರಣ ಈ ಬಾರಿ ಸಮಸ್ಯೆ ಉದ್ಭವವಾಗಬಹುದು ಎಂದು ಶಾಸಕ ಕಾಮತ್ ತಿಳಿಸಿದರು.

Comments are closed.