ಕರಾವಳಿ

ಎಸೆಸೆಲ್ಸಿ ಫಲಿತಾಂಶ : ನಾಗಂಜಲಿ, ಸೃಜನಾ ರಾಜ್ಯಕ್ಕೆ ಪ್ರಥಮ – ದ.ಕ.ಜಿಲ್ಲೆಯ ಅನುಪಮಾ,ಚಿನ್ಮಯ,ಸಿಂಚನ ಲಕ್ಷ್ಮೀ ರಾಜ್ಯಕ್ಕೆ ದ್ವಿತೀಯ ಸ್ಥಾನ

Pinterest LinkedIn Tumblr

ಮಂಗಳೂರು, ಎಪ್ರಿಲ್.30 : ಈ ಬಾರಿಯ ರಾಜ್ಯ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಬಾಲಕಿಯರೇ ಮೇಲುಗೈ ಸಾಧಿಸಿದ್ದು, 79.59 ಶೇ. ಫಲಿತಾಂಶ ದಾಖಲಿಸಿದ್ದಾರೆ. ಬಾಲಕರು 68.46 ಶೇ. ಫಲಿತಾಂಶ ದಾಖಲಿಸಿದ್ದಾರೆ.

ಮಾರ್ಚ್ ತಿಂಗಳಲ್ಲಿ ನಡೆದ 2018-19ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯ ಉತ್ತರ ಕನ್ನಡ ಜಿಲ್ಲೆಯ ಕುಮುಟದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ವಿದ್ಯಾರ್ಥಿನಿ ನಾಗಂಜಲಿ ಪರಮೇಶ್ವರ ನಾಯ್ಕ ಹಾಗೂ ಆನೇಕಲ್ ತಾಲೂಕಿನ ಸೈಂಟ್ ಫಿಲೋಮಿನಾ ಶಾಲೆಯ ಸೃಜನಾ. ಡಿ ಇವರಿಬ್ಬರು ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಾಡ ಗ್ರಾಮದ ಹುಬ್ಬುಣಗೇರಿಯ ವಿದ್ಯಾರ್ಥಿನಿಯಾದ ನಾಗಾಂಜಲಿ ಪರಮೇಶ್ವರ್ ನಾಯ್ಕ 625 ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯದ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.ನಾಗಾಂಜಲಿ ಕುಮುಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಹೈಸ್ಕೂಲ್‌ ವಿದ್ಯಾರ್ಥಿನಿ. ಆಕೆಯ ತಂದೆ ವೃತ್ತಿಯಲ್ಲಿ ಟೆಂಪೋ ಡ್ರೈವರ್ ಎಂದು ತಿಳಿದುಬಂದಿದೆ.

ದ.ಕ.ಜಿಲ್ಲೆಯ ಅನುಪಮಾ,ಚಿನ್ಮಯ,ಸಿಂಚನ ಲಕ್ಷ್ಮೀ ರಾಜ್ಯಕ್ಕೆ ದ್ವಿತೀಯ ಸ್ಥಾನ

ಬಂಟ್ವಾಳದ ವಿದ್ಯಾಗಿರಿಯ ಎಸ್ ವಿ ಎಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅನುಪಮಾ ಕಾಮತ್, ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಚಿನ್ಮಯ, ಪುತ್ತೂರು ವಿವೇಕಾನಂದ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿನಿ ಸಿಂಚನ ಲಕ್ಷ್ಮೀ ಈ ಮೂವರು ವಿದ್ಯಾರ್ಥಿಗಳು 624 ಅಂಕಗಳನ್ನು ಪಡೆದು ರಾಜ್ಯಕ್ಕೆ ಧ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಬಂಟ್ವಾಳದ ವಿದ್ಯಾಗಿರಿಯ ಎಸ್ ವಿ ಎಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅನುಪಮಾ ಕಾಮತ್ ಅವರಿಗೆ ಕನ್ನಡ 125, ಗಣಿತ 100, ಸಮಾಜ 100, ಸಂಸ್ಕೃತ 100, ಇಂಗ್ಲಿಷ್ 100, ವಿಜ್ಞಾನದಲ್ಲಿ 99 ಅಂಕ ಗಳಿಸುವ ಮೂಲಕ ಒಟ್ಟು 625 ರಲ್ಲಿ 624 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈಕೆ ಬಿ.ಸಿ.ರೋಡಿನ ವೈದ್ಯ ದಂಪತಿ ಡಾ. ಅನುರಾದ ಕಾಮತ್ ಹಾಗೂ ಡಾ. ದಿನೇಶ್ ಕಾಮತ್ ಅವರ ಪುತ್ರಿ.

ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಚಿನ್ಮಯ ಗಣಿತ ವಿಷಯದಲ್ಲಿ 99 ಅಂಕ ಪಡೆದಿದ್ದು, ಇನ್ನುಳಿದ ಎಲ್ಲ ವಿಷಯಗಳಲ್ಲಿ ತಲಾ 100 ಶೇಕಡಾ ಅಂಕ ಗಳಿಸುವ ಮೂಲಕ ಒಟ್ಟು 625 ರಲ್ಲಿ 624ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈಕೆ ವಿಟ್ಲ ನಿವಾಸಿ ಗೀತಾ, ರಾಜನಾರಾಯಣ ದಂಪತಿ ಪುತ್ರಿ.

ಪುತ್ತೂರು ವಿವೇಕಾನಂದ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿನಿ ಸಿಂಚನ ಲಕ್ಷ್ಮೀ 624 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಧ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಸಿಂಚನ ಲಕ್ಷ್ಮೀ ಪುತ್ತೂರು ತಾಲೂಕಿನ ಮುಂಡೂರು ಬಂಗಾರಡ್ಕ ನಿವಾಸಿಯಾಗಿರುವ ಕೃಷಿಕ ಮುರಳೀಧರ ಭಟ್ ಹಾಗೂ ಶೋಭಾ ಎಂ.ಬಿ ದಂಪತಿಯ ಪುತ್ರಿ. ಇವರಿಗೆ ಸಣ್ಣ ಪ್ರಾಯದಲ್ಲಿಯೇ ಕುತ್ತಿಗೆಯಲ್ಲಿ ಎಲುಬಿನ ಹೆಚ್ಚುವರಿ ಬೆಳವಣಿಗೆಯಾಗಿದ್ದು, ಇದನ್ನು ಸರಿಪಡಿಸಲು ಕೊಯಂಬತ್ತೂರಿನಲ್ಲಿ ಸರ್ಜರಿಗಾಗಿ ತುಂಬಾ ಸಮಯ ಎಸೆಸೆಲ್ಸಿ ತರಗತಿ ಬಿಟ್ಟು ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಮಾಡಿಸಿಕೊಳ್ಳಬೇಕಾಗಿ ಬಂದಿತ್ತು.

Comments are closed.