ಕರಾವಳಿ

ಬಳ್ಳಾಲ್‌ಬಾಗ್ ಶರತ್ ಕೊಲೆ ಪ್ರಕರಣ :  ಓರ್ವ ಆರೋಪಿ ಪೊಲೀಸ್ ವಶ

Pinterest LinkedIn Tumblr

ಮಂಗಳೂರು, ಮೇ 13: ನಗರದ ಸ್ಟೇಟ್ ಬ್ಯಾಂಕ್ ಬಳಿಯ ಪಾರ್ಕ್ ನಲ್ಲಿ ಮೇ 8ರಂದು ಮುಂಜಾನೆ ಅಪರಿಚಿತ ವ್ಯಕ್ತಿಯ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಪಾಂಡೇಶ್ವರ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಮೇ 8ರಂದು ಮುಂಜಾನೆ ಸ್ಟೇಟ್‌ಬ್ಯಾಂಕ್ ಬಳಿಯ ಪಾರ್ಕ್‌ವೊಂದರಲ್ಲಿ ಕಲ್ಲಿನಿಂದ ಜಜ್ಜಿ ಕೊಲೆಗೈದ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿತ್ತು. ತಲೆ ಹಾಗೂ ಮುಖಕ್ಕೆ ಕಲ್ಲು ಹಾಗೂ ಹಂಚಿನಿಂದ ಹೊಡೆದು ಕೊಲೆ ಮಾಡಿರುವ ಆರೋಪಿಗಳು ಬಳಿಕ ಮೃತದೇಹದ ಮೇಲೆ ಸಿಮೆಂಟ್ ಚಪ್ಪಡಿಯನ್ನು ಇರಿಸಿದ್ದು ಈ ಸಂದರ್ಭ ಮೃತನ ಗುರುತು ಪತ್ತೆಯಾಗಿರಲಿಲ್ಲ.

ಬಳಿಕ ಮೃತ ವ್ಯಕ್ತಿಯನ್ನು ನಗರದ ಬಳ್ಳಾಲ್‌ಬಾಗ್ ಸಮೀಪದ ವಿವೇಕನಗರ ನಿವಾಸಿ ಶರತ್ (30) ಎಂದು ಗುರುತಿಸಲಾಗಿತ್ತು. ಇದೀಗ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಬಂದಿಸಲಾಗಿದ್ದು, ಬಂಧಿತ ಆರೋಪಿಯನ್ನು ಕಟೀಲು ಸಮೀಪದ ಲಿಂಗಪ್ಪ (38) ಎಂದು ಹೆಸರಿಸಲಾಗಿದೆ.

ಆರೋಪಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಕುಡಿದ ಮತ್ತಿನಲ್ಲಿ ಆರೋಪಿಯು ಈ ಕೃತ್ಯ ಎಸಗಿದ್ದು, ಇದರಲ್ಲಿ ಇತರ ಕೆಲವರು ಶಾಮೀಲಾಗಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇ 7ರ ರಾತ್ರಿ ಈ ಕೊಲೆ ನಡೆದಿದೆ. ಆರೋಪಿಗಳು ಕುಡಿದ ಮತ್ತಿನಲ್ಲಿ ಕಲ್ಲಿನಿಂದ ಜಜ್ಜಿ, ಹೆಂಚಿನಿಂದ ಹೊಡೆದು ಮುಖದ ಗುರುತು ಸಿಗದಂತೆ ಕೊಲೆಗೈದು ಸಿಮೆಂಟ್ ಸ್ಲ್ಯಾಬೊಂದನ್ನು ಮೃತದೇಹದ ಮೇಲೆ ಇರಿಸಿ ಪರಾರಿಯಾಗಿದ್ದರು. ಪಾಂಡೇಶ್ವರ ಪೊಲೀಸರು ತನಿಖೆ ಮುಂದುವರಿಸಿದ್ದು, ಇತರ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Comments are closed.