ಕರಾವಳಿ

ತುಳು ಸಾಹಿತಿ ಡಾ.ಡಿ.ಕೆ ಚೌಟ ನಿಧನಕ್ಕೆ ತುಳು ಅಕಾಡೆಮಿ ಸಂತಾಪ

Pinterest LinkedIn Tumblr

ಮಂಗಳೂರು : ತುಳು ಮತ್ತು ಕನ್ನಡ ರಂಗಭೂಮಿ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ಹಿರಿಯ ಸಾಹಿತಿ ಡಾ.ಡಿ.ಕೆ ಚೌಟ ನಿಧನಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎ.ಸಿ.ಭಂಡಾರಿ ಸಂತಾಪ ವ್ಯಕ್ತಪಡಿಸಿದ್ದಾರೆ.

1998 ರಿಂದ 2001 ರ ಅವಧಿಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದು ಅನೇಕ ರಚನಾತ್ಮಕ ಕಾರ್ಯ ಚಟುವಟಿಕೆಗಳ ಮೂಲಕ ತುಳುವಿಗೆ ಮಹತ್ವದ ಕೊಡುಗೆ ನೀಡಿರುವ ಇವರು 2010ರಲ್ಲಿ ತುಳು ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತರಾಗಿದ್ದರು. ತುಳು ಜಾನಪದದ ಕಥಾ ವಸ್ತುಗಳನ್ನು ಆಧರಿಸಿ ಅನೇಕ ಮೌಲಿಕ ರಂಗ ಕೃತಿಗಳನ್ನು ಹೊರತಂದು ತುಳು ಮತ್ತು ಕನ್ನಡ ರಂಗಭೂಮಿಯಲ್ಲಿ ವಿಶೇಷ ಗೌರವಕ್ಕೆ ಪಾತ್ರರಾಗಿದ್ದರು.

ಡಾ. ಖ.ಕೆ ಚೌಟರ ನಿಧನ ತುಳು-ಕನ್ನಡ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ ಎಂದು ತುಳು ಅಕಾಡೆಮಿ ಅಧ್ಯಕ್ಷರಾದ ಎ.ಸಿ.ಭಂಡಾರಿಯವರು ತಿಳಿಸಿ ಸಂತಾಪ ವ್ತಕ್ತಪಡಿಸಿರುತ್ತಾರೆ.

ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನ:

ಕೃಷಿ, ರಂಗಭೂಮಿ, ಸಾಹಿತ್ಯ, ಕಲೆ ಸಹಿತ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಚಿಂತಕ, ರಂಗ ನಿರಂತರ ಕಾರ್ಯಾಧ್ಯಕ್ಷರಾಗಿದ್ದ ಮಂಜೇಶ್ವರಸಮೀಪದ ಮೀಯಪದವಿನ ಡಿ.ಕೆ. ಚೌಟ (82) ಅವರು ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗೆ ನಿಧನ ಹೊಂದಿದರು.

ಅವರು ಪತ್ನಿ ರಮಾ ಚೌಟ, ಪುತ್ರಿ ಡಾ| ಪ್ರಜ್ಞಾ ಚೌಟ, ಪುತ್ರ ಬಾಲಿವುಡ್‌ ಸಂಗೀತ ನಿರ್ದೇಶಕ ಸಂದೀಪ್‌ ಚೌಟ (ಮುಂಬಯಿ) ಅವರನ್ನು ಅಗಲಿದ್ದಾರೆ.

ದರ್ಬೆ ಕೃಷ್ಣಾನಂದ ಚೌಟ (ಡಿ.ಕೆ .ಚೌಟ) 1938 ಜೂನ್‌ 1ರಂದು ಕಾಸರಗೋಡು ಜಿಲ್ಲೆಯ ಮೀಯಪದವಿನಲ್ಲಿ ಜನಿಸಿದರು. ಚಿತ್ರಕಲೆ ಹಾಗೂ ರಂಗಭೂಮಿಯ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಅವರು ಕಲಾ ಪೋಷಕರೂ ಆಗಿದ್ದರು. ರಂಗ ನಿರಂತರ ಸಂಸ್ಥೆಯ ಸಾರಥಿ ಯಾಗಿ ಅನೇಕ ಸಾಧನೆ ಮಾಡಿದ್ದಾರೆ.

ಸೃಜನಶೀಲ ಬರಹಗಾರರಾಗಿ ಕನ್ನಡ ಹಾಗೂ ತುಳು ಭಾಷೆಗೆ ಅನನ್ಯ ಸೇವೆ ಸಲ್ಲಿಸಿದ್ದಾರೆ. ಅವರು ಬರೆದ ಮಿತ್ತಬೈಲ್ ಯಮುನಕ್ಕ, ಅರ್ಧಸತ್ಯ, ಬಾಕಿ ಸುಳ್ಳಲ್ಲ, ಕರಿಯಜ್ಜನ ಕಥೆಗಳು, ಪಿಲಿಪತ್ತಿ ಗಡಸ್‌, ಮೂರು ಹೆಜ್ಜೆ, ಮೂರು ಲೋಕ ಪ್ರಮುಖ ಕೃತಿಗಳಾಗಿ ಸಾಹಿತ್ಯ ಲೋಕದಲ್ಲಿ ಗುರುತಿಸಲ್ಪಟ್ಟಿವೆ.

Comments are closed.