ಕರಾವಳಿ

ಮಂಗಳೂರು ಶ್ರೀ ವೆಂಕಟರಮಣ ಸೇವಸ್ಥಾನ : ಕಾಶೀ ಮಠಾಧೀಶರಿಂದ ಸ್ವರ್ಣ ಗರುಡ ಸಮರ್ಪಣೆ

Pinterest LinkedIn Tumblr

ಮಂಗಳೂರು : ಶ್ರೀ ವೆಂಕಟರಮಣ ದೇವಳದ ಪ್ರಧಾನ ಆರಾಧ್ಯ ದೇವರಾದ ಶ್ರೀ ವೀರ ವೆಂಕಟೇಶ್ ದೇವರ ಉತ್ಸವಾದಿ ಕಾರ್ಯಕ್ರಮ ಗಳಿಗಾಗಿ ನೂತನವಾಗಿ ಶ್ರೀ ದೇವರಿಗೆ ಸ್ವರ್ಣ ಗರುಡ ವಾಹನ ನಿರ್ಮಿಸಲಾಗಿದ್ದು ಇದರ ಸಮರ್ಪಣಾ ಕಾರ್ಯಕ್ರಮವು ಶ್ರೀ ವ್ಯಾಸ ಜಯಂತಿಯಂದು ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ನೆರವೇರಿತು .

ಶ್ರೀ ಸಂಸ್ಥಾನ ಕಾಶೀಮಠಾಧೀಶ ಶ್ರೀಮತ್ ವಿಭುದೇಂದ್ರ ತೀರ್ಥರ ವರದ ಹಸ್ತಗಳಿಂದ ಮೂಲ ಪ್ರತಿಷ್ಠಾಪನೆಗೊಂಡ ಮಂಗಳೂರು ಗೌಡಸಾರಸ್ವತ ಸಮಾಜ ಬಾಂಧವರ ಆರಾದ್ಯ ಮೂರ್ತಿ ಶ್ರೀ ವೀರ ವೆಂಕಟೇಶ ದೇವರ ಪುನಃ ಪ್ರತಿಷ್ಠಾ ಕಾರ್ಯವು ಪರಮ ಗುರು ಗಳಾದ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಹಾಗೂ ಪಟ್ಟ ಶಿಷ್ಯ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ನಡೆದಿರುವುದು ಸ್ವರ್ಣಾಕ್ಷರದ ಇತಿಹಾಸಕ್ಕೆ ಸಾಕ್ಷಿಯಾಗಿದೆ.

ಈ ಸಂದರ್ಭದಲ್ಲಿ ಜಿ ಯಸ್ ಬಿ ಸಮಾಜದ ಮಂಗಳೂರು ವೆಂಕಟರಮಣ ದೇವಾಲಯದ ಪೂಜಿತ ಶ್ರೀ ವೀರ ವೆಂಕಟೇಶ ದೇವರಿಗೆ “ಸ್ವರ್ಣ ಗರುಡ ವಾಹನ” ಸಮರ್ಪಣೆ ನಡೆಯಬೇಕು ಎಂಬ ದೊಡ್ಡ ಹಂಬಲವಿಟ್ಟು ಕೊಂಡು ಶ್ರೀಸಂಸ್ಥಾನ ಕಾಶೀಮಠಾಧೀಶ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರು ತಮ್ಮ ಅಮೃತ ಹಸ್ತದಿಂದ ಮೂಲ ಕಾಣಿಕೆಯನ್ನು ನೀಡಿ ಅದಕ್ಕೆ ಚಾಲನೆ ನೀಡಿ ಹರಸಿದರು. ನಂತರ ದೇವಾಲಯದ ಬ್ರಹ್ಮರಥೋತ್ಸವದ ಸಂದರ್ಭದಲ್ಲಿ ಸಮಾಜ ಬಾಂಧವರು ಅದಕ್ಕೆ ಪೂರಕವಾಗಿ ಸ್ವರ್ಣ ವರಹಗಳನ್ನು ಸಮರ್ಪಿಸಿದರು.

ಜಿ ಯಸ್ ಬಿ ಸಮಾಜದ ವೆಂಕಟರಮಣ ದೇವಸ್ಥಾನಗಳಲ್ಲಿ ಶೋಭಾ ಯಮಾನವಾದ ಹಾಗೂ ಅತೀ ಅವಶ್ಯವಾದ ಸ್ವರ್ಣ ಗರುಡ ವಾಹನದ ಸಮರ್ಪಣೆ ಕಾಶೀಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥರ ಮಾರ್ಗದರ್ಶನ ಹಾಗೂ ದಿವ್ಯ ಉಪಸ್ಥಿತಿಯಲ್ಲಿ ದಿನಾಂಕ 16-05-2019 ರ ಶ್ರೀ ವೇದವ್ಯಾಸ ಜಯಂತಿ ಗಂಟೆ 10.47ರ ಸುಮುಹೂರ್ತದಲ್ಲಿ ಸ್ವರ್ಣಗರುಡ ವಾಹನದ ಸಮರ್ಪಣೆಗೊಂಡು ,ನಂತರ ಸ್ವರ್ಣಗರುಡ ವಾಹನ ಉತ್ಸವ, ಸಮರಾಧನೆ, ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ ಸ್ವಾಮೀಜಿಯವರಿಂದ ಆಶೀರ್ವಚನ ರಾತ್ರಿ ಸ್ವರ್ಣ ಗರುಡೊತ್ಸವ, ಪಲ್ಲಕಿ ಉತ್ಸವ ನಡೆಯಿತು.

ಈ ಸಂದರ್ಭದಲ್ಲಿ ದೇವಳದ ಮೊಕ್ತೇಸರ ಸಿ . ಎಲ್ . ಶೆಣೈ , ಕೆ . ಪಿ . ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ , ವೇದ ಮೂರ್ತಿ ಪಂಡಿತ್ ನರಸಿಂಹ ಆಚಾರ್ಯ , ವೇದಮೂರ್ತಿ ಚಂದ್ರಕಾಂತ್ ಭಟ್ , ವೇದಮೂರ್ತಿ ಹರೀಶ್ ಭಟ್ , ಜಿಲ್ಲೆಯ ವಿವಿಧ ದೇವಳಗಳ ಮೊಕ್ತೇಸರರು ಹಾಗೂ ಸಾವಿರಾರು ಭಜಕರು ಉಪಸ್ಥಿತರಿದ್ದರು .

ಚಿತ್ರಗಳು : ಮಂಜು ನೀರೇಶ್ವಾಲ್ಯ

Comments are closed.