ಕರಾವಳಿ

ಎಸಿ ಕಾರು ಬಿಟ್ಟು ಸರಕಾರಿ ಬಸ್ ಏರಿ ಕಚೇರಿಗೆ ಬಂದ ಉಡುಪಿ ಜಿಲ್ಲಾಧಿಕಾರಿ!

Pinterest LinkedIn Tumblr

ಉಡುಪಿ: ಪ್ರತಿನಿತ್ಯ ಹವಾನಿಯಂತ್ರಿತ ವಾಹನದಲ್ಲಿ ಓಡಾಡುತ್ತಿದ್ದ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ತಮ್ಮ ಕಾರು, ದ್ವಿಚಕ್ರ ವಾಹನದಲ್ಲಿ ಕಚೇರಿಗೆ ಆಗಮಿಸುತ್ತಿದ್ದ ಇತರೆ ಸಿಬ್ಬಂದಿಗಳು, ಗುರುವಾರ ಸಾರ್ವಜನಿಕ ಸಾರಿಗೆ ಕಲ್ಪನೆಯಲ್ಲಿ, ಸಾರ್ವಜನಿಕ ಸಮೂಹ ಸಾರಿಗೆ ಬಳಕೆಗೆ ಮುನ್ನುಡಿ ಬರೆದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರ ನಿರ್ದೇಶನದಲ್ಲಿ ಎಲ್ಲರೂ ಒಂದೇ ವಾಹನದಲ್ಲಿ ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಬರುವ ಮೂಲಕ ಜಿಲ್ಲೆಯಲ್ಲಿ ಸಾರ್ವಜನಿಕ ಸಾರಿಗೆ ಬಳಕೆಗೆ ಎಲ್ಲರಿಗೂ ಮಾದರಿಯಾದರು.

ಗುರುವಾರ ಬೆಳಗ್ಗೆ 9.30 ಜಿಲ್ಲಾಧಿಕಾರಿ ನಿವಾಸದಿಂದ, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು, ತಮ್ಮ ಅಧಿಕೃತ ಸರಕಾರಿ ವಾಹನವನ್ನು ಮನೆಯಲ್ಲಿಯೇ ಬಿಟ್ಟು, ತಮ್ಮ ವಾಹನ ಚಾಲಕ ಮತ್ತು ಅಂಗರಕ್ಷಕನೊಂದಿಗೆ ಸಾರ್ವಜನಿಕ ವಾಹನ ಏರಿದರು, ಜಿಲ್ಲಾಧಿಕಾರಿ ನಿವಾಸ ಪಕ್ಕದಲ್ಲೇ ಇರುವ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸಹ ತಮ್ಮ ವಾಹನ ಬಿಟ್ಟು ಜಿಲ್ಲಾಧಿಕಾರಿಗೆ ಸಾಥ್ ನೀಡಿದರು, ಅಜ್ಜರಕಾಡು ನ ವಸತಿಗೃಹದಲ್ಲಿರುವ ವಿವಿಧ ಅಧಿಕಾರಿಗಳು ಸಹ ತಮ್ಮ ಸರಕಾರಿ ವಾಹನ ಬಿಟ್ಟು ಸಾರ್ವಜನಿಕ ಸಮೂಹ ಸಾರಿಗೆ ಏರಿದರು, ವಸತಿಗೃಹದಲ್ಲಿರುವ ವಿವಿಧ ಇಲಾಖೆಯ ಸಿಬ್ಬಂದಿಗಳು ಸಹ ಇವರನ್ನು ಸೇರಿಕೊಂಡರು.

ಜಿಲ್ಲಾಧಿಕಾರಿ ನಿವಾಸದಿಂದ ಹೊರಟ ವಾಹನ, ಬನ್ನಂಜೆಯ ತಾಲೂಕು ಕಚೇರಿ ಮಾರ್ಗವಾಗಿ, ಸಿಟಿ ಬಸ್ ನಿಲ್ದಾಣ, ಎಂಜಿಎಂ ಕಾಲೇಜು ಮಾರ್ಗದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯಕ್ಕೆ ತೆರಳಲು ಕಾಯುತ್ತಿದ್ದ ವಿವಿಧ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಬೆಳಗ್ಗೆ 9.50 ಕ್ಕೆ ಸರಿಯಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿತು.

ವಾರದಲ್ಲಿ ಒಂದು ದಿನವಾದರೂ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಸಾರ್ವಜನಿಕ ಸಮೂಹ ಸಾರಿಗೆ ಬಳಸುವುದರ ಮೂಲಕ, ವಾತಾವರಣದಲ್ಲಿ ಇಂಗಾಲದ ಅಂಶ ಕಡಿಮೆ ಮಾಡುವುದರ ಜೊತೆಗೆ ವಾಯು ಮಾಲಿನ್ಯ ನಿಯಂತ್ರಣ ಸಹ ಸಾಧ್ಯವಾಗಲಿದೆ, ಜೊತೆಗೆ ಸಾರ್ವಜನಿಕ ಸಾರಿಗೆಗೂ ಸಹ ಉತ್ತೇಜನ ದೊರೆಯಲಿದೆ ಎಂಬ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರ ಈ ಚಿಂತನೆ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ, ಪ್ರತಿ ಗುರುವಾರ, ಈ ರೀತಿಯ ಸಾರ್ವಜನಿಕ ಸಮೂಹ ಸಾರಿಗೆ ಬಳಸಲು ನಿರ್ಧರಿಸಿದ್ದಾರೆ.

ಸಂಜೆ 5.30 ಕ್ಕೆ ಕಚೇರಿ ಸಮಯ ಮುಕ್ತಾಯದ ನಂತರವೂ ಸಹ ಸಾರ್ವಜನಿಕ ವಾಹನದಲ್ಲಿಯೇ ಜಿಲ್ಲಾಧಿಕಾರಿ ಮತ್ತು ಸಿಬ್ಬಂದಿಗಳು ತೆರಳಿದರು.

ವಾಹನದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ, ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿ ಹೆಚ್.ಆರ್. ಲಮಾಣಿ ಮತ್ತಿತರರು ಪ್ರಯಾಣಿಸಿದರು.

Comments are closed.