ಕರಾವಳಿ

ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ ಹಿನ್ನೆಲೆ : ದ.ಕ.ಜಿಲ್ಲೆಯಾದ್ಯಂತ ಕಟ್ಟೆಚ್ಚರ : ಜನಸಂದಣಿ ಸ್ಥಳಗಳಲ್ಲಿ ವ್ಯಾಪಕ ಬಂದೋಬಸ್ತ್

Pinterest LinkedIn Tumblr

ಮಂಗಳೂರು, ಎಪ್ರಿಲ್, 26: ಶ್ರೀಲಂಕಾದಲ್ಲಿ ಕಳೆದ ರವಿವಾರ ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ನಗರ ಸುತ್ತಮುತ್ತಲಿನ ಪ್ರಮುಖ ದೇವಸ್ಥಾನ, ಚರ್ಚ್, ಮಸೀದಿಗಳು, ಉದ್ಯಮ ಸಂಸ್ಥೆಗಳಾದ ಒಎನ್‌ಜಿಸಿ ಎಂಆರ್‌ಪಿಎಲ್, ನವಮಂಗಳೂರು ಬಂದರು, ವಿಮಾನ ನಿಲ್ದಾಣ, ಮಾಲ್‌ಗಳು ಸೇರಿದಂತೆ ಅಧಿಕ ಸಂಖ್ಯೆಯಲ್ಲಿ ಜನಸೇರುವ ಸ್ಥಳಗಳಲ್ಲಿ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಇದೇ ವೇಳೆ ನಗರದ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಅಧ್ಯಕ್ಷತೆಯಲ್ಲಿ ಪ್ರಮುಖ ಧಾರ್ಮಿಕ ಕೇಂದ್ರಗಳು, ಉದ್ಯಮ ಸಂಸ್ಥೆಗಳು ಮತ್ತು ಮಾಲ್‌ಗಳಲ್ಲಿ ಹಾಗೂ ಜನಸಂದಣಿ ಇರುವ ತಾಣಗಳಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿಶೇಷ ಸಭೆ ಕರೆಯಲಾಗಿದ್ದು, ಸಲಹೆ ಸೂಚನೆಗಳನ್ನು ಪಡೆಯಲಾಗಿದೆ.

ಸಭೆಯಲ್ಲಿ ನಗರ ಸುತ್ತಮುತ್ತಲಿನ ಪ್ರಮುಖ ದೇವಸ್ಥಾನ, ಚರ್ಚ್, ಮಸೀದಿಗಳು, ಉದ್ಯಮ ಸಂಸ್ಥೆಗಳಾದ ಒಎನ್‌ಜಿಸಿ ಎಂಆರ್‌ಪಿಎಲ್, ನವಮಂಗಳೂರು ಬಂದರು, ವಿಮಾನ ನಿಲ್ದಾಣ, ಮಾಲ್‌ಗಳು ಮತ್ತಿತರ ಸಂಸ್ಥೆಗಳ ಆಡಳಿತಾಧಿಕಾರಿಗಳು ಮತ್ತು ಪ್ರತಿನಿಧಿಗಳು ಪಾಲ್ಗೊಂಡಿದ್ದರು .ಡಿಸಿಪಿಗಳಾದ ಹನುಮಂತರಾಯ ಮತ್ತು ಲಕ್ಷ್ಮೀ ಗಣೇಶ್ ಮತ್ತಿತರ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ದೇವಸ್ಥಾನ, ಮಸೀದಿ, ಚರ್ಚ್‌ಗಳ ಆವರಣ ಗೋಡೆಯನ್ನು ಭದ್ರ ಪಡಿಸುವುದು, ದ್ವಾರ ಅಥವಾ ಗೇಟ್‌ಗಳನ್ನು ಬಲಪಡಿಸುವುದು, ಸಿಸಿ ಕ್ಯಾಮರಾ ಮತ್ತು ಲೋಹ ಶೋಧಕ ಅಳವಡಿಸುವುದು, ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡುವುದು ಇತ್ಯಾದಿ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಪೊಲೀಸ್ ಆಯುಕ್ತರು ಸಲಹೆಗಳನ್ನು ನೀಡಿದ್ದಾರೆ.

ಅಪರಿಚಿತರು ಅಥವಾ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ಅವರ ಬಗ್ಗೆ ಹೆಚ್ಚು ನಿಗಾ ವಹಿಸಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದ ಕಮಿಷನರ್ ಅಗತ್ಯ ಬಿದ್ದರೆ ಪೊಲೀಸರು ಯಾವುದೇ ಸಮಯದಲ್ಲೂ ನೆರವು ನೀಡಲು ಬದ್ಧರಾಗಿದ್ದಾರೆ ಎಂದು ಕಮಿಷನರ್ ಹೇಳಿದ್ದಾರೆ.

Comments are closed.