ಕರಾವಳಿ

ಮತ ಎಣಿಕೆ ಸಮಯದಲ್ಲಿ ಗೊಂದಲ ಬೇಡ- ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ

Pinterest LinkedIn Tumblr

ಉಡುಪಿ: ಮೇ 23 ರಂದು ಉಡುಪಿಯ ಸೈಂಟ್ ಸಿಸಿಲಿ ಶಾಲೆಯಲ್ಲಿ ನಡೆಯುವ, ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು, ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ಒತ್ತಡ ಅಥವಾ ಗೊಂದಲಕ್ಕೆ ಒಳಗಾಗದಂತೆ, ಚುನಾವಣಾ ಆಯೋಗ ಸೂಚಿಸಿರುವ ಮಾರ್ಗಸೂಚಿಯನ್ವಯ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಅವರು ಶುಕ್ರವಾರ, ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಮತ ಎಣಿಕೆ ಕಾರ್ಯ ನಿಯೋಜನೆಗೊಂಡಿರುವ ಸಿಬ್ಬಂದಿಗಳಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿಗಳು, ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯ ನಿರ್ವಹಿಸಬೇಕು, ಮತ ಎಣಿಕೆಯ ಯಾವುದೇ ಹಂತದಲ್ಲೂ ತಪ್ಪುಗಳಾಗದಂತೆ ಎಚ್ಚರವಹಿಸಬೇಕು, ಮತ ಎಣಿಕೆ ಕೊಠಡಿಯಲ್ಲಿ ಮತದಾನದ ಗೋಪ್ಯತೆ ಕಾಪಾಡಬೇಕು, ಯಾವುದೇ ಕಾರಣಕ್ಕೂ ಮತ ಎಣಿಕೆಯ ವಿವರಗಳನ್ನು ತಮ್ಮ ಮೇಲಿನ ಅಧಿಕಾರಿಗಳಿಗೆ ಹೊರತುಪಡಿಸಿ ಬೇರೆಯವರಿಗೆ ನೀಡಬಾರದು, ಮತ ಎಣಿಕೆ ಕೊಠಡಿಯಲ್ಲಿ ಅನಗತ್ಯವಾಗಿ ಓಡಾಡದೇ ತಮಗೆ ನಿಯೋಜಿಸಿರುವ ಕೊಠಡಿಯಲ್ಲಿಯೇ ಸಂಪೂರ್ಣ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಇರುವಂತೆ ತಿಳಿಸಿದ ಜಿಲ್ಲಾಧಿಕಾರಿ, ಮತ ಎಣಿಕೆ ಕೇಂದ್ರದಲ್ಲಿ ಸಿಬ್ಬಂದಿಗಳಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದ್ದು, ಮೊಬೈಲ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ನಿಷೇಧ ಉಲ್ಲಂಘಿಸಿ ಮೊಬೈಲ್ ಬಳಸುವ ಸಿಬ್ಬಂದಿಗಳನ್ನು ಸೇವೆಯಿಂದ ವಜಾ ಮಾಡಬಹುದಾಗಿದೆ ಎಂದು ಹೇಳಿದರು.

ಮತ ಎಣಿಕೆ ಸಿಬ್ಬಂದಿಗೆ ಪ್ರತಿ ವಿಧಾನಸಭಾ ಕ್ಷೇತ್ರವಾರು ಪ್ರತ್ಯೇಕ ಬಣ್ಣದ ಗುರುತಿನ ಚೀಟಿ ವಿತರಿಸಲಾಗುತ್ತಿದ್ದು, ಮತ ಎಣಿಕೆ ದಿನ ಬೆಳಗ್ಗೆ 6 ಗಂಟೆ ಒಳಗೆ ಕೇಂದ್ರದಲ್ಲಿ ಹಾಜರಿದ್ದು, ತಮಗೆ ನಿಗಧಿಪಡಿಸಿದ ಕೊಠಡಿಗೆ ತೆರಳುವಂತೆ ತಿಳಿಸಿದ ಜಿಲ್ಲಾಧಿಕಾರಿ, ಅಂಚೆಮತ ಪತ್ರಗಳ ಎಣಿಕೆ ನಂತರ ಇವಿಎಂ ಮತ ಎಣಿಕೆ ಪ್ರಾರಂಭವಾಗಲಿದೆ, ಅಂಚೆ ಮತ ಪತ್ರ ಎಣಿಕೆ ಸಿಬ್ಬಂದಿ ಅತ್ಯಂತ ಎಚ್ಚರಿಕೆಯಿಂದ ಎಣಿಕೆ ಮಾಡುವಂತೆ ಮತ್ತು ಒಟ್ಟು 16 ರಿಂದ 19 ಸುತ್ತಿನವರೆಗೆ ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದರು.

ಎವಿಎಂ ಮತ ಎಣಿಕೆ ನಂತರ ಪ್ರತಿ ವಿಧಾನಸಭಾವಾರು ಲಾಟರಿ ಮೂಲಕ ಆಯ್ಕೆ ಮಾಡುವ 5 ಮತಗಟ್ಟೆಗಳ ವಿವಿ ಪ್ಯಾಟ್ ಸ್ಲಿಪ್ಗಳ ಎಣಿಕೆ ಕಾರ್ಯ ನಡೆಯಲಿದ್ದು, ಒಂದು ವಿವಿ ಪ್ಯಾಟ್ನಲ್ಲಿನ ಸ್ಲಿಪ್ಗಳ ಎಣಿಕೆಗೆ 1 ಗಂಟೆ ತಗುಲಲಿದೆ ಎಂದು ಹೇಳಿದರು.

ಉಡುಪಿ – ಚಿಕ್ಕಮಗಳೂರು ಲೋಕಸಭಾ ವ್ಯಾಪ್ತಿಯ, ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ 222 ಮತಗಟ್ಟೆಗಳಿದ್ದು 16 ಸುತ್ತಿನ ಮತ ಎಣಿಕೆ, ಉಡುಪಿಯ 226 ಮತಗಟ್ಟೆಗಳಲ್ಲಿ 17 ಸುತ್ತಿನ ಮತ ಎಣಿಕೆ, ಕಾಪು 208 ಮತಗಟ್ಟೆಗಳಲ್ಲಿ 15 ಸುತ್ತಿನ ಮತ ಎಣಿಕೆ, ಕಾರ್ಕಳದ 209 ಮತಗಟ್ಟೆಗಳಲ್ಲಿ 15 ಸುತ್ತಿನ ಮತ ಎಣಿಕೆ, ಶೃಂಗೇರಿಯ 256 ಮತಗಟ್ಟೆಗಳಲ್ಲಿ 19 ಸುತ್ತಿನ ಮತ ಎಣಿಕೆ, ಮೂಡಿಗೆರೆಯ 231 ಮತಗಟ್ಟೆಗಳಲ್ಲಿ 17 ಸುತ್ತಿನ ಮತ ಎಣಿಕೆ, ಚಿಕ್ಕಮಗಳೂರಿನ 257 ಮತಗಟ್ಟೆಗಳಲ್ಲಿ 19 ಸುತ್ತಿನ ಮತ ಎಣಿಕೆ, ತರೀಕೆರೆಯ 228 ಮತಗಟ್ಟೆಗಳಲ್ಲಿ 17 ಸುತ್ತಿನ ಮತ ಎಣಿಕೆ ನಡೆಯಲಿದೆ ಹಾಗೂ ಪ್ರತಿ ವಿಧಾನಸಭಾವಾರು ಪ್ರತ್ಯೇಕವಾಗಿ ವಿವಿ ಪ್ಯಾಟ್ ಸ್ಲಿಪ್ಗಳ ಎಣಿಕೆ ನಡೆಯಲಿದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಹಾಗೂ ಜಿಲ್ಲೆಯ ಎಲ್ಲಾ ಸಹಾಯಕ ಚುನಾವಣಾಧಿಕಾರಿಗಳು ಮತ್ತು ತಹಸೀಲ್ದಾರ್ಗಳು ತರಬೇತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಮಾಸ್ಟರ್ ಟ್ರೈನರ್ ಅಶೋಕ್ ಕಾಮತ್, ಮತ ಎಣಿಕೆ ಪ್ರಕ್ರಿಯೆ ಮತ್ತು ಅನುಸರಿಸಬೇಕಾದ ಕ್ರಮಗಳ ಕುರಿತು ಸಿಬ್ಬಂದಿಗಳಿಗೆ ತರಬೇತಿ ನೀಡಿದರು.

Comments are closed.