ಕುಂದಾಪುರ: ಕೋಟೇಶ್ವರ ಬಳಿಯ ರಾಷ್ಟ್ರೀಯ ಹೆದ್ದಾರಿ-66 ಪಕ್ಕದ ರೋಶನಿ ಧಾಮದ ಕೊರಗ ಕಾಲನಿ ವಿದ್ಯಾರ್ಥಿನಿ ಪ್ರಶೀಲಾ ಎಸ್ಸೆಸ್‌ಎಲ್ಸಿ ಪಾಸಾಗುವ ಮೂಲಕ ಕಾಲನಿಯಲ್ಲಿ ಎಸ್ಸೆಸ್‌ಎಲ್ಸಿ ಪಾಸಾದ ಪ್ರಥಮ ಕೊರಗ ವಿದ್ಯಾರ್ಥಿನಿ ಎಂಬ ದಾಖಲೆ ಹೊಂದಿದ್ದಾಳೆ.
ಕೋಟೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ 9 ನೇ ತರಗತಿ ಮುಗಿಸಿ, ಎರಡು ತಿಂಗಳು 9ನೇ ತರಗತಿಗೆ ಹೋಗಿ ಪ್ರಶೀಲಾ ಕಾರಣಾಂತರದಿಂದ ಶಾಲೆ ಬಿಟ್ಟು ಮನೆಯಲ್ಲೇ ಉಳಿದಿದ್ದು, ಗೋಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸರಸ್ವತಿ ಜಿ.ಪುತ್ರನ್ ಹಾಗೂ ಸದಸ್ಯರು ಐಟಿಡಿಪಿ ಸಹಾಕರದಲ್ಲಿ ಇಬ್ಬರ ಶಿಕ್ಷಕರ ನೇಮಿಸಿ ಗ್ರಾಪಂ ಸಭಾಂಗಣದಲ್ಲಿ ಶಿಕ್ಷಣ ನೀಡುವ ಮೂಲಕ ಎಸ್ಸೆಸ್‌ಎಲ್ಸಿ ಪರೀಕ್ಷೆ ಬರೆಯಲು ಸಿದ್ದಗೊಳಿಸಿದ್ದರು.
ಪ್ರಶೀಲಾ ಸೇರಿ ರೋಶನಿ ಧಾಮದ ನಾಲ್ವರು ಎಸ್ಸೆಸ್‌ಎಲ್ಸಿ ಪರೀಕ್ಷೆ ಬರೆದಿದ್ದು, ಪ್ರಶೀಲಾ ಒಟ್ಟು 286 ಅಂಕ ಪಡೆದು ಉತ್ತೀರ್ಣಳಾಗಿದ್ದಾಳೆ. ಕೂಲಿ ಕೆಲಸ ಮಾಡುವ ಪ್ರಕಾಶ್ ಹಾಗೂ ಶೀಲಾ ಇಬ್ಬರು ಮಕ್ಕಳಲ್ಲಿ ಪ್ರಶೀಲ ಸಹೋದರ 9 ನೇ ತರಗತಿ ತನಕ ಶಾಲೆಗೆ ಹೋಗಿ ನಂತರ ಶಾಲೆ ತೊರೆದಿದ್ದಾನೆ. ಮುಂದೆ ಆರ್ಟ್ಸ್ ವಿಭಾಗದಲ್ಲಿ ಪದವಿ ಪಡೆದು ಸರ್ಕಾರಿ ಉದ್ಯೋಗ ಮಾಡುವ ಆಸೆ ಪ್ರಶೀಲಾಳದ್ದು. ಎಸ್ಸೆಸ್‌ಎಲ್ಸಿ ಪಾಸಾದ ಪ್ರಶೀಲಾ ಮನೆಗೆ ಗ್ರಾಪಂ ಅಧ್ಯಕ್ಷೆ ಸರಸ್ವತಿ ಜಿ.ಪುತ್ರನ್ ಭೇಟಿ ನೀಡಿ ವಿದ್ಯಾರ್ಥಿ ಕುಟುಂಬಕ್ಕೆ ಸಿಹಿ ಹಂಚಿ ಸಂಭ್ರಮಿಸಿದರು.
Comments are closed.