ಕರಾವಳಿ

ನಳಿನ್ ಕುಮಾರ್ ಕಟೀಲ್‌‌ ಹ್ಯಾಟ್ರಿಕ್‌ ಜಯಭೇರಿ : ಈ ಬಾರಿ ಗೆಲುವಿನ ಅಂತರವೆಷ್ಟು ಗೊತ್ತೆ?

Pinterest LinkedIn Tumblr

ಮಂಗಳೂರು, ಮೇ.23: ದಕ್ಷಿಣ ಕನ್ನಡದಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲ್ ಅವರು ಈ ಬಾರಿ  2,73,367 ದಾಖಲೆ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಮಾತ್ರವಲ್ಲದೇ ಮೂರನೇ ಭಾರಿಗೆ ಸಂಸದರಾಗಿ ಅಯ್ಕೆಯಾಗುವ ಮೂಲಕ ನಳಿನ್ ಕುಮಾರ್ ಕಟೀಲ್ ಅವರು ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ.

ತಮ್ಮ ಪ್ರತಿಸ್ಫರ್ಧಿ ಕಾಂಗ್ರೆಸ್‌ -ಜೆಡಿಎಸ್‌ನ ಮೈತ್ರಿ ಅಭ್ಯರ್ಥಿ ಮಿಥುನ್ ರೈಯವರು ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲುವ ಮೂಲಕ ಮಿಥುನ್ ರೈ ಅವರಿಗೆ ಮುಖಭಂಗವಾಗಿದೆ.

ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಮೂರನೇ ಬಾರಿಗೆ ಅತ್ಯಧಿಕ ಮತಗಳಿಂದ ಚುನಾಯಿತರಾಗುವ ಮೂಲಕ ಪ್ರತಿಷ್ಠಿತ ಕರಾವಳಿ ಕ್ಷೇತ್ರದಿಂದ ಬಿಜೆಪಿ ನಿರಂತರ ಎಂಟನೇ ಬಾರಿಗೆ ಗೆಲುವು ಸಾಧಿಸಿ ತನ್ನ ಪ್ರಾಬಲ್ಯ ಮುಂದುವರಿಸಿದ್ದಾರೆ. ನಳಿನ್‌ ಕುಮಾರ್ ಕಟೀಲ್ ಅವರು ಈ ಬಾರಿ ಕೂಡ ಗೆಲ್ಲುವ ಮೂಲಕ ಹ್ಯಾಟ್ರಿಕ್‌ ಸಾಧನೆ ಮಾಡಿ ಇತಿಹಾಸ ಬರೆದಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ 7,72,754, ಕಾಂಗ್ರೆಸ್‌ ಅಭ್ಯರ್ಥಿಮಿಥುನ್ ರೈ 4,99,387 ಮತಗಳನ್ನು ಪಡೆದುಕೊಂಡಿದ್ದಾರೆ. ಎಸ್‌ಡಿಪಿಐಯ ಅಭ್ಯರ್ಥಿ ಮೊಹಮ್ಮದ್ ಇಲಿಯಾಸ್ ಅವರು 46834 ಮತಗಳನ್ನು ಪಡೆದುಕೊಂಡಿದ್ದಾರೆ.

ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ 4,99,030 ಮತಗಳನ್ನು ಪಡೆದಿದ್ದರೆ, ನಳಿನ್ 6,42,739 ಮತಗಳನ್ನು ಪಡೆದು, 1,43,709 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಈ ಬಾರಿ ಕಾಂಗ್ರೆಸ್ ಯುವ ನಾಯಕನಿಗೆ ಅವಕಾಶ ನೀಡಿದರು ಮತದಾರರ ಮನ ಸೆಳೆಯುವಲ್ಲಿ ಸೋತಿದ್ದಾರೆ. ನಳಿನ್ ಕುಮಾರ್ ಕಟೀಲ್ 7,72,754, ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ 4,99,387 ಮತ ಪಡೆದಿದ್ದಾರೆ. ನಳಿನ್ ಕುಮಾರ್ ಕಟೀಲ್ ಅವರು 2,73,367 ದಾಖಲೆ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

35 ದಿನಗಳ ಕಾತರಕ್ಕೆ ತೆರೆ : ಮೂರನೇ ಭಾರಿ ಸಂಸದರಾಗಿ ನಳಿನ್ ಕುಮಾರ್  ಕಟೀಲ್ ಅಯ್ಕೆ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಸಂಸದರು ಯಾರಾಗಬೇಕು ಎಂಬುದಕ್ಕೆ ಮತದಾರರು ನೀಡಿರುವ ತೀರ್ಪು ಗುರುವಾರ ಪ್ರಕಟಗೊಂಡಿದ್ದು, 35 ದಿನಗಳಿಂದ ಎದುರಾಗಿದ್ದ ರಾಜಕೀಯ ಲೆಕ್ಕಾಚಾರಗಳಿಗೆ ಸ್ಪಷ್ಟ ಉತ್ತರ ದೊರಕಿದೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಮೂರನೇ ಬಾರಿಗೆ ಅತ್ಯಧಿಕ ಮತಗಳಿಂದ  ಗೆಲುವು ಸಾಧಿಸಿದ್ದಾರೆ.

ಕ್ಷೇತ್ರದಲ್ಲಿ ಈ ಬಾರಿ ಒಟ್ಟು 13 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಎ.18ರಂದು ಮತದಾನ ನಡೆದಿತ್ತು. ಕ್ಷೇತ್ರದಲ್ಲಿ 13,43,378 ಮಂದಿ ಮತ ಚಲಾಯಿಸಿ ಶೇ.79.90ರಷ್ಟು ಮತದಾನ ದಾಖಲಾಗಿತ್ತು. ಕಳೆದ ಲೋಕಸಭೆ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲೇ ಮೊದಲು ಫಲಿತಾಂಶ ಹೊರಬಿದ್ದ ಕ್ಷೇತ್ರ ದಕ್ಷಿಣ ಕನ್ನಡವಾಗಿತ್ತು.

ಸುರತ್ಕಲ್ ಎನ್‌ಐಟಿಕೆಯ ಎಣಿಕೆ ಕೇಂದ್ರದಲ್ಲಿ ಮತ ಎಣಿಕೆಗೆ ಸರ್ವ ಸಿದ್ಧತೆಯನ್ನು ಜಿಲ್ಲಾಡಳಿತ ಮಾಡಿತ್ತು. 15ರಿಂದ 18 ಸುತ್ತುಗಳಲ್ಲಿ ಮತ ಎಣಿಕೆ ನಡೆಯಿತು. ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಮತಎಣಿಕೆಗೆ ತಲಾ 14 ಟೇಬಲ್ಗಳಂತೆ ಒಟ್ಟು 112 ಟೇಬಲ್ಗಳನ್ನು ಅಳವಡಿಸಲಾಗಿತ್ತು. ಮತ ಎಣಿಕೆ ಉಸ್ತುವಾರಿಗಳು, ಎಣಿಕೆ ಸಹಾಯಕರು, ಮೈಕ್ರೊ ವೀಕ್ಷಕರು ಸೇರಿದಂತೆ 560 ಸಿಬಂದಿಯಿದ್ದರು.

ಮತ ಎಣಿಕೆ ಕೇಂದ್ರ ಪ್ರವೇಶಕ್ಕೆ ಮೂರು ಹಂತಗಳ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಮತ ಎಣಿಕೆ ಕೇಂದ್ರಕ್ಕೆ ಗರಿಷ್ಠ ಭದ್ರತೆ ನೀಡಲು ಹೆದ್ದಾರಿ ಸಂಚಾರದಲ್ಲಿ ಆಮೂಲಾಗ್ರ ಬದಲಾವಣೆ ಮಾಡಲಾಗಿತ್ತು.

ಮತ ಎಣಿಕೆ ಸಂದರ್ಭ ಯಾವೂದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಸಿಎಪಿಎಫ್ ತುಕಡಿ ಸೇರಿ 5 ಕೆಎಸ್ ಆರ್ ಪಿ ತುಕಡಿ, 12 ಸಿಎಆರ್ ತುಕಡಿ, ಇಬ್ಬರು ಡಿಸಿಪಿ, 6 ಮಂದಿ ಎಸಿಪಿ, 17 ಮಂದಿ ಪಿಐ, 48 ಮಂದಿ ಪಿಎಸ್ಐ, 66 ಮಂದಿ ಎಎಸ್ಐ, 112 ಮಂದಿ ಹೆಚ್ಸಿ, 224 ಮಂದಿ ಪೇದೆಗಳನ್ನು ನಿಯೋಜನೆ ಮಾಡಲಾಗಿತ್ತು.

Comments are closed.