ಕುಂದಾಪುರ: ಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿ66ರಲ್ಲಿ ಶುಕ್ರವಾರ ಬಂಡೆಕಲ್ಲು ಸಾಗಾಟ ಮಾಡುತ್ತಿರುವಾಗ ಕಲ್ಲುಬಂಡೆ ರಸ್ತೆ ಮಧ್ಯೆ ಬಿದ್ದ ಪರಿಣಾಮ ಟ್ರಾಫಿಕ್ ಜಾಮ್ ಆಗುವ, ಜೊತೆ ಭಾರೀ ಅನಾಹುತ ತಪ್ಪಿದೆ. ಮರವಂತೆ ಕಡಲ್ಕೊರೆತ ತಡೆಗಾಗಿ ಬಂಡೆಕಲ್ಲು ಹಾಸುವ ಕಾಮಗಾರಿ ನಡೆಯುತ್ತಿದ್ದು ಕಡಲತೀರಕ್ಕೆ ಬಂಡೆಕಲ್ಲು ಸಾಗಾಟ ಮಾಡುವ ವೇಳೆಯಲ್ಲಿ ಈ ಘಟನೆ ನಡೆದಿದೆ.
ದೊಡ್ಡ ಟಿಪ್ಪರ್ ವಾಹನಗಳಲ್ಲಿ ಬಂಡೆಕಲ್ಲು ಸಾಗಿಸುತ್ತಿದ್ದು, ಟಿಪ್ಪರ್ ಹಿಂಬದಿಯ ಲಾಕ್ ತುಂಡಾಗಿದ್ದರಿಂದ ತಾತ್ಕಾಲಿಕವಾಗಿ ಹಗ್ಗ ಕಟ್ಟಿ ಸಾಗಾಟ ಮಾಡಲಾಗುತ್ತಿತ್ತು. ಟಿಪ್ಪರ್ ಒಳಗಡೆ ಬಂಡೆಕಲ್ಲು ರಾಶಿ ಹಾಕಿದ್ದರಿಂದ ಒತ್ತಡಕ್ಕೆ ಹಗ್ಗ ತುಂಡಾಗಿ ಬಂಡೆಕಲ್ಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿತ್ತು. ಟಿಪ್ಪರ್ ಹಿಂಬದಿ ಸ್ವಿಫ್ಟ್ ಕಾರು ಬರುತ್ತಿದ್ದು, ಚಾಲಕ ಸಮಯಪ್ರಜ್ಞೆಯಿಂದಾಗಿ ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಕುಟುಂಬ ನಿಟ್ಟುಸಿರು ಬಿಟ್ಟಿದೆ. ಸ್ವಿಫ್ಟ್ ಕಾರಿನ ಹಿಂಭಾಗ ಬರುತ್ತಿದ್ದ ಇಂಡಿಕೋ ಕಾರಿನ ಎಡಬದಿಗೆ ಬಂಡೆಕಲ್ಲು ಬಡಿದಿದ್ದರಿಂದ ಕಾರು ಅಲ್ಪಸ್ವಲ್ಪ ಜಖಂಗೊಂಡಿದೆ.
ಬಂಡೆಕಲ್ಲು ರಾಷ್ಟ್ರೀಯ ಹೆದ್ದಾರಿ ಮೇಲೆ ಬಿದ್ದ ಪರಿಣಾಮ ಕೆಲಹೊತ್ತು ಸಂಚಾರಕ್ಕೆ ತೊಡಕುಂಟಾಗಿತ್ತು. ಹೆದ್ದಾರಿಯಲ್ಲಿ ವಾಹನಗಳ ಓಡಾಟವೂ ಜಾಸ್ತಿಯಾಗಿದ್ದು, ಸ್ಥಳೀಯ ಯುವಕರು, ರಿಕ್ಷಾ ಚಾಲಕರು ಕುಂದಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಿಮಿಸುವ ತನಕವೂ ವಾಹಗಳ ಸುಗಮ ಸಂಚಾರಕ್ಕೆ ಶ್ರಮಿಸಿದರು. ಬಳಿಕ ಸ್ಥಳಕ್ಕಾಗಮಿಸಿದ ಕುಂದಾಪುರ ಪೊಲೀಸರು ಹಾಗೂ ಟ್ರಾಫಿಕ್ ಠಾಣೆಯ ಸಿಬ್ಬಂದಿಗಳು ಸಾರ್ವಜನಿಕರ ಸಹಕಾರದಿಂದ ಬಂಡೆಕಲ್ಲು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟಿದ್ದು, ಟಿಪ್ಪರ್ ಠಾಣೆಗೆ ಕೊಂಡೊಯ್ದಿದ್ದಾರೆ.
ಸಾರ್ವಜನಿಕರ ಆಕ್ರೋಶ:
ನಿಯಮಬಾಹಿರ ಬೃಹತ್ ಗಾತ್ರದ ಬಂಡೆಕಲ್ಲು ಸಾಗಿಸುವ ಟಿಪ್ಪರ್ ಪರಿಶೀಲನೆ ನಡೆಸಬೇಕು. ದುರಂತ ಸಂಭವಿಸಿದ ಬಳಿಕ ಎಚ್ಚೆತ್ತುಕೊಳ್ಳುವುದಲ್ಲ. ಮೊದಲೇ ಈ ಬಗ್ಗೆ ಕ್ರಮಕೈಗೊಳ್ಳಬೇಕು. ಮುಂದೆ ಅನಾಹುತಗಳು ಸಂಭವಿಸಿದರೆ ಯಾರು ಹೊಣೆ ಎಂದು ನೆರೆದ ಸಾರ್ವಜನಿಕರು ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆಯಲ್ಲಿ ಪೊಲೀಸರಿಗೂ ಹಾಗೂ ಸಾರ್ವಜನಿಕರ ಮಧ್ಯೆ ವಾಗ್ವಾದ ಉಂಟಾಯಿತು.
Comments are closed.