ಮಂಗಳೂರು : ರಾಜ್ಯಾದ್ಯಂತ ಬುಧವಾರ ಪ್ರಸಕ್ತ ಸಾಲಿನ (2019-20) ಶೈಕ್ಷಣಿಕ ವರ್ಷವು ಆರಂಭಗೊಂಡಿದ್ದು, ಕಳೆದ ಎರಡು ತಿಂಗಳಿಂದ ರಜೆಯ ಮಜಾ ಅನುಭವಿಸಿದ ವಿದ್ಯಾರ್ಥಿಗಳು ಮತ್ತೆ ಶಾಲೆಗಳತ್ತ ಪ್ರಯಾಣ ಬೆಳೆಸಿದ್ದಾರೆ.
ದ.ಕ.ಜಿಲ್ಲಾ ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಣ್ಣಗುಡ್ಡ ಹಾಗು ಗಾಂಧಿನಗರದಲ್ಲಿ ವಿದ್ಯಾರ್ಥಿಗಳನ್ನು ವಿಶಿಷ್ಠ ರೀತಿಯಲ್ಲಿ ಶಾಲೆಗೆ ಬರಮಾಡಿ ಕೊಳ್ಳಲಾಯಿತು. ಮಣ್ಣಗುಡ್ಡ ಶಾಲೆಯಲ್ಲಿ ನೂತನವಾಗಿ ಒಂದನೇ ತರಗತಿಗೆ ಸೇರಿದ ಮಕ್ಕಳಿಗೆ ಬಲೊನ್ ಕೊಟ್ಟು ಸ್ವಾಗತಿಸಿ ಶಾಲೆಯ ಹಿರಿಯ ವಿದ್ಯಾರ್ಥಿಗಳು ವಾದ್ಯಘೋಷದೊಂದಿಗೆ ಮೆರವಣಿಗೆಯನ್ನು ನಡೆಸಿದರು.
ತಳಿರು ತೋರಣ ಕಟ್ಟಿಕೊಂಡು ಹೊಸದಾಗಿ ನೋಂದಣಿ ಮಾಡಿಸಿಕೊಂಡು ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳನ್ನು ಸ್ವಾಗತಿಸಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು.
ಮಣ್ಣಗುಡ್ಡೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಒಂದನೇ ತರಗತಿಗೆ ಸೇರಿದ ಮಕ್ಕಳಿಗೆ ಬಲೂನ್ ಕೊಟ್ಟು ಸ್ವಾಗತಿಸಿದ ಶಾಲೆಯ ಹಿರಿಯ ವಿದ್ಯಾರ್ಥಿಗಳು ವಾದ್ಯಘೋಷದೊಂದಿಗೆ ಮೆರವಣಿಗೆಯನ್ನು ನಡೆಸಿದರು.
ಒಂದೂವರೆ ತಿಂಗಳ ಕಾಲ ಹೋಂವರ್ಕ್ ನ ಕಿರಿಕಿರಿ ಇಲ್ಲದೆ ಅಜ್ಜ, ಅಜ್ಜಿಯ ಮನೆ, ಪೋಷಕರೊಂದಿಗೆ ಪ್ರವಾಸ, ನೆಂಟರಮನೆ, ಹೊಲಗದ್ದೆ, ಕಾಡುಮೇಡು ಸುತ್ತಿ, ಊರಿನ ಕೆರೆಯಲ್ಲಿ ಈಜಾಡಿ ಮುಳುಗೆದ್ದು ರಜೆಯ ಮಜಾ ಅನುಭವಿಸಿದ ಒಂದರಿಂದ 10 ನೇ ತರಗತಿಯ ಮಕ್ಕಳು ಬುಧವಾರದಿಂದ ಮತ್ತೆ ಮರಳಿ ಶಾಲೆಗೆ ಆಗಮಿಸಿದ್ದಾರೆ.
ಜಿಲ್ಲೆಯಲ್ಲಿ ಹೆಚ್ಚಿರುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಕೆಲವು ಶಾಲೆಗಳ ಮುಖ್ಯಸ್ಥರು ನೀರಿನ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದು, ಅಂತಹ ಶಾಲೆಗಳಿಗೆ ಅಗತ್ಯಕ್ಕನುಸಾರವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ತಿಳಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸುಮಾರು ಶೇ. 10ರಿಂದ 20ರಷ್ಟು ಶಾಲೆಗಳಿಗೆ ನೀರಿನ ಸಮಸ್ಯೆ ಎದುರಾಗುವ ಬಗ್ಗೆ ಅಂದಾಜಿಸಲಾಗಿದೆ. ಕುಡಿಯುವ ನೀರಿಗೆ ಸಮಸ್ಯೆಯಾಗದಿದ್ದರೂ ಅಂಥಶಾಲೆಗಳಲ್ಲಿ ಅಕ್ಷರ ದಾಸೋಹಕ್ಕೆ ಸಮಸ್ಯೆಯಾಗಬಹುದು. ಈ ಶಾಲೆಗಳ ಬಗ್ಗೆ ನಿಗಾ ಇಡಲು ಮತ್ತು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಆಯಾ ವಲಯದ ಬಿಇಒಗಳಿಗೆ ಸೂಚಿಸಲಾಗಿದೆ.
ಅಧಿಕಾರಿಗಳು ಶಾಲಾ ಆರಂಭೋತ್ಸವ ದಿನ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ಮೂಲಸೌಕರ್ಯ, ಶಿಕ್ಷಕರು, ವಿದ್ಯಾರ್ಥಿಗಳ ಹಾಜರಾತಿ ಮೊದಲಾದವುಗಳ ಪರಿಶೀಲನೆ ನಡೆಸಲಿದ್ದಾರೆ. ಶಿಕ್ಷಣ ಇಲಾಖೆಯ ನಿರ್ದೇಶನದಂತೆ ದ.ಕ.ಜಿಲ್ಲೆಯ ಬಹುತೇಕ ಎಲ್ಲಾ ಶಾಲೆಗಳಲ್ಲಿ ಶಿಕ್ಷಕರು ಮತ್ತು ಎಸ್‌ಡಿಎಂಸಿ ಪದಾಧಿಕಾರಿಗಳು, ಸದಸ್ಯರು ಸಭೆ ಸೇರಿ ಸಿದ್ಧತೆ ಕುರಿತು ಚರ್ಚೆ ನಡೆಸಿದ್ದಾರೆ.