ಕರಾವಳಿ

ತನ್ನ ಎಂಟು ತಿಂಗಳ ಹೆಣ್ಣು ಮಗುವನ್ನು ಕೊಂದು ನದಿಗೆ ಎಸೆದ ಪಾಪಿ ತಂದೆ – ಕಾರಣವೇನು ಗೊತ್ತೆ?

Pinterest LinkedIn Tumblr

ಮಂಗಳೂರು : ಬೋಳಾರದ ಮನೆಯೊಂದರಿಂದ ನಾಪತ್ತೆಯಾಗಿದ್ದ ಎಂಟು ತಿಂಗಳ ಹೆಣ್ಣು ಮಗುವಿನ ಶವ ಬೋಳಾರ ಫೆರಿ ಪಾರ್ಕ್‌ ಬಳಿ ನೇತ್ರಾವತಿ ನದಿ ನೀರಿನಲ್ಲಿ ಪತ್ತೆಯಾಗಿದ್ದು, ಮಗುವನ್ನು ತಂದೆಯೇ ಕೊಲೆ ಮಾಡಿರುವ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.

ದಿನಾಂಕ:27-05-2019 ರಂದು ಮಂಗಳೂರು ನಗರದ ಬೋಳಾರ “MFAR” ಕ್ಯಾಂಪ್‌ ಲೇಬರ್‌ ಕಾಲೋನಿಯಲ್ಲಿ ತಾತ್ಕಾಲಿಕ ಶೆಡ್‌ ನಲ್ಲಿ ವಾಸ್ತವ್ಯವಾಗಿದ್ದ ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲೂಕಿನ ಜೂಲಕುಂಟಿ ನಿವಾಸಿಗಳಾದ ಲಕ್ಷ್ಮಣ ತೆಮ್ಮಿನಾಳ ಹಾಗೂ ಶ್ರೀಮತಿ ರೂಪಾ ತೆಮ್ಮಿನಾಳ ರವರ ಎಂಟು ತಿಂಗಳ ಹೆಣ್ಣು ಮಗು ಮೌನಶ್ರೀ @ ಮೋನಶ್ರೀಯ ಮೃತ ದೇಹವು ಮಂಗಳೂರು ಬೋಳಾರ ಫೆರಿ ಪಾರ್ಕ್‌ ಬಳಿ ನೇತ್ರಾವತಿ ನದಿ ನೀರಿನಲ್ಲಿ ಪತ್ತೆಯಾಗಿರುವ ಬಗ್ಗೆ ಮಂಗಳೂರು ಪಾಂಡೇಶ್ವರ ಠಾಣೆಯಲ್ಲಿ ಕೊಲೆ ಕೇಸು ದಾಖಲಾಗಿತ್ತು.

ಮಂಗಳೂರು ಪಾಂಡೇಶ್ವರ ಠಾಣೆಯ ಪೊಲೀಸ್ ನಿರೀಕ್ಷಕರು ಕೊಲೆಯಾದ ಮಗುವಿನ ತಂದೆ ಲಕ್ಷ್ಮಣ ತೆಮ್ಮಿನಾಳ ರವರನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿದಲ್ಲಿ ಈ ಕೊಲೆ ಕೃತ್ಯವನ್ನು ನಡೆಸಿದ ಬಗ್ಗೆ ಒಪ್ಪಿಕೊಂಡಿದ್ದು ದಿನಾಂಕ:29-05-2019 ರಂದು ಮದ್ಯಾಹ್ನ 12-00 ಗಂಟೆಗೆ ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿಗೆ ಎರಡೂ ಮಂದಿಯೂ ಹೆಣ್ಣು ಮಕ್ಕಳಾಗಿದ್ದು, ಇದರಿಂದ ಈ ಹೆಣ್ಣು ಮಗುವಿನ ಬಗ್ಗೆ ತಾತ್ಸಾರ ಹೊಂದಿ, ದಿನಾಂಕ:27-05-2019 ರಂದು ಮಗುವನ್ನು ಕೊಲೆ ಮಾಡುವ ಉದ್ದೇಶದಿಂದ ಒತ್ತಾಯಪೂರ್ವಕವಾಗಿ ಹೆಂಡತಿ ರೂಪಾ ತೆಮ್ಮಿನಾಳ ರನ್ನು ಕೆಲಸಕ್ಕೆ ಕಳುಹಿಸಿಕೊಟ್ಟಿದ್ದು, ಆ ಬಳಿಕ ಮಗುವಿನ ಉಸಿರುಗಟ್ಟಿಸಿ ಕೊಲೆ ನಡೆಸಿ ನೇತ್ರಾವತಿ ನದಿ ನೀರಿಗೆ ಎಸೆದಿರುವುದಾಗಿ ವಿಚಾರಣೆ ಸಂದರ್ಭ ಆರೋಪಿ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಆಯುಕ್ತರಾದ ಸಂದೀಪ್‌ ಪಾಟೀಲ್‌ ಐಪಿಎಸ್, ಉಪ ಪೊಲೀಸ್ ಆಯುಕ್ತರು (ಕಾ&ಸು) ರವರಾದ ಹನುಮಂತರಾಯ ಐ.ಪಿ.ಎಸ್ , ಮಾನ್ಯ ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ರವರಾದ ಲಕ್ಷ್ಮಿ ಗಣೇಶ್‌, ಕೆ.ಎಸ್‌.ಪಿ.ಎಸ್‌, ಮಂಗಳೂರು ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಸುಧೀರ್‌ ಹೆಗ್ಡೆ ಇವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಎನ್‌ ಕುಮಾರ್‌ ಆರಾಧ್ಯ ರವರು ಆರೋಪಿಯನ್ನು ಬಂಧಿಸಿರುತ್ತಾರೆ. ಆರೋಪಿ ಪತ್ತೆಗೆ ಮಂಗಳೂರು ದಕ್ಷಿಣ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ರಾಜೇಂದ್ರ ಬಿ, ಎಲ್‌ ಮಂಜುಳಾ ಹಾಗೂ ದಕ್ಷಿಣ ಠಾಣೆಯ ಸಿಬ್ಬಂಧಿಗಳು ಸಹಕರಿಸಿರುತ್ತಾರೆ.

Comments are closed.