ಕರಾವಳಿ

ಮಹಿಳೆಯರು ಮತ್ತು ಮಕ್ಕಳ ದೌರ್ಜನ್ಯ ತಡೆಯಲು ಮಂಗಳೂರಿಗೆ ಬಂದಿದೆ ‘ರಾಣಿ ಅಬ್ಬಕ್ಕ ಪಡೆ’

Pinterest LinkedIn Tumblr

ಮಂಗಳೂರು, ಎಪ್ರಿಲ್, 30: ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಮಂಗಳೂರು ನಗರದಲ್ಲೂ ರಾಣಿ ಅಬ್ಬಕ್ಕ ಮಹಿಳಾ ಗಸ್ತು ಪೊಲೀಸ್ ಪಡೆ ರಚನೆಯಾಗಿದ್ದು, ಮಂಗಳವಾರ ನಗರದ ಸಿಟಿ ಸೆಂಟರ್ ಮಾಲ್ ಎದುರು ಮಂಗಳೂರು ಪೊಲೀಸ್ ಕಮಿಷನರ್ ಡಾ. ಸಂದೀಪ್ ಪಾಟೀಲ್ ಅವರು ರಾಣಿ ಅಬ್ಬಕ್ಕ ಪಡೆ’ಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭ ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥಾ ವಿಭಾಗದ ಉಪಪೊಲೀಸ್ ಆಯುಕ್ತ ಹನುಮಂತರಾಯ, ನಗರ ಸಂಚಾರ ಮತ್ತು ಅಪರಾಧ ವಿಭಾಗ ಉಪಪೊಲೀಸ್ ಆಯುಕ್ತ ಲಕ್ಷ್ಮೀಗಣೇಶ್ ಉಪಸ್ಥಿತರಿದ್ದರು.

ಬೆಳಗಾವಿ ಪೊಲೀಸ್ ಇಲಾಖೆಯ ಚೆನ್ನಮ್ಮ ಪಡೆ, ಚಿತ್ರದುರ್ಗದ ಓಬವ್ವ ಪಡೆ ಮಾದರಿಯಲ್ಲಿ ಇನ್ನು ಮುಂದೆ ಮಂಗಳೂರಿನಲ್ಲಿಯೂ ಅಬ್ಬಕ್ಕ ಪಡೆ ಕಾರ್ಯಾಚರಣೆಗಿಳಿಯಲಿದೆ. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಹಿಳೆ ಮತ್ತು ಮಕ್ಕಳ ಸುರಕ್ಷತಾ ದೃಷ್ಟಿಯಿಂದ 50 ಮಂದಿ ಮಹಿಳಾ ಪೊಲೀಸರನ್ನೊಳಗೊಂಡ ‘ರಾಣಿ ಅಬ್ಬಕ್ಕ ಪಡೆ’ ಇಂದಿನಿಂದ ಕಾರ್ಯನಿರ್ವಾಹಿಸಲಿದೆ.

ರಾಣಿ ಅಬ್ಬಕ್ಕ ಪಡೆಯಲ್ಲಿರುವ ಮಫ್ತಿ ಮಹಿಳಾ ಪೊಲೀಸರು ಶಾಲಾ-ಕಾಲೇಜು, ಜನದಟ್ಟಣೆ ಪ್ರದೇಶಗಳು, ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಗಸ್ತು ತಿರುಗಲಿದ್ದಾರೆ. ನಗರದಲ್ಲಿರುವ ಜನನಿಬಿಡ ಪ್ರದೇಶಗಳಾದ ಮಾಲ್‌ಗಳು, ಕಾಲೇಜುಗಳು, ಪಾರ್ಕ್‌ಗಳು, ಬೀಚ್‌ಗಳು, ರೈಲ್ವೆ ನಿಲ್ದಾಣ, ಸೆಂಟ್ರಲ್ ಮಾರ್ಕೆಟ್ ಸೇರಿದಂತೆ ಕೆಲವು ಪ್ರದೇಶದಲ್ಲಿ ಈ ಡೆಯ ಸಿಬ್ಬಂದಿ ನಿಯೋಜಿಸಲಾಗುವುದು.

ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರ ಜತೆ ಅಸಭ್ಯ ವರ್ತನೆ, ಮಹಿಳೆಯರನ್ನು ಚುಡಾಯಿಸುವ, ಕೀಟಲೆ ಮಾಡುವ, ಅಶ್ಲೀಲ ಕಮೆಂಟ್, ಸರಗಳ್ಳತನ, ನೈತಿಕ ಪೊಲೀಸ್‌ಗಿರಿ, ಅಸಭ್ಯ ವರ್ತನೆ ಮಾಡುವವರನ್ನು ಹಿಡಿದು ಕ್ರಮ ಕೈಗೊಳ್ಳಲಿದ್ದಾರೆ. ವಾಹನದಲ್ಲಿ ಪಿಎಸ್ಸೈ ಸಹಿತ ಮೂವರು ಸಿಬ್ಬಂದಿ ಇರಲಿದ್ದು, ಇದರಲ್ಲಿ ಓರ್ವ ಪುರುಷ ಸಿಬ್ಬಂದಿಯೂ ಇರಲಿದ್ದಾರೆ.

ಪಿಎಸ್‌ಐ ಕಲಾಶ್ರೀ ಅವರು ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಕಮಿಷನರೇಟ್ ವ್ಯಾಪ್ತಿಯಲ್ಲಿ 50ಪ್ರದೇಶಗಳನ್ನು ಗುರುತಿಸಲಾಗಿದ್ದು, ಒಂದೊಂದು ಪಾಯಿಂಟ್‌ಗಳಲ್ಲಿ 3ರಿಂದ 5ಮಂದಿ ಕಾರ್ಯನಿರ್ವಹಿಸಲಿದ್ದಾರೆ. ಯಾವುದೇ ಅಪರಾಧ ಘಟನೆಗಳು ನಡೆದಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಆ ಪ್ರಕರಣ ದಾಖಲಾಗಲಿದೆ.

ವೀರರಾಣಿ ಉಳ್ಳಾಲದ ಅಬ್ಬಕ್ಕ ಪ್ರಥಮವಾಗಿ ಸ್ವಾತಂತ್ರ ಸಂಗ್ರಾಮಕ್ಕೆ ನಾಂದಿ ಹಾಡಿದ ತುಳುನಾಡಿನ ಧೀರ ಮಹಿಳೆ. ಪೋರ್ಚುಗೀಸರ ಸೇನೆಯನ್ನು ಸದೆಬಡಿದು ನಾಡನ್ನು ರಕ್ಷಿಸಿದ್ದಳು. ಬೆಳಗಾವಿ ಪೊಲೀಸ್ ಇಲಾಖೆಯ ಚೆನ್ನಮ್ಮ ಪಡೆ, ಚಿತ್ರದುರ್ಗದ ಓಬವ್ವ ಪಡೆ ಮಾದರಿಯಲ್ಲಿ ಮಂಗಳೂರಿ ನಲ್ಲಿ ಕಾರ್ಯಾಚರಿಸುವ ಪಡೆಗೆ ರಾಣಿ ಅಬ್ಬಕ್ಕನ ಹೆಸರನ್ನು ಬಳಸಿಕೊಳ್ಳಲಾಗಿದೆ. ಈ ಪಡೆಯು ಮಹಿಳೆಯರಲ್ಲಿ ಜಾಗೃತಿಯನ್ನೂ ಮೂಡಿಸುತ್ತದೆ.

Comments are closed.